Advertisement
ಬಾಲ್ಯಕಾಲದ ಪ್ರತಿಕೂಲ ಪರಿಸ್ಥಿತಿಗಳು (ಎಸಿಇಗಳು) ಆರೋಗ್ಯ ಅಪಾಯಗಳು ಮತ್ತು ಕಾಯಿಲೆಗಳು ಉಂಟಾಗುವುದಕ್ಕೆ ಕಾರಣವಾಗಬಲ್ಲ ಸಂಕೀರ್ಣ ವರ್ತನಾತ್ಮಕ ಶೈಲಿಗಳನ್ನು ಹೇಗೆ ರೂಪಿಸಬಲ್ಲವು ಎಂಬುದಕ್ಕೆ ಒಂದು ಉದಾಹರಣೆಯನ್ನು ಗಮನಿಸೋಣ.
Related Articles
Advertisement
1998ರಲ್ಲಿ ನಡೆಸಲಾಗಿರುವ “ದ ಅಡ್ವರ್ಸ್ ಚೈಲ್ಡ್‌ಹುಡ್ ಎಕ್ಸ್‌ಪೀರಿಯೆನ್ಸಸ್ (ಎಸಿಇ) ಅಧ್ಯಯನವು ಬಾಲ್ಯಕಾಲದಲ್ಲಿ ಎದುರಿಸಿರಬಹುದಾದ ನಿಂದನೆ ಮತ್ತು ನಿರ್ಲಕ್ಷ್ಯಗಳ ಸಹಿತ ಆಘಾತಕಾರಿ ಘಟನೆಗಳು ಹಾಗೂ ಹೃದ್ರೋಗಗಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಂತಹ ದೀರ್ಘಕಾಲೀನ ಅನಾರೋಗ್ಯಗಳ ನಡುವೆ ಕಳವಳಕಾರಿ ಸಂಬಂಧ ಇರುವುದನ್ನು ಬಹಿರಂಗಪಡಿಸಿದೆ. ಉದಾಹರಣೆಗೆ, ಬಾಲ್ಯಕಾಲದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರತಿಕೂಲ ಅನುಭವಗಳನ್ನು ಹೊಂದಿದವರು ಹೃದ್ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು ಇತರರಿಗಿಂತ ಎರಡು ಪಟ್ಟು ಹೆಚ್ಚು. ಇಂತಹವರಿಗೆ ಶೀಘ್ರ ರೋಗಪತ್ತೆ, ಚಿಕಿತ್ಸೆ ಮತ್ತು ನೆರವು ಬಹಳ ಅಗತ್ಯವಿರುತ್ತದೆ ಎಂಬುದನ್ನು ಇದು ಒತ್ತಿಹೇಳುತ್ತದೆ.
ತೆಗಳಿಕೆ, ದೈಹಿಕ ದೌರ್ಜನ್ಯ, ಹೆತ್ತವರ ಬೆಂಬಲ ನಷ್ಟವಾಗುವುದು, ಸಾಮಾಜಿಕ-ಆರ್ಥಿಕ ಸಂಕಷ್ಟಗಳು ಮತ್ತು ಕೌಟುಂಬಿಕ ಕಲಹಗಳು ಮಗು ಅಥವಾ ಹದಿಹರಯದವರನ್ನು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಅಪಾಯಕ್ಕೆ ಈಡು ಮಾಡಬಹುದಾಗಿದೆ. ಇಂತಹ ಪರಿಸ್ಥಿತಿಗಳು ಮಾದಕ ದ್ರವ್ಯ ವ್ಯಸನ, ಸುರಕ್ಷಿತವಲ್ಲದ ಜೀವನ ಶೈಲಿ ಆಯ್ಕೆಗಳು ಮತ್ತು ಅಪಾಯಕಾರಿ ಪ್ರವೃತ್ತಿಗಳಂತಹ ಅನಾಹುತಕಾರಿ ನಿಭಾವಣ ತಂತ್ರಗಳ ಮೊರೆಹೋಗುವಂತೆ ಮಾಡುತ್ತವೆ. ಇದರಿಂದಾಗಿ ಮಾನಸಿಕ ಮತ್ತು ದೈಹಿಕ – ಎರಡೂ ವಿಧವಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಅಪಾಯವಿರುತ್ತದೆ.
ಬಾಲ್ಯಕಾಲದಲ್ಲಿ ಲೈಂಗಿಕ ದೌರ್ಜನ್ಯಗಳಿಗೆ ತುತ್ತಾಗುವುದರಿಂದ ವ್ಯಕ್ತಿಯ ಚಿತ್ತವೃತ್ತಿಗೆ ಗಂಭೀರವಾದ ಆಘಾತ ಉಂಟಾಗುವ ಸಾಧ್ಯತೆಗಳಿದ್ದು, ವರ್ಷಾನುಗಟ್ಟಲೆ ಅವರು ಇದರಿಂದ ಸಂಕಷ್ಟವನ್ನು ಅನುಭವಿಸುವಂತಾಗುತ್ತದೆ. ಇದರಿಂದಾಗಿ ಅವರ ಸಂಬಂಧಗಳು, ಸ್ವಪ್ರತಿಷ್ಠೆ, ಆಹಾರ ಕ್ರಮ ಮತ್ತು ಲೈಂಗಿಕ ವರ್ತನೆಯ ಮೇಲೂ ಪರಿಣಾಮ ಉಂಟಾಗಬಲ್ಲುದು. ಇಂತಹ ಅನುಭವಕ್ಕೆ ಒಳಗಾಗುವ ಮಕ್ಕಳು ಮತ್ತು ಹದಿಹರಯದವರು ಪಿಟಿಎಸ್‌ಡಿ, ಒತ್ತಡಕ್ಕೆ ಸಂಬಂಧಿಸಿದ ಅನಾರೋಗ್ಯಗಳು, ಖನ್ನತೆ ಮತ್ತು ಚಿಂತೆಯಂತಹ ಮಾನಸಿಕ ಅನಾರೋಗ್ಯಗಳಿಗೆ ತುತ್ತಾಗುವ ಸಾಧ್ಯತೆಗಳಿವೆ.
ತಾವೇ ದೂಷಣೆಗೆ ಒಳಗಾಗುವ ಅಥವಾ “ದುರ್ಬಲ ಮನಸ್ಸಿನವರು’ ಎಂಬ ಹಣೆಪಟ್ಟಿ ಕಟ್ಟಿಸಿಕೊಳ್ಳುವ ಹೆದರಿಕೆಯಿಂದಾಗಿ ಇಂಥವರಲ್ಲಿ ಅನೇಕರು ತಮಗಾಗಿರುವ ಕೆಟ್ಟ ಅನುಭವಗಳನ್ನು ವೈದ್ಯರು ಅಥವಾ ಆಪ್ತಸಮಾಲೋಚಕರ ಜತೆಗೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಇಂತಹ ಆಘಾತಗಳೇ ಅವರನ್ನು ಗುಣಮುಖರಾಗುವುದರಿಂದ ಅಥವಾ ಇತರರ ಮೇಲೆ ವಿಶ್ವಾಸವಿರಿಸುವುದರಿಂದ ತಡೆಯುತ್ತವೆ.
–ಮುಂದಿನ ವಾರಕ್ಕೆ
-ಡಾ| ಅವಿನಾಶ್ ಜಿ. ಕಾಮತ್
ಮಕ್ಕಳು ಮತ್ತು ಹದಿಹರಯದವರ ಮನಶ್ಶಾಸ್ತ್ರಜ್ಞರು
ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಂಗಳೂರು)