Advertisement

ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ  ಕಲಿಸಿ: ಉದಾಸಿ

05:33 PM Jun 21, 2018 | |

ಹಾನಗಲ್ಲ: ತಾಯಿಯ ಸಂಸ್ಕಾರದಿಂದಲೇ ಆರಂಭವಗುವ ಶಿಕ್ಷಣ, ಶಾಲೆಗಳನ್ನು ಪ್ರವೇಶಿಸಿದ ಆರಂಭದಲ್ಲಿಯೇ ಸರಿಯಾದ ಶೈಕ್ಷಣಿಕ ಮಾರ್ಗದರ್ಶನ ಮಕ್ಕಳಿಗೆ ದೊರೆತರೆ ಭವಿಷ್ಯದಲ್ಲಿ ಉಜ್ವಲ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.

Advertisement

ಹಾನಗಲ್ಲ ತಾಲೂಕಿನ ಇನಾಂನೀರಲಗಿ ಹಾಗೂ ಸಮ್ಮಸಗಿ ಗ್ರಾಮಗಳ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಗಳು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿವೆ. ಕಲಿಕೆಗೆ ಸಹಕಾರಿಯಾಗಲು ಹತ್ತು ಹಲವು ರೀತಿಯ ಸೌಲಭ್ಯ ನೀಡುತ್ತಿವೆ. ಪಾಲಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಬೇಕು. ಗುಣಮಟ್ಟದ ಶಿಕ್ಷಣ ವ್ಯವಹಾರಿಕ ಜ್ಞಾನ ನೀಡಿದರೆ ಸಂಸ್ಕಾರ ಉತ್ತಮ ಪ್ರಜೆಯನ್ನಾಗಿ ನಿರ್ಮಿಸಬಲ್ಲದು ಎಂದರು.

ಬದಲಾದ ಕಾಲದಲ್ಲಿ ತಾಂತ್ರಿಕತೆಗೆ ಹೆಚ್ಚಿನ ಪ್ರಾಶಸ್ತ್ಯವಿದ್ದು ಕಾಲಕ್ಕೆ ಹೊಂದಿಕೊಳ್ಳುವ ಹಾಗೆ ಶೈಕ್ಷಣಿಕ ಉನ್ನತಿಯೂ ಬೇಕಾಗುತ್ತದೆ. ಅದಕ್ಕಾಗಿ ಮಕ್ಕಳನ್ನು ಮಾನಸಿಕವಾಗಿ, ಬೌದ್ಧಿಕವಾಗಿ ಸಿದ್ಧಗೊಳಿಸುವುದು ಪಾಲಕರು ಹಾಗೂ ಶಿಕ್ಷಕರ
ಜವಾಬ್ದಾರಿ. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಆಯ್ಕೆಯೂ ಸ್ಪರ್ಧಾತ್ಮಕವಾಗಿದೆ. ಅಲ್ಲದೆ ಶಿಕ್ಷಕರಾದವರು ತಮ್ಮ ಬೌದ್ಧಿಕ ಶಕ್ತಿಯನ್ನು ಮಕ್ಕಳಿಗೆ ಧಾರೆ ಎರೆಯಬೇಕು. ಸರಕಾರ ಸೌಲಭ್ಯಗಳನ್ನು ನೀಡಬಹುದೇ ಹೊರತು ಶಿಕ್ಷಣ ನೀಡಬೇಕಾದವರು ಶಿಕ್ಷಕರೇ ಎಂಬುದನ್ನು ಮನಗಾಣಬೇಕು ಎಂದು ತಿಳಿಸಿದರು. 

40 ವರ್ಷಗಳಿಂದ ದೇಶದಲ್ಲಿ ಸಾಧ್ಯವಾಗದ ಅಭಿವೃದ್ಧಿ ಯೋಜನೆಯನ್ನು ಪ್ರಧಾನಿ ಮೋದಿ ಸರಕಾರ ಮಾಡಿದೆ, ಕೇವಲ 12 ರೂ. ಕಂತುಗಳಲ್ಲಿ 36 ಕೋಟಿ ಜನರಿಗೆ ಜೀವ ವಿಮೆ, ಜನಧನ್‌, ಆಯುಷ್ಯಭಾಗ್ಯ, ಉಜ್ವಲ್‌, ಮುದ್ರಾ, ಫಸಲ್‌ ಬಿಮಾ ಯೋಜನೆ, ದಿನದಯಾಳ ಉಪಾಧ್ಯಾಯ ಗ್ರಾಮ ಯೋಜನೆ ಹಾಗೂ ವಿದ್ಯುತ್‌ ಸಂಪರ್ಕ ಯೋಜನೆ ಸೇರಿದಂತೆ ಹತ್ತು ಹಲವು ವಿಭಿನ್ನ ಯೋಜನೆಗಳನ್ನು ಮೋದಿಯವರ ನೇತೃತ್ವದ ಸರಕಾರ ಮಾಡಿದೆ ಎಂದು ಹೇಳಿದರು.

ಜಿಪಂ ಸದಸ್ಯ ರಾಘವೇಂದ್ರ ತಹಶೀಲ್ದಾರ ಮಾತನಾಡಿ, ಅಂಗನವಾಡಿಗಳು ಮಕ್ಕಳ ಶಿಕ್ಷಣದ ಮೊದಲ ಹಂತದ ಮಾರ್ಗದರ್ಶಕ ಶಾಲೆಗಳಾಗಿವೆ. ಇಲ್ಲಿಂದಲೇ ಮಕ್ಕಳಿಗೆ ಸ್ವಚ್ಛತೆ ಹಾಗೂ ಉತ್ತಮ ಸಂಸ್ಕಾರಕ್ಕೆ ಬುನಾದಿ ಹಾಕಬೇಕು. ಇದಕ್ಕಾಗಿ ಅಂಗನವಾಡಿಗಳ ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ನೀಡುವುದು ಮೊದಲ ಆದ್ಯತೆಯಾಗಬೇಕು ಎಂದರು.

Advertisement

ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಕಾಡಣ್ಣನವರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಸಿದ್ದನಗೌಡ ಪಾಟೀಲ, ರಾಜಣ್ಣ ಪಟ್ಟಣದ, ಬಸವರಾಜ ಪುರ್ಲಿ, ಉಪಾಧ್ಯಕ್ಷ ಶೇಖಣ್ಣ ಈಳಿಗೇರ, ಹುಸೇನಮಿಯ್ನಾ ಬಿಳಗಲಿ, ವನಜಾಕ್ಷಿ ಸಾಗರವಳ್ಳಿ, ಹನುಮಂತ ಕೋಣನಕೊಪ್ಪ, ಬಸಣ್ಣ ಈಳಿಗೇರ, ನಾಗರಾಜ ಪಾಟೀಲ, ಸಂತೋಷ ಮಡಿವಾಳರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್‌.ಜಿ.ಶಶಿಧರ, ಸಿಡಿಪಿಒ ವಿದ್ಯಾಬಡಿಗೇರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next