Advertisement

ಬಾಲ್ಯದ ನೆನಪು

06:00 AM Oct 12, 2018 | |

ಗೆಳತಿಯನ್ನು ಕಾಯುತ್ತಾ ಬಸ್‌ಸ್ಟಾಪ್‌ನಲ್ಲಿ  ಕುಳಿತಿದ್ದಾಗ ಪಕ್ಕದಲ್ಲೇ ಕೂತಿದ್ದ ಆ ಮಹಿಳೆಯರ ಮಾತುಕತೆ ಕಿವಿಗೆ ಬಿದ್ದಿತ್ತು. ಅವರಿಬ್ಬರು ತಮ್ಮ ಮಕ್ಕಳ ಬಗೆಗೆ ಮಾತನಾಡಿಕೊಳ್ಳುತ್ತಿದ್ದರು. ಮೊದಲನೇ ಮಹಿಳೆ: “ಅದೆಷ್ಟು ಚೂಟಿ ಆಗಿದ್ದಾನೆ ಕಣೆ ನಿನ್‌ ಮಗ, ಆವಾಗ್ಲೆ ಸೆಲ್‌ಫೋನ್‌ ಯೂಸ್‌ ಮಾಡೋಕೂ ಬರುತ್ತೆ’. ಎರಡನೆಯ ಮಹಿಳೆ: “ಅಷ್ಟೇ ಅಲ್ವೇ, ಅದರಲ್ಲಿರೋ ಆ್ಯಪ್‌ನ ಬಳಸೋಕೂ ಬರುತ್ತೆ ಅವನಿಗೆ. ಅಪ್‌ಲೋಡ್‌-ಡಿಲೀಟ್‌ ಎಲ್ಲಾ ಮಾಡ್ತಾನೆ’.
ನನ್ನ ಕಂಗಳು ಪಕ್ಕದಲ್ಲಿ ಕೂತಿದ್ದ ಆ ಪುಟಾಣಿ ಹುಡುಗನತ್ತ ಹೊರಳಿತು. ಸುಮಾರು 5ರಿಂದ 6 ವಯಸ್ಸಾಗಿರಬಹುದು. “ಭೇಷ್‌’ ಅನ್ನಿಸಿ ಬಿಡು¤ ಒಂದು ಕ್ಷಣ. ಅದು ಯಾಕೋ ಗೊತ್ತಿಲ್ಲ , ಇತ್ತೀಚೆಗೆ ಕಾಣುವ ಪ್ರತೀ ಚಿತ್ರಣದೊಳಗೂ ಚಿಂತನೆಯನ್ನು ಹುಡುಕುವುದಕ್ಕೆ ಹೊರಡುತ್ತೇನೆ ನಾನು. ಇಲ್ಲೂ ಅಂಥದ್ದೇ ಚಿಂತನೆಯತ್ತ ತೆರೆದುಕೊಂಡಿದ್ದೆ.

Advertisement

ಒಂದು ಕ್ಷಣ ನಮ್ಮ ಆಗಿನ ಬಾಲ್ಯದ ದಿನಗಳತ್ತ ಮನಸ್ಸು ಜಾರಿತ್ತು. ಬರೀ ದಶಕಗಳ ಅಂತರದ ದಿನಗಳವು. ಅಲ್ಲಿ ಈಗಿರೋ ಹಾಗೆ ಸೆಲ್‌ಫೋನ್‌, ಟಿವಿ, ಇಂಟರ್‌ನೆಟ್‌ಗಳ ಹಾವಳಿಗಳಿರದ ಬದುಕದು. ಅಲ್ಲೇನಿದ್ದರೂ ಸಮಯ ಕಳೆಯಲು ಅನ್ನುವುದಕ್ಕಿಂತ ಸಮಯದ ಅಭಾವವೇ ಜಾಸ್ತಿಯಿತ್ತು ಅಂದರೂ ತಪ್ಪಲ್ಲ. ಯಾಕೆಂದರೆ, ಮುಗಿಸಿದರೂ ಮುಗಿಯದಂಥ ಸಾಲು ಸಾಲು ಹೊರಾಂಗಣ ಆಟಗಳು, ಎಣಿಸುವುದಕ್ಕಾಗದಷ್ಟೂ ಗುಂಪಲ್ಲಿದ್ದ ಅಕ್ಕಪಕ್ಕದ ಗೆಳೆಯರ ಬಳಗ, ಸಮಯದ ಪರಿವೇ ಇರದಂತೆ ಅಲೆದಾಡುತ್ತಿದ್ದ ಕೆರೆ-ಗುಡ್ಡ-ಮೈದಾನಗಳು, ಸದಾಕಾಲ ಸುತ್ತಲೂ ಇರುತ್ತಿದ್ದ ಸಮೀಪದ ಸಂಬಂಧಿಕರ ಮನೆಗಳು, ಹಸಿವಾದರೆ ತಿನ್ನೋಕೆ ನಾವೇ ಸಾಹಸಪಟ್ಟು ಕೊಯ್ದು ತಿನ್ನುತ್ತಿದ್ದ ಮಾವು-ಪೇರಳೆ-ಹೆಬ್ಬಲಸು-ಜಂಬೂ ನೇರಳೆ ಮೊದಲಾದ ಕಾಡು ಹಣ್ಣುಗಳು.

