ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಬಾಲ್ಯ, ಪ್ರೌಢ, ಯೌವ್ವನ, ಮತ್ತು ಮುಪ್ಪು ಎಂಬ ನಾಲ್ಕಂತಸ್ತಿನ ಮಹಡಿಯನ್ನು ಹತ್ತಿಳಿಯಲೇ ಬೇಕು. ಆದರೆ, ಬಾಲ್ಯದ ನೆನಪು ಎಂಬುದು ಮಾತ್ರ ಚಿರಯೌವ್ವನ.
ನನ್ನಜ್ಜಿ ಎಪ್ಪತ್ತೆಂಟರ ಹರೆಯದವರು. ಅವರ ಬಾಲ್ಯದ ಗೆಳತಿ ಬಂದಾಗ ಬೊಚ್ಚುಬಾಯಿ ಸಂಪಿಗೆಯಂತೆ ಬಿರಿದು ಅದೇನೋ ಹೊಸಶಕ್ತಿ ಹೊಕ್ಕವಳಂತೆ ಆಡುವುದನ್ನು ನೋಡಿದರೆ ನನಗೆ ಬೆರಗಾಗುತ್ತದೆ.
ನನ್ನ ಬಾಲ್ಯವೂ ಹಾಗೆಯೇ. ನನ್ನ ಬಾಲ್ಯದ ನೆನಪು ಬೆಳ್ಳಂಬೆಳಗ್ಗೆ ಮಂಜು ಸರಿಸಿಕೊಂಡು ಕರಾರುವಕ್ಕಾಗಿ ಹಾಜರಾಗಿ ನನ್ನನ್ನು ಎಬ್ಬಿಸುತ್ತಿದ್ದ ಸೂರ್ಯ, ಒಮ್ಮೊಮ್ಮೆ ಪೂರ್ಣ, ಇನ್ನೊಮ್ಮೆ ಅಪೂರ್ಣ ಹಾಗೂ ಕೆಲವೊಮ್ಮೆ ಅಗೋಚರನಾಗಿ ಕಾಡುವ ಚಂದಿರ. ಆಗಾಗ ಗೈರಾಗುವ ಚಂದಿರನ ಅನುಪಸ್ಥಿತಿಯಲ್ಲಿ ಹೊಳೆಯುವ ನಕ್ಷತ್ರ, ಅಡ್ಡದಾರಿ, ಕಾಲುದಾರಿ, ಸಣ್ಣದಾರಿ. ಕಲ್ಲುದಾರಿ, ಮಣ್ಣುದಾರಿ. ಸಂಕ, ಸೇತುವೆಗಳ ಪರಿಚಯ-ಇತಿಹಾಸ ತಿಳಿದಿರುವ ಅದೇ ಊರಿನ ಕೆಲವು ಜನರು. ಸಿದ್ದೇಶ್ವರ ಬೆಟ್ಟದ ಕಡೆಗೆ ಹಸಿರಿನ ದಿಬ್ಬಣ ಹೊರಟಿದೆಯೇನೋ ಎಂಬಂತೆ ಬೆಳೆದುನಿಂತು ಆಕಾಶವನ್ನೇ ತದೇಕಚಿತ್ತದಿಂದ ದಿಟ್ಟಿಸುವ ಮರಗಳು. ಮಳೆಗಾಲದಲ್ಲಿ ಭೋರ್ಗರೆದು, ಉಳಿದಂತೆ ತನ್ನ ಅಸ್ತಿತ್ವವನ್ನು ಸೂಚಿಸುವ ಸಲುವಾಗಿ ಜಲತರಂಗದಂತೆ ಹರಿಯುವ ತುಂಗಾನದಿ. ಇದರ ದಡದಲ್ಲೇ ಇರುವ ಭೀಮೇಶ್ವರ ದೇವಸ್ಥಾನ. ಹೀಗೆ, ಮಲೆನಾಡಿನ ದಟ್ಟಕಾನನದ ಮಧ್ಯೆ ಇರುವ ಭೀಮನಕಟ್ಟೆ ಎಂಬ ಪುಟ್ಟಹಳ್ಳಿ ಮತ್ತು ಮಠದಿಂದ ಪ್ರಾರಂಭವಾಗುತ್ತದೆ.
ಹಳ್ಳಿಯ ಗದ್ದೆ, ತೋಟಗಳಲ್ಲಿ ಕುಂಟಬಿಲ್ಲೆ, ಮರಕೋತಿ, ಲಗೋರಿ, ಕಣ್ಣಾಮುಚ್ಚಾಲೆ… ಹೀಗೆ ಆಟ-ತುಂಟಾಟಗಳಲ್ಲೇ ಕಳೆಯುತ್ತಿದ್ದ ಆ ದಿನಗಳು, ಇನ್ನು ಇದರೊಂದಿಗೆ ಅತ್ತದ್ದು, ಬಿದ್ದದ್ದು, ಹಾಡಿದ್ದು, ಕುಣಿದದ್ದೂ ಎಲ್ಲವೂ ಸ್ಮತಿಪಟಲದಲ್ಲಿ ಇನ್ನೂ ನವಿರಾಗಿದೆ.
