ಜಿಟಿ ಜಿಟಿ ಮಳೆಯಲ್ಲಿ ಕಾರ್ಮೋಡ ಕವಿದ ಆಕಾಶವನ್ನು ನೋಡುತ್ತಾ ಬಾಲ್ಕನಿಯಲ್ಲಿ ಕೂತು ಹಾಯಾಗಿ ಟೀ ಹೀರುತ್ತಿದ್ದ ನನಗೆ ಯಾಕೋ ನಮ್ಮೂರು ನೆನಪಾಯಿತು. ನಮ್ಮದು ಮಲೆನಾಡಿನ ಒಂದು ಪುಟ್ಟ ಹಳ್ಳಿ. ಜನರ ಗಲಾಟೆ- ವಾಹನಗಳ ಸದ್ದಿಲ್ಲದ ಪ್ರಶಾಂತವಾದ ಜಾಗ. ಅಪ್ಪಟ ಕೃಷಿಕರ ಜೀವನ ನಡೆಸುವ ನಮಗೆ ಇದ್ದುದರಲ್ಲಿಯೇ ಹೊಂದಿಕೊಂಡು ಬಾಳುವುದು ವಂಶ ಪಾರಂಪರೆಯಿಂದ ಬಂದ ಗುಣ ಎಂದರೂ ತಪ್ಪಾಗಲಾರದು.
ನನ್ನ ಬಾಲ್ಯದ ಜೀವನ ಸಾಗಿದ್ದೆಲ್ಲಾ ಊರಲ್ಲಿಯೇ. ಆದರೀಗ ನಗರದ ಜೀವನಕ್ಕೆ ಒಗ್ಗಿ, ಹಲವು ವರುಷಗಳೇ ಕಳೆದು ಹೋಗಿತ್ತು. ಹಾ! ಬಾಲ್ಯ ಎಂದಾಗ ನೆನಪಾಗುವುದೇ ಮಳೆಗಾಲದ ದಿನಗಳು. ಅರ್ಧ ಗಂಟೆ ಕರೆಂಟ್ ಇಲ್ಲದಿದ್ದರೆ ಚಿಂತಿಸುವ ನಗರದವರ ಮಧ್ಯೆ ವಾರಗಟ್ಟಲೆ ಕರೆಂಟ್ ಇಲ್ಲದಿದ್ದರೂ ನೆಮ್ಮದಿಯಿಂದ ಬದುಕುವ ನಮ್ಮ ಹಳ್ಳಿಗರ ಜೀವನವೇ ಭಿನ್ನ. ಮಳೆಗಾಲದಲ್ಲಿ ಕಂಬಳಿಯ ಕೊಪ್ಪೆಯನ್ನ ತಲೆಗೆ ಹಾಕಿಕೊಂಡು 3 ಕಿ.ಮೀ. ಗೆಳೆಯ-ಗೆಳತಿಯರೊಂದಿಗೆ ನಡೆದುಕೊಂಡು ಶಾಲೆಗೆ ಹೋಗುವುದೇ ಒಂದು ಆನಂದ. ಸಮವಸ್ತ್ರ, ಪಾಠಿಚೀಲ ಒದ್ದೆಯಾಗದಂತೆ ಕಂಬಳಿಯನ್ನು ಸರಿಮಾಡಿಕೊಳ್ಳುತ್ತಾ, ಅಲ್ಲಲ್ಲಿ ಸಿಗುವ ಚಳ್ಳೆಹಣ್ಣು, ಹಲಗೈಕಾಯಿಯನ್ನ ಕೊಯ್ದು ಬಾಯಿಗೆ ಹಾಕಿಕೊಳ್ಳುತ್ತಾ ಹೋಗುವ ನಮಗೆ ನಡೆಯುವ ದಾರಿ ದೂರ ಎಂದು ಒಮ್ಮೆಯೂ ಅನಿಸಲಿಲ್ಲ.