ಅಂದು ಅಲ್ಲಿ ಪಿಜ್ಜಾ-ಬರ್ಗರ್‌-ನೂಡಲ್ಸ್‌ಗಳೆನ್ನುವ ಕಲ್ಪನೆಗಳೇ ಇರದಂಥ ಸುಂದರ ದೇಶಿ ಸೊಗಡಿನ ರಂಗಿನ ಬಾಲ್ಯವದು. ಬೇವು-ಬೆಲ್ಲದ ಯುಗಾದಿ, ಬಣ್ಣಗಳ ಹೋಳಿ, ಪಟಾಕಿ ಸದ್ದಿನ ದೀಪಾವಳಿ, ಸಂಭ್ರಮದ ಗಣೇಶ ಚೌತಿ. ಮಣ್ಣು ಮೆತ್ತಿಕೊಂಡೆೇ ಇರುತ್ತಿದ್ದ ನಮ್ಮಗಳ ಬಟ್ಟೆಗಳೇ ಬಾಲ್ಯದ ಹರುಷಕ್ಕೆ ಸಾಕ್ಷಿ.

ಆದರೀಗ…
ಮಕ್ಕಳನ್ನು ನಾಲ್ಕು ಗೋಡೆಯ ಮಧ್ಯೆ ಕೂಡಿಹಾಕಿ ಇಂಟರ್‌ನೆಟ್‌, ಮೊಬೈಲ್‌, ವಿಡಿಯೋ ಗೇಮ್‌, ಫೇಸ್‌ಬುಕ್‌, ವಾಟ್ಸಾಪ್‌ಗ್ಳೆಂಬ ಸಂಗಡಿಗರನ್ನ ಜತೆ ಕೂರಿಸಿಕೊಂಡು ಐಷಾರಾಮಿ ಬದುಕು ಕೊಡಿಸೋ ಖುಷಿಯಲ್ಲಿ ನಾವು ಇದ್ದೇವೆ. ಬಾಲ್ಯದಲ್ಲಿರಬೇಕಾದ ಖುಷಿಯ ಪ್ರಪಂಚವನ್ನೇ ಮಸುಕಾಗಿಸಿ, ಬೆಳೆಯೋ ಕಿನ್ನರರಿಗೆ ಇಂಟರ್‌ನೆಟ್‌ ಅನ್ನೋ ಗೊಬ್ಬರ ಹಾಕಿ ನಾವೇ ನಮ್ಮ ಮಕ್ಕಳ ಬೌದ್ಧಿಕ ಮನೋವಿಕಾಸಕ್ಕೆ ತಡೆಗೋಡೆಯಾಗಿ ನಿಂತಿರುವುದೇ ವಿಪರ್ಯಾಸ.

ಆ ದಿನಗಳು ಎಲ್ಲಿ ಹೋದವು?
ಭಾವನೆಗಳಿಗೆ ಸ್ಪಂದಿಸದ ಈ ಇಲೆಕ್ಟ್ರಾನಿಕ್‌ ಸಲಕರಣೆಗಳ ಜತೆ ವರುಷದ 364 ದಿನಗಳ ಕಾಲ ಬಿಡದೇ ಬೆಳೆಯೋ ಇಂದಿನ ಮಕ್ಕಳಿಂದ ಮುಂದೆ ನಾವು ಪ್ರೀತಿ-ನಂಬಿಕೆ-ತಾಳ್ಮೆ-ಹೊಂದಾಣಿಕೆ-ಸಹಬಾಳ್ವೆಗಳನ್ನು ನಿರೀಕ್ಷೆ ಮಾಡೋಕ್ಕಾದರೂ ಸಾಧ್ಯವಿದೆಯೆ? ಮೊದಲೆಲ್ಲ ಬೇಸಿಗೆ ರಜೆಗಳಲ್ಲಿ ಮಕ್ಕಳು ಮನೆಯೊಳಗೆ ಇದ್ದ ದಿನಗಳೇ ಅಪರಿಚಿತ. ಊರಿನ ಕೇರಿಗಳಲ್ಲಿ ಎತ್ತ ನೋಡಿದರತ್ತ ಬರೀ ಗುಂಪುಗುಂಪಾಗಿ ಕಾಣಸಿಗುತ್ತಿದ್ದ ಮಕ್ಕಳ ಹಿಂಡು, ಕೇಕೆ, ಸದ್ದು, ನಗು, ಮಾತುಗಳದ್ದೇ ಹಾವಳಿ. ಆದರೀಗ ಹಾಗಿಲ್ಲ.

