Advertisement

Childhood: ಬಾಲ್ಯವೆಂಬ ನೆನೆದಷ್ಟು ಮುಗಿಯದ ಪಯಣ

12:51 PM Nov 27, 2024 | Team Udayavani |

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲೂ ಬಾಲ್ಯದ ನೆನಪುಗಳು ಅವಿಸ್ಮರಣೀಯವೇ. ಕೆಲವೊಂದು ನೆನಪುಗಳು ಮಾತ್ರ ನಮ್ಮ ಮನಸ್ಸಲ್ಲಿ, ಹೃದಯದಲ್ಲಿ ಹಚ್ಚ ಹಸುರಾಗಿ ಉಳಿದುಕೊಂಡುಬಿಡುತ್ತವೆ. ಕೆಲವೊಂದು ಸಿಹಿ ನೆನಪುಗಳಾದರೆ, ಕೆಲವು ಕಹಿ.

Advertisement

ಬಾಲ್ಯವೆಂದರೆ ನೆನೆದಷ್ಟು ಮುಗಿಯದ ಪಯಣ, ಕಾರಣವೇ ಇಲ್ಲದ ನಲಿವು-ಒಲವು, ಚಿಕ್ಕಚಿಕ್ಕ ಕಾರಣಕ್ಕೂ ಸಂಭ್ರಮ, ಗೆಲುವು ಬಹುದೊಡ್ಡ ಸವಾಲುಗಳೆಂದು ಅನಿಸಲೇ ಇಲ್ಲ. ಶಾಲೆಗೆ ಮೊದಲ ದಿನ ಹೊಸ ಹುರುಪಿನೊಂದಿಗೆ ಹೊಸ ಪುಸ್ತಕ, ಬ್ಯಾಗ್‌, ಸ್ಲೇಟ್‌ ತುಂಬಿಸಿಕೊಂಡು, ಅವನೆಲ್ಲ ನಾಜೂಕಾಗಿ ಜೋಡಿಸಿಕೊಂಡು ಖುಷಿಯಿಂದ ಹೋದದ್ದು ಇನ್ನೂ ನೆನಪಿದೆ. ಹೊಸ ಪುಸ್ತಕಗಳ ಸುವಾಸನೆ ಬೇರೆಯೇ. ಕೈಯಲ್ಲಿ ಪೆನ್ನಿಂದ ಬರೆದು ಅದರ ಪರಿಮಳ ಹೀರೋದು, ಹೊಸ ಪೆನ್‌ ಮತ್ತೇ ಪೆನ್ಸಿಲ್‌ ಅನ್ನು ಚಿನ್ನದಂತೆ ಇಟ್ಟುಕೊಂಡು ಹಳೇ ಪೆನ್ಸಿಲ್‌ ಮತ್ತೇ ಪೆನ್‌ಗಳನ್ನೇ ತಿಂಗಳ ಕಾಲ ಬಳಸಿದ್ದು. ನಮ್ಮ ಪಕ್ಕ ಕುಳಿತವನೇ ಪ್ರಾಣ ಸ್ನೇಹಿತ, ಮುಂದಿನ ಬೆಂಚ್‌ ನವರೇ ಶತ್ರುಗಳೆಂಬ ಭಾವನೆ.

ಬೆಂಚ್‌ ಬೆಂಚಿಗೂ ನಡೆಯುತ್ತಿದ್ದ ಸಮರಗಳು, ಗುರುವಿನ ಜೊತೆಗಿನ ನಯ-ವಿನಯದ ಸಾಂಗತ್ಯ, ಪೆನ್ಸಿಲ…-ಬಳಪದ ಕಡ್ಡಿ ಮುರಿದನೆಂದು ನಡಯುತ್ತಿದ್ದ ಜಗಳಗಳು, ವಾರದಲ್ಲೊಮ್ಮೆ ತರಗತಿ ಗುಡಿಸುವ ಸರದಿಯಲ್ಲಿ ಭಾರೀ ಉತ್ಸಾಹ ಹಾಗೂ ಅಸಡ್ಡೆಗಳು, ಶಾಲೆಗೆ ಮುಂಚಿತವಾಗಿ ಬರುವವನೇ ಕಲಿಕೆಯಲ್ಲಿ ಹಿಂದೆ, ತಡವಾಗಿ ಬರುವವನೇ ಮುಂದು ಎಂಬ ಮನೋಭಾವ, ಮೇಲು-ಕೀಳು ವ್ಯತ್ಯಾಸವಿಲ್ಲದೆ ಬೆರೆತು ಸಾಗುತ್ತಿದ್ದ ದಿನಗಳವು.