ಬಾಲ್ಯದ ನೆನೆಪನ್ನು ಇನ್ನಷ್ಟು ಮತ್ತಷ್ಟು ಹಸಿರಾಗಿಸುವವಳೆಂದರೆ ನನ್ನ ಗಂಗಮ್ಮ. ಬೋಳುತಲೆ, ಸ್ವಲ್ಪವೇ ಬಾಗಿದ ಬೆನ್ನು, ಸುಕ್ಕುಗಟ್ಟಿದ ದೇಹ ಯಾವಾಗಲು ಅವಳು ಉಡುತ್ತಿದ್ದ ಕೆಂಪು ಸೀರೆ, ಬೋಳುಹಣೆಯ ಮೇಲೆ ಅವಳಿಡುತ್ತಿದ್ದ ಕಪ್ಪು ತಿಲಕ ಇವೆಲ್ಲವೂ ಗಂಗಮ್ಮನ ಬಾಹ್ಯ ಅಲಂಕಾರ. ಇವಳನ್ನು ಎಲ್ಲರೂ ಮಡಿಗಂಗಮ್ಮ ಎಂದೇ ಸಂಬೋಧಿಸುತ್ತಿದ್ದರು. ಅದೊಂದು ದಿನ ಎಲ್ಲಿಂದನೋ ಬಂದಿದ್ದ ನಾಯಿ ಇವಳನ್ನು ಮುಟ್ಟಿತು ಅಂತ ರಾತ್ರೋರಾತ್ರಿ ಬಾವಿಯಿಂದ ನೀರು ಎಳ್ಕೊಂಡು ತಲೆಮೇಲೆ ಎರಡು ಕೊಡಪಾನ ಸುರಿದುಕೊಂಡಿದ್ದಳಂತೆ. ಮಠದ ಆಳು ನಾಗಪ್ಪನಿಗೆ ಅದನ್ನು ಅಲ್ಲಿಂದ ಓಡಿಸಲು ಹೇಳಿದಳಂತೆ. ಮಡಿ, ಮೈಲಿಗೆ, ಎಂಜಲು ಮುಸ್ರೆ ಅಂದರೆ ಮಾರುದ್ದ ನಿಲ್ಲುತ್ತಿದ್ದಳು. ಆದರೆ, ಆಕೆಗೆ ನನ್ನ ಬಳಿ ಯಾವತ್ತೂ ಆ ರೀತಿ ನಡೆದುಕೊಂಡಿರಲಿಲ್ಲ. ನನ್ನನ್ನು ಕಂಡರೆ ಅವಳಿಗೆ ಅದೇನೋ ಪ್ರೀತಿ. ತನಗಿದ್ದ ಜಿಹ್ವಾಚಪಲವನ್ನು ಆಕೆಯ ತಿಂಡಿ ಅಮೃತದಂಥ ಕಾಫಿಯಲ್ಲಿ ತೃಪ್ತಿಗೊಳಿಸುತ್ತಿದ್ದಳು. ಅವಳೇ ನನಗೆ ಹಾಲು-ಮೊಸರು ಹಾಕಿ ಊಟ ಮಾಡಿಸುತ್ತಿದ್ದಳು. ಶೋಭಾನೆ ಹೇಳುತ್ತ ಬತ್ತಿಹೊಸೆಯುತ್ತಿದ್ದಳು, ಹೂ ಕಟ್ಟುತ್ತಿದ್ದಳು. ಕೃಷ್ಣನ ಕಥೆಹೇಳುವುದೆಂದರೆ, ಆಕೆಗೆ ಅದೇನೋ ಖುಷಿ. ಆಕೆಯ ಕಥೆಯಲ್ಲಿ ಬರುತಿದ್ದ ರಾಧೆ, ರುಕ್ಮಿಣಿ, ಗೋಪಿಕೆ ನಾನೇ !
ನನ್ನ ಹೆಚ್ಚಿನ ಶಿಕ್ಷಣಕ್ಕಾಗಿ ನಾವು ಮಂಗಳೂರಿಗೆ ತೆರಳಬೇಕಾಯಿತು. ನಂತರ ಬಹಳಷ್ಟು ವರ್ಷಗಳವರೆಗೆ ಅವಳನ್ನು ನೋಡಲಾಗಿರಲಿಲ್ಲ ಅದೊಂದು ದಿನ ಗಂಗಮ್ಮ ನಮ್ಮನ್ನೆಲ್ಲ ಬಿಟ್ಟು ಶಿವನಪಾದ ಸೇರಿದ್ದಳು. ಆದರೆ, ನನ್ನ ಬಾಲ್ಯವನ್ನು ನೆನೆದಾಗಲೆಲ್ಲ ಅವಳೇ ಕಣ್ಣೆದುರು ಬರುತ್ತಾಳೆ. ನನ್ನ ನೆನಪುಗಳಲ್ಲಿ ಗಂಗಮ್ಮ ಎಂದಿಗೂ ಶಾಶ್ವತವಾಗಿದ್ದಾಳೆ.
ಶ್ರೀರಕ್ಷಾ ರಾವ್
ಪ್ರಥಮ ಎಂಎ (ಪತ್ರಿಕೋದ್ಯಮ) , ಆಳ್ವಾಸ್ ಕಾಲೇಜು, ಮೂಡುಬಿದಿರೆ