ಗಂಗಾವತಿ: ನಗರ ಸೇರಿ ತಾಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮಕ್ಕಳು ಶಾಲೆ ಬಿಟ್ಟು ಭಿಕ್ಷಾಟನೆ ಮಾಡುತ್ತಿದ್ದು,ಇದನ್ನು ತಡೆಯಬೇಕಾದ ವಿವಿಧ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.
ನಗರದ ಕೇಂದ್ರ ಬಸ್ ನಿಲ್ದಾಣ, ಸಿಬಿಎಸ್ ವೃತ್ತ, ಗಂಜ್ ಇಂದಿರಾ ಗಾಂಧಿ ವೃತ್ತ ಮತ್ತು ತಾಲೂಕಿನ ಕಿಷ್ಕಿಂದಾ ಅಂಜನಾದ್ರಿಬೆಟ್ಟ, ಪಂಪಾ ಸರೋವರ, ಆದಿಶಕ್ತಿ ಮಂದಿರ, ವಿರೂಪಾಪೂರಗಡ್ಡಿ ಪ್ರದೇಶದಲ್ಲಿ ಶಾಲೆ ಬಿಟ್ಟ ಮಕ್ಕಳು ವ್ಯಾಪಕವಾಗಿ ಭಿಕ್ಷಾಟನೆ ಮಾಡುವ ದಂಧೆಯಲ್ಲಿ ತೊಡಗಿದ್ದು ಇದಕ್ಕೆ ಪಾಲಕರೇ ಕಾರಣರಾಗಿದ್ದಾರೆ. ಕನಕಗಿರಿ, ಸಿದ್ದಾಪೂರ, ತಾವರಗೇರಾ, ಕಂಪ್ಲಿ, ಶ್ರೀರಾಮ ನಗರಗಳಿಂದ ಪ್ರತಿದಿನ ಬೆಳಗ್ಗೆ ಗಂಗಾವತಿ ಸೇರಿ ಸುತ್ತಲಿನ ಪ್ರದೇಶಗಳಿಗೆ ಆಗಮಿಸುವ 8ರಿಂದ 16 ವರ್ಷದೊಳಗಿನ ಮಕ್ಕಳು ಬೆಳಗ್ಗೆಯಿಂದ ಸಂಜೆವರೆಗೆ ಭಿಕ್ಷೆ ಬೇಡಿ ಹಣ ಸಂಪಾದಿಸುತ್ತಿದ್ದಾರೆ.
ಪ್ರತಿ ಅಂಗಡಿಗಳಿಗೆ ಹೋಗುವ ಭಿಕ್ಷೆ ಬೇಡುವ ಮಕ್ಕಳು ಪ್ರತಿದಿನ 200ರಿಂದ 500 ರೂ. ವರೆಗೆ ಹಣ ಸಂಪಾದನೆ ಮಾಡಿ ಪಾಲಕರಿಗೆಕೊಡಬೇಕಿದೆ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ಊರಿಗೆ ಶಾಲೆ, ಅಂಗನವಾಡಿ ಆರಂಭಿಸಿದ್ದರೂ ಭಿಕ್ಷೆ ಬೇಡುವ ಮಕ್ಕಳು ಶಾಲೆ ಕಡೆ ಮುಖ ಮಾಡುತ್ತಿಲ್ಲ. ಪ್ರತಿದಿನ 25-30 ಮಕ್ಕಳು ಭಿಕ್ಷಾಟನೆ ಮಾಡುತ್ತಿದ್ದಾರೆ. ಪ್ರತಿ ಬಾರಿ ಮಕ್ಕಳ ಗಣತಿ ಸಂದರ್ಭದಲ್ಲಿ ಈ ಮಕ್ಕಳ ಗಣತಿಯಾಗುತ್ತದೆ. ಪಾಲಕರು ಮಾತ್ರ ಮಕ್ಕಳನ್ನು ಶಾಲೆ ಕಳಿಸದೇ ಭಿಕ್ಷೆ ಬೇಡಲು ಕಳುಹಿಸುತ್ತಾರೆ. ಭಿಕ್ಷಾಟನೆ ಮಾಡುವ ಮಕ್ಕಳು ಬಾಲಾಪರಾಧಿ ಗಳಾಗಿ ಇಡೀ ಸಮಾಜಕ್ಕೆ ಕಂಟಕ ಪ್ರಾಯರಾಗುತ್ತಾರೆ. ಇದನ್ನು ಹೋಗಲಾಡಿಸಲು ಯುಸೆಸ್ಕೋ ಭಾರತದಲ್ಲಿ ಭಿಕ್ಷಾಟನೆ ಮಾಡುವ ಮಕ್ಕಳಿಗೆ ಪುನರ್ ವಸತಿ ಕಲ್ಪಿಸಲು ಯೋಜನೆ ರೂಪಿಸಿ ಅನುದಾನ ಬಿಡುಗಡೆ ಮಾಡಿದ್ದು ಯೋಜನೆ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ.