ಪಠ್ಯೇತರ ಚಟುವಟಿಕೆಗಳಿಗೆ ಮೀಸಲಿಡುತ್ತಿದ್ದ ಸಮಯ, ಹಿಟ್ಲರನಂತೆ ವರ್ತಿಸುತ್ತಿದ್ದ ಕ್ಲಾಸ್‌ ಲೀಡರ್‌ ಹಾಗೇ ನಮ್ಮ ನಮ್ಮಲ್ಲೇ ಗುಂಪುಗಳ ನಡುವೆ ನಡೆಯುತ್ತಿದ್ದ ಜಗಳ, ಟೀಚರ್‌ ಹತ್ತಿರ ದೂರುವುದು, ವಾರಗಟ್ಟಲೆ ಮಾತು ಬಿಡೋದು. ಸ್ವಲ್ಪ ದಿನ ಅದ್ಮೇಲೆ ಏನೂ ನಡೆಯಲೇ ಇಲ್ಲ ಎಂಬಂತೆ ಒಂದಾಗೋದು!

ಶಾಲೆಯಲ್ಲಿ ವಾರ್ಷಿಕೋತ್ಸವ ಇದ್ದಾಗ ಡಾನ್ಸ್‌ ಮಾಡಲು ಬರದವನ ಹತ್ತಿರವೂ ಡ್ಯಾನ್ಸ್‌ ಮಾಡಿಸೊ ಟೀಚರ್‌  ಊಟಕ್ಕೆ ಬಿಟ್ಟಾಗ ಫ್ರೆಂಡ್ಸ್‌ ಜತೆ ಸೇರಿ ಊಟ ಮಾಡೋವಾಗ ಎಲ್ಲರೂ ಟಿಫಿನ್‌ ತೆಗೆದು ಹಂಚಿ ತಿಂದಿದ್ದು ಮಾತ್ರ ಮರಿಯೊಕೇ ಸಾಧ್ಯನೇ ಇಲ್ಲ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಆಚರಿಸುವ ದಿನ ಬಂದ್ರೆ ಮುಗಿತು. ಅದೇನು ಉತ್ಸಾಹ, ಉಲ್ಲಾಸ. ಮುಂಜಾನೆ ಬೆಳಗ್ಗೆ ಎದ್ದು 5 ಗಂಟೆಗೆ ಸರಿಯಾಗಿ ಬಿಳಿ ಬಟ್ಟೆ, ಶೂ, ಬೆಲ್ಟಾ ಹಾಕಿಕೊಂಡು ಸೈಕಲ್‌ ಗೊಂದು ಧ್ವಜ ಸಿಕ್ಕಿಸಿಕೊಂಡು ಶಾಲೆಗೆ ಹೋಕ್ತಾ ಇದ್ರೆ ಅದೇನು ಖುಷಿ.

Advertisement

ಆಗಿನ ಉತ್ಸಾಹ ಇವಾಗ ಕಡಿಮೆ ಅನ್ಸುತ್ತೆ. ಬಾಲ್ಯಕ್ಕೆ ವ್ಯಾಲಿಡಿಟಿ ಕಮ್ಮಿ ಇದ್ರು ನೆನಪುಗಳ ಶೇಖರಣೆ ಮಾತ್ರ ಜಾಸ್ತಿ ಇರುತ್ತೆ. ಬೇಸಗೆ ರಜೆ ಅಂದರೆ ಸಾಕು ನಮಗೆಲ್ಲ ಅದೇನೋ ಸಂತೋಷ. ಆ ದಿನಗಳ ನಮ್ಮ ದಿನಚರಿಯೇ ಬೇರೆ. ಬೆಳಗ್ಗೆಯ ಟಿಫಿನ್‌ ಆಯಿತು ಅಂದ್ರೆ ಸಾಕು ಎಲ್ಲ ಫ್ರೆಂಡ್ಸ್‌ ಸೇರಿ ಮನೆಯಲ್ಲೇ ಆಟ ಆಡ್ತಾ ಇದ್ವಿ. ಬಿಸಿಲು ಜಾಸ್ತಿ ಅಂತ ಹೊರಗಡೆ ಬಿಡ್ತಾ ಇರ್ಲಿಲ್ಲ. ಕಾಡಿ ಬೇಡಿ ಹೇಗೋ ಒಂದಷ್ಟು ಹೊತ್ತು ಹೊರಗಡೆ ಆಡಿ, ಬೆವರಿಳಿಸಿಕೊಂಡು, ಒಂದಷ್ಟು ಗಾಯ ಮಾಡಿಕೊಂಡು ಬರೋದಂದ್ರೆ ಏನ್‌ ಖುಷಿ!