Advertisement

ಒಂದೇ ಒಂದು ಮಗು ಕೂಡ ಹೊರಾಂಗಣ ಆಟವನ್ನು ಇಷ್ಟಪಡದು. ಹೊರ ಮೈದಾನದಲ್ಲಿ ಕಾಣಸಿಗದು. ಕಾರಣ, ಮಗು ಹೊರಗೆ ಕಾಲಿಟ್ಟರೆ ಸಾಕು ಪ್ರಳಯವಾಗಿಯೇ ಹೋಯ್ತು ಅನ್ನೋ ತಾಯಂದಿರು! May like only internet game ಅನ್ನೋ ಚಿಣ್ಣರ ನುಡಿ. ಹೊರಾಂಗಣ ಆಟಗಳಿಗೆ ಮನಸೋಲುವ ಮುನ್ನವೇ ಮಕ್ಕಳಿಗೆ ಇಂಟರ್‌ನೆಟ್‌ ಆಗಂತುಕನ ಪರಿಚಯಿಸಿ, ಮಗು ಮನೆಯೊಳಗೆ ಇರುತ್ತೆ ಅಂತ ಖುಷಿ ಪಡುವ ಮುನ್ನ ಒಂದು ಬಾರಿ ಆಲೋಚಿಸಿ ನೋಡಿ. ಆದಾಗಷ್ಟೇ ಮೊಳಕೆಯೊಡೆಯುತ್ತಿರೋ ಮೃದು ಮನಸ್ಸುಗಳಿಗೆ ಇಲೆಕ್ಟ್ರಾನಿಕ್‌ ಉಪಕರಣಗಳ ಸತತ ಬಳಕೆಯಿಂದ ಆಗೋ ವಿಕಿರಣಗಳ ದುಷ್ಪರಿಣಾಮಗಳ ಅರಿವಿದೆಯೇ! ಅದೆಷ್ಟೋ ಮಕ್ಕಳು ಬದುಕಿ ಬೆಳಕಾಗಬೇಕಾದ ಹೊಸ್ತಿಲಲ್ಲಿ ಆಘಾತಕಾರಿ ಸಂಗತಿಗಳಿಗೆ, ವಿಕೃತ ಆಮಿಷಗಳಿಗೆ, ಮಾಯಾಜಾಲಗಳಿಗೆ ಸಿಲುಕಿ ತಮ್ಮ ಅತ್ಯಮೂಲ್ಯ ಬದುಕನ್ನೇ ಅಂತ್ಯವಾಗಿಸಿಕೊಂಡು ಬಿಡ್ತಾರೆ. ಕಾರಣ, ಹೊಣೆ ಇದೇ ಇಂಟರ್‌ನೆಟ್‌ ಅನ್ನುವ ಮಾಯಾವಿ.

ತಾವು ಪಟ್ಟಿರೋ ಕಷ್ಟದ ಬದುಕು ತಮ್ಮ ಮಕ್ಕಳಿಗೆ ಸಿಗಬಾರದೆಂಬ ಭಾವನೆ ಹೊತ್ತಿರೋ ಪ್ರೀತಿ ಸರಿಯಾದುದೆ ಆಗಿದೆ. ಆದರೆ, ಮಾನವನಿಗೆ ಇರಬೇಕಾದ ಪ್ರೀತಿ-ಕರುಣೆ-ಅಂತಃಕರಣ-ಆತ್ಮವಿಶ್ವಾಸ ಇವುಗಳನ್ಯಾವುದನ್ನೂ ನೀವು ಕೊಡುವ ಐಷಾರಾಮೀ ಬದುಕು ಕಲಿಸಿಕೊಡದು. ಉಳಿ ಪೆಟ್ಟು ಬಿದ್ದರೇನೇ ಅಲ್ವಾ ಶಿಲೆಯಾಗಿ ಹೊಳೆಯೋಕ್ಕಾಗೋದು. ಒಮ್ಮೆ ಆಲೋಚಿಸಿ ನೋಡಿ. ನಿಮ್ಮ ಬಾಲ್ಯದಲ್ಲಿದ್ದ ಖುಷಿ-ಸಂಗಡಿಗರ ಗೆಳೆತನ-ಮಸ್ತಿ ಇದ್ಯಾವುದಾದರೂ ನಿಮ್ಮ ಈಗಿನ ಮಕ್ಕಳು ಅನುಭವಿಸುತ್ತಿದ್ದಾರಾ? ನೋವೇ ಬಾರದಂತೆ ಬೆಳೆಸಬೇಕೆನ್ನುವ ನಿಮ್ಮ ಕಾಳಜಿ-ಪ್ರೀತಿನಾ ಗೌರವಿಸೋಣ. ಆದರೆ, ತನಗೆ ನೋವಿನ ಪರಿಚಯವಾದರೆಯೇ ತಾನೇ ಇತರರ ನೋವಿಗೆ ಸ್ಪಂದಿಸೋ ಮನೋಭಾವ ಬರುವುದು.