ತಾಲೂಕಿನ ಖ್ಯಾತ ಪ್ರವಾಸಿ ತಾಣಗಳಾದ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ಆನೆಗೊಂದಿ ನವವೃಂದಾವನ, ಚಿಂತಾಮಣಿ, ಶ್ರೀರಂಗನಾಥ ಗುಡಿ, ಶಬರಿ ಗುಹೆ ಋಷಿಮುಖ ಪರ್ವತ ವಿರೂಪಾಪೂರಗಡ್ಡಿ ಪ್ರದೇಶಕ್ಕೆ ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿಯೂ ಭಿಕ್ಷುಕರ ಕಾಟ ತೀವ್ರವಾಗಿದ್ದು ಕೆಲವೊಮ್ಮೆ ಪ್ರವಾಸಿಗರು ಮುಜುಗರಕ್ಕೊಳಗಾಗುವ ಸನ್ನಿವೇಶಗಳು ನಡೆಯುತ್ತವೆ. ಭಿಕ್ಷಾಟನೆ ಅಪರಾಧವಾಗಿದ್ದರೂ ಈ ಕೆಟ್ಟ ದಂಧೆಯಿಂದ ಮಕ್ಕಳನ್ನು ಹೊರಗೆ ತರುವಲ್ಲಿ ಅ ಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ.
ಭಿಕ್ಷೆ ಬೇಡುವ ಮಕ್ಕಳನ್ನು ಪಾಲಕರ ಮನವೊಲಿಸಿ ಮಕ್ಕಳ ಕಲ್ಯಾಣ ಮತ್ತು ಪುನರ್ವಸತಿ ಕೇಂದ್ರಗಳಿಗೆ ಕಳಿಸಲು ಯೋಜನೆ ಇದ್ದರೂ ಯಾವ ಅಧಿಕಾರಿಗಳು ಮನಸ್ಸಿಗೆ ಹಚ್ಚಿಕೊಂಡು ಕೆಲಸ ಮಾಡುತ್ತಿಲ್ಲ. ಕಾರ್ಮಿಕ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಮತ್ತು ಶಿಕ್ಷಣ ಇಲಾಖೆ ಮತ್ತು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಿಕ್ಷಾಟನೆ ಮಾಡುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಯೋಜನೆ ಇದೆ. ಈ ಯೋಜನೆ ಅನುಷ್ಠಾನಕ್ಕೆ ವಿವಿಧ ಇಲಾಖೆ ಅಧಿ ಕಾರಿಗಳು ಮನಸ್ಸು ಮಾಡುತ್ತಿಲ್ಲ. ಭಿಕ್ಷಾಟನೆ ಮಾಡಲು ವಿವಿಧ ಊರುಗಳಿಂದ ಆಗಮಿಸುವ ಮಕ್ಕಳನ್ನು ಅಧಿಕಾರಿಗಳು ಪತ್ತೆ ಮಾಡಿ ಅವರ ಪಾಲಕರ ಮನಪರಿವರ್ತಿಸುವ ಮೂಲಕ ಮಕ್ಕಳನ್ನು ಭಿಕ್ಷಾಟನೆಯ ಪಿಡುಗಿನಿಂದ ತಪ್ಪಿಸಲು ಸಾಧ್ಯವಿದ್ದು, ಸ್ಥಳೀಯ ಅಧಿಕಾರಿಗಳು ಮತ್ತು ಪುನರ್ವಸತಿ ಕೇಂದ್ರದ ಅಧಿಕಾರಿಗಳು ನಿರಂತರ ಕಾರ್ಯಚರಣೆ ಮಾಡಬೇಕಿದೆ.
ಭಿಕ್ಷಾಟನೆ ದೊಡ್ಡ ಅಪರಾಧ. ಮಕ್ಕಳು ಭಿಕ್ಷೆ ಬೇಡುವ ಪದ್ಧತಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ಗಂಗಾವತಿ ಸುತ್ತಲಿನ ಪ್ರವಾಸಿ ತಾಣಗಳ ಹತ್ತಿರ ಭಿಕ್ಷೆ ಬೇಡದಂತೆ ಜಾಗೃತಿ ಮೂಡಿಸಲಾಗಿದೆ. ಹಲವು ಭಾರಿ ಭಿಕ್ಷುಕರನ್ನು ಬಳ್ಳಾರಿ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಮಕ್ಕಳು ಭಿಕ್ಷೆ ಬೇಡದಂತೆ ತಡೆಯಲು ಪಾಲಕರಿಗೆ ಜಾಗೃತಿ ಮೂಡಿಸಲಾಗುತ್ತದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜತೆ ಮಾತನಾಡಿ ಭಿಕ್ಷಾಟನೆ ತಡೆಯಲಾಗುತ್ತದೆ.
-ಗಂಗಪ್ಪ, ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ
-ಕೆ.ನಿಂಗಜ್ಜ