Advertisement

ಚುನಾವಣೆ ಅಖಾಡದಲ್ಲಿ ಬಾಲ್ಯ ಸ್ನೇಹಿತರ ಫೈಟ್‌

12:23 PM Apr 12, 2018 | |

ಪುತ್ತೂರು: ಶಾಲಾ- ಕಾಲೇಜು ದಿನಗಳ ಬಾಲ್ಯ ಸ್ನೇಹಿತರು ಮುಂದೊಂದು ದಿನ ಚುನಾವಣಾ ಅಖಾಡದಲ್ಲಿ ಎದುರು-ಬದುರಾದರೆ ಹೇಗಿರಬಹುದು? ಇಂತಹ ಒಂದು ಕುತೂಹಲಕಾರಿ ಸನ್ನಿವೇಶ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಂಡಿದೆ.

Advertisement

ಇದು ಅರುಣ್‌ ಕುಮಾರ್‌ ಪುತ್ತಿಲ ಹಾಗೂ ಅಶೋಕ್‌ ಕುಮಾರ್‌ ಕೋಡಿಂಬಾಡಿ ಅವರ ಕಥೆ. ಕಾಲೇಜು ದಿನಗಳಲ್ಲಿ ಗಳಸ್ಯ- ಕಂಠಸ್ಯ ಎಂಬಂತಿದ್ದ ಈ ಇಬ್ಬರು ನಾಯಕರು, ಇಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಅಖಾಡದಲ್ಲಿ ಬಿಜೆಪಿಯ ಪ್ರಬಲ ಆಕಾಂಕ್ಷಿಗಳು. ಬಿಜೆಪಿ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ ಆಗುತ್ತಲೇ ಪುತ್ತೂರಿನ ರಾಜಕೀಯ ಕುತೂಹಲಿಗರು ತುದಿಗಾಲಲ್ಲಿ ನಿಂತಿದ್ದರು. ಸಂಜೀವ ಮಠಂದೂರು, ಅರುಣ್‌ ಪುತ್ತಿಲ, ಅಶೋಕ್‌ ರೈ ಮೂವರಲ್ಲಿ ಯಾರ ಹೆಸರು ಬರಬಹುದು ಎಂಬ ಕಾತುರ ಇತ್ತು. ಪುತ್ತೂರಿನ ಹೆಸರು ಇಲ್ಲದೇ ಹೋದಾಗ, ಮತ್ತದೇ ಕುತೂಹಲ ಮುಂದುವರಿಯುತ್ತಿದೆ.

ಬಿಜೆಪಿಯ ಈ ಮೂರು ಪ್ರಬಲ ಆಕಾಂಕ್ಷಿ ಗಳ ಪೈಕಿ ತೀರಾ ಕುತೂಹಲ ಮೂಡಿಸಿದ್ದೇ ಅರುಣ್‌ ಹಾಗೂ ಅಶೋಕ್‌. ಏಕೆಂದರೆ, ಅಂದು ಸ್ನೇಹಿತರಾಗಿದ್ದ ಇವರು, ಇಂದು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಅಮಿತ್‌ ಶಾ ಪಟ್ಟಿ, ರಾಜ್ಯ ನಾಯಕರ ಆಯ್ಕೆ ಪಟ್ಟಿಯಲ್ಲಿ ತನ್ನ ಹೆಸರು ಬರಬೇಕೆಂದು ಪ್ರಬಲ ಫೈಟ್‌ ನಡೆಸುತ್ತಿದ್ದಾರೆ. ಪಕ್ಷ ಸಂಘಟನೆ ನೆಲೆಯಲ್ಲಿ ಮಠಂದೂರು ಅವರೂ ಪ್ರಯತ್ನಿಸಿದ್ದಾರೆ.

ಕಾಲೇಜು ದಿನಗಳು
ಪದವಿಪೂರ್ವ ಶಿಕ್ಷಣದ ಸಂದರ್ಭ ಈ ಇಬ್ಬರೂ ಸ್ನೇಹಿತರಾಗಿದ್ದರು. ಒಂದು ಬಾಳೆ ಹಣ್ಣು, ಚಹಾ ಸಿಕ್ಕರೂ ಹಂಚಿಕೊ ಳ್ಳುತ್ತಿದ್ದರು. ಯಾವುದೇ ಕೆಲಸವನ್ನು ಮಾಡುವುದಿದ್ದರೂ ಇಬ್ಬರು ಒಟ್ಟಿಗೆ ಮುಂದುವರಿಯುತ್ತಿದ್ದರು. ಪದವಿಪೂರ್ವ ವಿದ್ಯಾಭ್ಯಾಸದ ಬಳಿಕ ಅಶೋಕ್‌ ವ್ಯವಹಾರದ ಕಡೆ ಮುಖ ಮಾಡಿ ಮೈಸೂರಿಗೆ ತೆರಳಿದರು. ಅರುಣ್‌ ಕೃಷಿ ಜೀವನಕ್ಕೆ ಆತುಕೊಂಡರು.

ಮುಂದಿನ ನಡೆ?
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅಲ್ಲದೆ ಅರುಣ್‌ ಹಾಗೂ ಅಶೋಕ್‌ ಅವರೂ ಟಿಕೆಟ್‌ಗಾಗಿ ಪೈಪೋಟಿ ಮಾಡುತ್ತಿದ್ದಾರೆ. ಯಾರಿಗೇ ಟಿಕೆಟ್‌ ಸಿಕ್ಕರೂ ಉಳಿದವರು ಗೆಲುವಿಗೆ ಶ್ರಮಿಸಬಹುದೇ? ಈ ಬಗ್ಗೆ ಯಾರೂ ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಇನ್ನು ಒಂದೆರಡು ದಿನಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಯಾರಿಗೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಸ್ನೇಹಿತರ ಪೈಕಿ ಒಬ್ಬರಿಗೆ ಸಿಗುತ್ತದೋ ಅಥವಾ ಮಠಂದೂರು ಪಾಲಾಗುತ್ತದೋ ಕಾದು ನೋಡಬೇಕಿದೆ.

Advertisement

ಸಂಘಟನೆ
ವಿದ್ಯಾಭ್ಯಾಸ ಪಡೆದ ಬಳಿಕ ಇಬ್ಬರ ಜೀವನದ ದಿಕ್ಕು ವಿಭಿನ್ನವಾಗಿತ್ತು. ಅಶೋಕ್‌ ಕುಮಾರ್‌ ಉದ್ಯಮದತ್ತ ಮುಖ ಮಾಡಿ ತೆರಳಿದರು. ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡು, ಇತ್ತೀಚೆಗೆ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದರು. ಅರುಣ್‌ ಪುತ್ತಿಲ ಕೃಷಿ ಜತೆ ಜತೆಗೆ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಧಾರ್ಮಿಕ ವಿಚಾರಗಳಲ್ಲೂ ಮುಂಚೂಣಿಯಲ್ಲಿದ್ದಾರೆ.

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next