ಹಸಿವಿನ ಪರಿಚಯದಿಂದಲೇ ಅನ್ನದ ಬೆಲೆ ತಿಳಿಯೋದು ಸಾಧ್ಯ. ಜತೆ ಜತೆಯಾಗಿ ಕೂಡಿ ಬಾಳಿದರೆ ಪ್ರೀತಿ-ವಿಶ್ವಾಸಕ್ಕೆ ನೆಲೆ ಸಿಗುವುದು. ಸೋಲುಗಳನ್ನು ಅನುಭವಿಸಿದರೆ ಗೆದ್ದೇ ಗೆಲ್ಲಬೇಕೆಂಬ ಛಲ ಬರುವುದು. ಇವುಗಳನ್ನಾವುದನ್ನೂ ಪರಿಚಯಿಸದೇ ಬರೀ ಖುಷಿಯ ಸಂಗಡವೇ ಬೆಳೆಸಬೇಕೆನ್ನುವ ನಮ್ಮ ನಿರ್ಧಾರ, ಎಲ್ಲವನ್ನೂ ಅವರು ಕೇಳ್ಳೋ ಮೊದಲೇ ದಕ್ಕಿಸಿಬಿಡಬೇಕೆನ್ನುವ ನಾವುಗಳು ಅವರ ಮುಂದಿನ ಬೃಹತ್‌ ಬದುಕಲ್ಲಿ ಎದುರಾಗಿ ಬರುವ ಸೋಲುಗಳನ್ನು ಅದ್ಹೇಗೆ ಸಂಭಾಳಿಸಿ ನಿಲ್ಲುತ್ತಾರೆ ಅಂತ ಯೋಚಿಸಿದ್ದೇವಾ?

ಇಂದು ಅದೆಷ್ಟೋ ಮಕ್ಕಳು ಇಂದಿನ ಸಣ್ಣ ಸಣ್ಣ ವಿಷಯಗಳನ್ನೂ ತೀವ್ರವಾಗಿ ದ್ವೇಷಿಸಿ ಬದುಕನ್ನೇ ಅಂತ್ಯವಾಗಿಸಿಕೊಳ್ಳೋಕೆ ಹೊರಡೋಕೆ ಮೂಲ ಕಾರಣ ಬದುಕಲ್ಲಿ ಬೇಕಾಗಿರೋ ಆತ್ಮವಿಶ್ವಾದ ಕೊರತೆ. ಎಲ್ಲವನ್ನೂ ಬಹುಬೇಗನೇ ದಕ್ಕಿಸಿಕೊಂಡಿರೋ ಮನಸ್ಸಿಗೆ ಸಿಗಲಾರದೆಂದು ಭಾಸವಾಗುವ ಸಣ್ಣ ವಿಷಯಗಳೂ ಅಗಾಧವಾಗೇ ನೋಯಿಸಿಬಿಡುತ್ತವೆ. ಹಿರಿತನ ಅನ್ನುವುದು ಮಕ್ಕಳು ಮಾಡುವ ತಪ್ಪುಗಳನ್ನು ತಿದ್ದಿ ಒಳ್ಳೆತನವನ್ನು ಪರಿಚಯಿಸುವುದರಲ್ಲಿದೆಯೇ ಹೊರತು ಅವರು ಮಾಡುವ ತಪ್ಪುಗಳನ್ನು ಒಪ್ಪಿ-ಅಪ್ಪಿಕೊಂಡು ಖುಷಿಸುವುದರಲ್ಲಿಲ್ಲ ನೆನಪಿರಲಿ!