ಜೋರಾಗಿ ಮಳೆ ಬಂದರೆ ಶಾಲೆಗೆ ರಜೆ ಸಿಗುವುದು ಅನ್ನುವ ಆಸೆ ಮಾತ್ರ ಪ್ರತಿಯೊಬ್ಬರದ್ದು. ಶಾಲೆ ಮುಗಿಸಿ ಬರುವಾಗ ರಸ್ತೆಯ ಪಕ್ಕದಲ್ಲೇ ಹರಿಯುವ ಝರಿಯಲ್ಲಿ ನೀರಾಡುತ್ತಾ, ಉಕ್ಕುವ ಒರತೆಯಲ್ಲಿ ಕಾಲನ್ನು ತೊಳೆಯುತ್ತಾ ಮನೆಗೆ ಸೇರಿದರೆ, ಅಯ್ಯೋ ಮೈ ಎಲ್ಲಾ ಒದ್ದೆ ಮಾಡ್ಕೊ ಬಂದ್ಯಾ? ತಲೆಯಲ್ಲ ಒರೆಸ್ಕೊ ಎನ್ನುವ ಅಮ್ಮನ ಪ್ರೀತಿಯ ಮಾತು. ಕೈಕಾಲು ತೊಳೆದು ಬಂದರೆ ತಿನ್ನಲು ಒಂದು ದಿನ ಬಿಸಿ ಬಿಸಿಯಾದ ಬೋಂಡಾ ಇದ್ದರೆ ಮತ್ತೂಂದು ದಿನ ಮಲೆನಾಡಿನ ಅಪ್ಪಟ ತೆಳ್ಳಾವು. ಶಾಲೆಯಲ್ಲಿ ಕೊಟ್ಟ ಹೋಂ ವರ್ಕ್ ಮಾಡಿಲ್ಲ ಏನಂದ್ರೆ ಆ ಬಿಸಿ ಬಿಸಿ ಬೋಂಡಾ ನಮಗೆ ದಾಸವಾಳ ಶಳಕೆಯಲ್ಲಿ (ಕೋಲು) ಸಿಗೋದು. ಆಟ ಆಡೋಣ ಅಂದ್ರೆ ರಾತ್ರೆಯಾದ ಮೇಲೆ ದೀಪ ಹಚ್ಕೊಂಡು ಬರಿಯೋದಕ್ಕೆ ಆಗಲ್ಲ, ಅದಕ್ಕೆ ಈಗಲೇ ಹೋಮ್ ವರ್ಕ್ ಮಾಡು ಎಂದು ಅದೆಷ್ಟು ದಿನ ಅಮ್ಮ ಪಕ್ಕದಲ್ಲೇ ಕುಳಿತುಕೊಳ್ತಿದ್ಲು? ಈಗಿನ ಮಕ್ಕಳಿಗೆ ಈ ತರಹದ ಬಾಲ್ಯ ಸಿಗೋದೆ ಇಲ್ಲ. ಎಲ್ಲವೂ ಸಮಯಕ್ಕೆ ಅನುಗುಣವಾಗಿ ಬದಲಾಗಿದೆಹೋಗಿದೆ.
ಜೀವನ ಎಂದರೆ ಅದು ಸಂಬಂಧ, ಪ್ರೀತಿ, ಸಂತೋಷ, ನಂಬಿಕೆ, ವಿಶ್ವಾಸಗಳ ಸಮ್ಮಿಲನ. ದುಡಿಮೆ – ದುಡ್ಡು ಎಂದು ಕಾಲಿಗೆ ಚಕ್ರ ಕಟ್ಟಿದವರಂತೆ ಓಡೋ ನಾವೆಲ್ಲರೂ ಒಮ್ಮೆ ನಮ್ಮ ಬಾಲ್ಯ ಜೀವನವನ್ನ ನೆನಪಿಸಿಕೊಳ್ಳಬೇಕು. ದುಡ್ಡಿಲ್ಲದಿದ್ದರೂ ಆಗ ಜೀವನದಲ್ಲಿ ನೆಮ್ಮದಿ ಇತ್ತು. ಸಂಬಂಧಗಳಲ್ಲಿ ಒಡನಾಟ ಇತ್ತು. ಆದರೆ ಈಗ ಎಲ್ಲವೂ ಕಡಿಮೆಯಾಗುತ್ತಿದೆ ಎಂದೆಲ್ಲ ಆಲೋಚಿಸುವ ನನ್ನನ್ನು ವಾಸ್ತವತೆಗೆ ಕರೆತಂದಿದ್ದು ಬಾರೋ! ಕೇರಂ ಆಡೋಣ ಎಂದು ಕರೆದ ನನ್ನ ಗೆಳೆಯ. ಸಧ್ಯಕ್ಕೆ ಆಲೋಚಿಸುವುದಕ್ಕಿಂತ ಮೆಲುಕು ಹಾಕುವುದೇ ಉತ್ತಮ ಎಂದುಕೊಳ್ಳುತ್ತಾ ಕೇರಂ ಆಡಲು ಅಲ್ಲಿಂದ ಎದ್ದು ಹೆಜ್ಜೆ ಹಾಕಿದೆ.
-ದೀಪಕ್ ಹೆಗಡೆ ,ಶಿರಸಿ