Advertisement
ಬದುಕೆಂಬ ಸಾರೋಟು ಧಾವಂತದಿಂದ ಗೊತ್ತುಗುರಿಯಿಲ್ಲದೆ ಬಿದ್ದಂಬೀಳ ಎತ್ತಲೋ ಓಡುತ್ತಿದೆ. ಕಳೆದುಹೋದ ಹಳೆಯಪಳೆಯ ದಿನಗಳ ನೆನಪಿನ ಡಬ್ಬಿಯ ಮುಚ್ಚಳ ತೆಗೆದಾಗ ಎಷ್ಟೋ ನೋವುಗಳ ಜಂಜಾಟದ ನಡುವೆಯೂ ಬಾಲ್ಯವೆಂಬ ಬದುಕಿನ ಅಮೂಲ್ಯ ಕ್ಷಣಗಳ ಅಪರಂಜಿ ಗಟ್ಟಿ ಸಿಕ್ಕುತ್ತದೆ. ಬಾಲ್ಯದ ನೆನಪುಗಳ ಬೆನ್ನತ್ತಿದಾಗ, ಅಧ್ವಾನಗಳ ಜೊತೆಜೊತೆಗೆ ಅದ್ದೂರಿಯಾದ ಬೆರಗಿನ ಬದುಕು ಕಾಣಿಸುತ್ತದೆ.
Related Articles
Advertisement
ಗಣೇಶ ಹಬ್ಬದಲ್ಲಿ ರೋಡಿಗೆ ನಿಂತು ಚಂದಾ ವಸೂಲಿ ಮಾಡುತ್ತಿದ್ದ ಚಂದದ ದಿನಗಳವು. ಬಸವಣ್ಣನ ದೇವಸ್ಥಾನದ ಬಾಳೆಹಣ್ಣಿನ ರಸಾಯನವನ್ನು ನೂಕುನುಗ್ಗಲಿಗೆ ಅಂಜದೆ ಕನಿಷ್ಠ ಮೂರ್ನಾಲ್ಕು ಬಾರಿ ಯಾಮಾರಿಸಿ ಲಪಟಾಯಿಸಿತ್ತಿದ್ದದ್ದು, ಆಯುಧ ಪೂಜೆಯಲ್ಲಿ ಧೊಪ್ಪನೇ ಕುಕ್ಕುವ ಬೂದುಗುಂಬಳ ಕಾಯಿಯೊಳಗಿನ ಚಿಲ್ಲರೆ ಕಾಸಿಗೆ ಪೈಪೋಟಿ ಬೀಳುತ್ತಿದ್ದುದ್ದೆಲ್ಲಾ ಈಗ ಇತಿಹಾಸ.
ಚಿನ್ನಿದಾಂಡು, ಲಗೋರಿ, ಗೋಲಿ ಗೆಜ್ಜಗ ಆಡಿಕೊಂಡು ಅಪಾಪೋಲಿಯಂತೆ ಅಲೆದಾಡುತ್ತಾ ಕತ್ತಲಾದರೂ ಮನೆ ಸೇರದೆ ಇದ್ದಾಗ, ಊರನ್ನೆಲ್ಲಾ ಅಡ್ಡಬಳಸಿ ಅಟ್ಟಾಡಿಸಿಕೊಂಡು ಅಪ್ಪ ಕೊಟ್ಟ ರಪರಪ ಏಟಿನ ರುಚಿ ನನ್ನೊಬ್ಬನಿಗೆ ಮಾತ್ರ ಗೊತ್ತು. ಪುಸ್ತಕದಲ್ಲಿಟ್ಟ ನವಿಲುಗರಿ ಮರಿ ಹಾಕುತ್ತದೆಂದು ಪೆನ್ಸಿಲ್ ಒರೆದು ಅದಕ್ಕೆ ದಿನನಿತ್ಯ ಊಟ ಹಾಕುತ್ತಾ ಮರಿಗಾಗಿ ಕಾದು ಕಾದು ಬೆಪ್ಪನಾಗಿದ್ದೆ.
ಯಕ್ಕದಗಿಡದ ಮೊಗ್ಗುಗಳನ್ನು ಟಪ್ ಟಪ್ ಅನ್ನಿಸುತ್ತಾ ಪಾಸು ಫೇಲಿನ ರಿಸಲ್ಟಾಗಳನ್ನು ಪತ್ತೆಮಾಡುವ ಕಲೆಗಳೆಲ್ಲಾ ಗೊತ್ತಿತ್ತು. ಮಗ್ಗಿ ಹೇಳದಿದ್ದಾಗ ಕೋಣ ಬಗ್ಗಿಸಿ ಕುಂಡಿಗೆ ನಾಲ್ಕು ಬಿಗಿದು ಬದುಕ ತಿದ್ದಿ ಹದಗೊಳಿಸಿದ ದುಂಡು ಮಾದಯ್ಯ ಮಾಸ್ತರರು ಬಾಲ್ಯ ಅಂದಕೂಡಲೇ ನೆನಪಾಗದೆ ಇರಲಾರರು. “ಪೀಂ ಪೀಂ’ ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆಯೇ ಅರ್ಧಂಬರ್ಧ ಬರೆದಿದ್ದ ನೋಟುಬುಕ್ಕುಗಳೆಲ್ಲಾ ಐಸ್‌ಕ್ಯಾಂಡಿ ಆಸೆಗೆ ರದ್ದಿಯಾಗಿಬಿಡುತ್ತಿದ್ದವು.
ಊರಿಗಿದ್ದ ಒಂದೇ ಟಿ.ವಿಯ ಮುಂದೆ ಎಲ್ಲರ ಠಿಕಾಣಿ ಇರುತ್ತಿತ್ತು. ಚಲನಚಿತ್ರದಲ್ಲಿ ಫೈಟಿಂಗ್ ಸೀನುಗಳಿದ್ದರೆ ಲೋಕವನ್ನೇ ಮರೆತುಬಿಡುತ್ತಿದ್ದೆವು. ಶುಕ್ರವಾರದ ಚಿತ್ರಮಂಜರಿ, ಶನಿವಾರದಂದು ಬುಗುರಿಯಂತೆ ತಿರುಗಿ ಪುರ್ರನೇ ಹಾರುವ ಶಕ್ತಿಮಾನ್‌ನನ್ನು ಮಿಸ್ ಮಾಡುತ್ತಲೇ ಇರಲಿಲ್ಲ. ಕೊನೆಯ ಉಸಿರಿರೋವರೆಗೂ ಮನದಲ್ಲಿ ಪಿಸಪಿಸ ಸದ್ದು ಮಾಡುತ್ತಾ ಮುದಗೊಳಿಸುವ ಬೆಲೆಕಟ್ಟಲಾಗದ ಈ ಬಂಗಾರದ ಬಾಲ್ಯದ ನೆನಪುಗಳಿಗೆ ಸಾಷ್ಟಾಂಗ ನಮಸ್ಕಾರಗಳು..
* ಹೃದಯರವಿ