ಎಲ್ಲಾ ಸಂಬಂಧ-ಸಂಸ್ಕೃತಿಗಳು ತಳಹದಿ ಹಿಡಿಯೋ ಹಂತದಲ್ಲಿರೋ ಈಗಿನ ಆಧುನಿಕ ಬದುಕಿನೊಳಗಿನ ಒಂದಿಷ್ಟು ಸಮಯವಾದರೂ ನಿಮ್ಮ ಮಕ್ಕಳನ್ನು ಆ ಇಂಟರ್‌ನೆಟ್‌ ಎಂಬ ಮಾಯಾಜಾಲದಿಂದ ಹೊರತಂದು ಹೊರ ಪ್ರಪಂಚದಲ್ಲಿರೋ ನಿಜವಾದ ಬದುಕು ಖುಷಿಗಳ ಜತೆ ಒಲುಮೆ ತುಂಬಿರೋ ಸಂಬಂಧಗಳ ಜತೆ ಕಾಲಕಳೆಯಲು ಅವಕಾಶ ಮಾಡಿಕೊಡಿ. ಇಲ್ಲಿ ಸಿಗೋ ಬಾಂಧವ್ಯ, ಪ್ರೀತಿ ನಾಲ್ಕು ಗೋಡೆಯೊಳಗಿನ ಬದುಕು ನೀಡದು.

ನಮ್ಮ ಕ್ಲಬ್ಬಿನ ಸ್ನೇಹಿತರ ಮುಂದೆ ಹೇಳಿಕೊಳ್ಳಲೋ ಅಥವಾ ಅಕ್ಕಪಕ್ಕದ ಮನೆಯ ಮಕ್ಕಳಿಗಿಂತ ತನ್ನ ಮಗು ಮುಂದಿರಬೇಕೆಂಬ ಸ್ವಾರ್ಥದಿಂದಲೋ ದಿನದ 24 ಗಂಟೆಯೂ ಬಿಡುವಿರದಂತೆ ಡ್ರಾಯಿಂಗ್‌ ಕ್ಲಾಸ್‌, ಡ್ಯಾನ್ಸ್‌ ಕ್ಲಾಸ್‌, ನ್ಪೋಕನ್‌ ಇಂಗ್ಲಿಷ್‌, ಎಕ್ಸಾಮ್‌, ಮಾರ್ಕ್‌, ರ್‍ಯಾಂಕ್‌ಗಳೆಂಬ ಪಟ್ಟಿಯನ್ನ ಕುತ್ತಿಗೆಗೆ ಕಟ್ಟಿ ಸಕ್ಕರೆ ನಿದಿರೆಯನ್ನು ಸವಿಯಬೇಕಾಗಿರೋ ಮುದ್ದು ಕಂದಮ್ಮಗಳನ್ನು ಬಲವಂತವಾಗಿ ಹೊರಡಿಸಿ ಖುಷಿಪಡುವ ನಾವುಗಳು ತಿಳಿದುಕೊಳ್ಳಬೇಕಾಗಿರೋದು ಅವರು ವಿದ್ಯುತ್‌ಚಾಲಿತ ರೋಬೋಟ್‌ಗಳಲ್ಲ, ಈಗತಾನೇ ಅರಳಿ ನಿಂತಿರೋ ಪುಟಾಣಿ ಹೂವ ಗೊಂಬೆಗಳು ಎಂಬುದು. ಒಂದಿಷ್ಟು ಕ್ಷಣವನ್ನಾದರೂ ಮಕ್ಕಳನ್ನು ಮಕ್ಕಳಾಗಿರಲು ಬಿಟ್ಟುಬಿಡಿ. ತಮ್ಮ ಮಕ್ಕಳನ್ನು “ಫ‌ಸ್ಟ್‌ ರ್‍ಯಾಂಕ್‌ ರಾಜು’ವನ್ನಾಗಿಸ ಹೊರಡೋ ನಾವುಗಳು ಒಂದೇ ಒಂದು ಬಾರಿ ಅವರ ಆಸೆ-ಅಭಿವೃತ್ತಿಗಳನ್ನು ಗಮನಹರಿಸಿದರೆ ಅದೆಷ್ಟೋ ಚಿಣ್ಣರರು ಮುಂದಿನ ನ್ಯೂಟನ್‌, ಗೆಲಿಲಿಯೋ, ಥಾಮಸ್‌ ಎಡಿಸನ್‌, ಅಂಬೇಡ್ಕರ್‌, ದ.ರಾ. ಬೇಂದ್ರೆ, ಕುವೆಂಪುರಾಗಿ ಮತ್ತೆ ಹುಟ್ಟಿಬಿಡಬಲ್ಲರು.

ಅಕ್ಷತಾ ಆಚಾರ್ಯ
ಎಂಜಿಎಂ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next