ಈಗ ಬಂದಿರೊ ಫೇಸ್ಬುಕ್, ಟ್ವಿಟರ್‌ ಜಗತ್ತು ಮುಂದುವರಿದಂತೆ ಹಾಗೇ ನಮ್ಮ ಹಳೇ ದಿನಗಳು ಮಾಸಿ ಹೋಗುತ್ತಿರುವುದು ನಿಜ. ನಮ್ಮ ಜೀವನದಲ್ಲಿ ಮರೆಯಲಾಗದ ಕೆಲವು ನೆನಪುಗಳು ಅಂದರೆ ಅದು ನಮ್ಮ ಬಾಲ್ಯ ಜೀವನ ಮಾತ್ರ. ನಮ್ಮ ಗುರುಗಳು ಎಷ್ಟೋ ಬಾರಿ ನಮಗೆ ಹೇಳುತ್ತಿದ್ದ ವಾಕ್ಯ ಒಂದೇ ʼಸ್ಟೂಡೆಂಟ್‌ ಲೈಫ್ ಇಸ್‌ ಗೋಲ್ಡನ್‌ ಲೈಫ್‌ʼ ಅಂತ. ನಮಗೆ ಆಗ ಅನಿಸುತ್ತಿದ್ದಿದ್ದು ಮನೆಲಿ ನೋಡಿದ್ರೆ ಆ ಕೆಲ್ಸ ಈ ಕೆಲ್ಸ ಅಂತ ಕಾಟ, ಶಾಲೆಗೆ ಬಂದ್ರೆ ಪಾಠ, ಹೋಂ ವರ್ಕ್‌ ಅಂತ ಕಾಟ, ಈ ಜೀವನ ಗೋಲ್ಡನ್‌ ಲೈಫ್ ಅಂತ ಯಾವ ನನ್‌ ಮಗ ಹೇಳಿದ್ದು ಅಂತ!

ಭವಿಷ್ಯದ ಬಗ್ಗೆ ಕಲ್ಪನೆಯಿಲ್ಲದೆ ನಾವು ಎಷ್ಟು ಖುಷಿಯಾಗಿರುತ್ತಿದ್ವಿ ಅಲ್ವಾ? ರಜೆ ಬಂದರೆ ಅಜ್ಜಿ ಮನೆ ಅಲ್ಲಿರುವ ಸ್ನೇಹಿತರ ಜತೆ ತರ್ಲೆ ಮಾಡಿ ಮನೆಗೆ ದೂರು ತರುವುದು. ಅದೇನು ಚೆಂದ ಅಲ್ವಾ? ಅದ್ರೆ ಬೆಳಿತ ನಾವು ಅ ರೀತಿ ಖುಷಿಯನ್ನು ಮತ್ತೆ ಎಂದೂ ಪಡೆಯಲು ಸಾಧ್ಯವಾಗುವುದೇ ಇಲ್ಲ. ಏನೇ ಆದರೂ ಆ ದಿನಗಳು ಮತ್ತೆಂದು ಮರಳಿ ಬರಲಾರವು. ಆದರೆ ನಾವು ಕಳೆದ ಪ್ರತಿಯೊಂದು ಕ್ಷಣಗಳೂ ನೆನಪಿನ ಬುತ್ತಿಯಲ್ಲಿ ಮಾತ್ರ ಶಾಶ್ವತವಾಗಿರೊದು ಸತ್ಯ.

-ರ‌ಕ್ಷಾ

ವಿವಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next