Advertisement

ಮರದ ನೆರಳಿನಲ್ಲಿ ನಡೆದಿದೆ ಚಿಣ್ಣರ ಅಕ್ಷರಾಭ್ಯಾಸ!

04:30 PM Jun 11, 2018 | |

ಚಳ್ಳಕೆರೆ: ಗ್ರಾಮೀಣ ಪ್ರದೇಶದಲ್ಲಿರುವ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕೊರತೆ ಎದುರಿಸುತ್ತಿವೆ. ತಾಲೂಕಿನ ನಾಯಕನಹಟ್ಟಿ ಹೋಬಳಿಯ ಓಬಯ್ಯನಹಟ್ಟಿ ಗೊಲ್ಲರಹಟ್ಟಿಯಲ್ಲೂ ಇದೇ ಪರಿಸ್ಥಿತಿ ಇದ್ದು ಚಿಣ್ಣರು ಕಟ್ಟಡವಿಲ್ಲದೆ ಮರದ ನೆರಳಿನಲ್ಲಿ ಅಕ್ಷರಾಭ್ಯಾಸ ಮಾಡಬೇಕಾಗಿದೆ.

Advertisement

ಕಳೆದ ಸುಮಾರು 8-10 ವರ್ಷಗಳಿಂದ ಓಬಯ್ಯನಹಟ್ಟಿ ಗೊಲ್ಲರಹಟ್ಟಿಯಲ್ಲಿ ಅಂಗನವಾಡಿ ಕೇಂದ್ರವಿದೆ. ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ 2013-14ರಲ್ಲಿ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಮತ್ತೂಂದು ಹೊಸ ಕಟ್ಟಡ ನಿರ್ಮಾಣಕ್ಕೆ ಬುನಾದಿ ಹಾಕಿ ಐದು ವರ್ಷಗಳು ಕಳೆದಿದ್ದರೂ ಕಟ್ಟಡ ಮಾತ್ರ ನಿರ್ಮಾಣವಾಗಿಲ್ಲ.

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ
ಮಾಡಿದ್ದರೂ ಪ್ರಯೋಜನವಾಗಿಲ್ಲ.  ಕಟ್ಟಡ ಇಲ್ಲದ್ದರಿಂದ ಅಂಗನವಾಡಿ ಮಕ್ಕಳು ಕಟ್ಟಡ ಸಮೀಪ ಇರುವ ಮರದ ನೆರಳಿನಲ್ಲಿ ಕುಳಿತು ಪಾಠ ಕಲಿಯುತ್ತಿದ್ದಾರೆ. ಮಳೆಗಾಲದಲ್ಲಿ ಅಂಗನವಾಡಿ ಕೇಂದ್ರವನ್ನು ಅನಿವಾರ್ಯವಾಗಿ ಮುಚ್ಚಬೇಕಾಗಿದೆ. ಪುಟ್ಟ ಮಕ್ಕಳು ಬಯಲು ಪ್ರದೇಶದಲ್ಲಿ ಅಭ್ಯಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. 

ಮಕ್ಕಳ ಹಿತದೃಷ್ಟಿಯಿಂದ ಬಾಡಿಗೆ ಕಟ್ಟಡ ಅಥವಾ ಸರ್ಕಾರದ ಯಾವುದೇ ಇಲಾಖೆಯ ಕಟ್ಟಡವನ್ನು ಅಂಗನವಾಡಿಗೆ
ಪಡೆದುಕೊಳ್ಳಬಹುದಿತ್ತು. ಅಂಗನವಾಡಿಯಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿ ಇದ್ದು, 13 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಮರದ ಕೆಳಗೆ ಮಕ್ಕಳು ವಿದ್ಯಾಭ್ಯಾಸ  ಮಾಡುತ್ತಿರುವುದುರಿಂದ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಭೀತಿ ಇದೆ.

ನನೆಗುದಿಗೆ ಬಿದ್ದಿರುವ ಅಂಗನವಾಡಿ ಕಟ್ಟಡವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಮೂಲ ಸೌಲಭ್ಯ ಕಲ್ಪಿಸಿ ಗ್ರಾಮಸ್ಥರ ಭೀತಿಯನ್ನು ದೂರ ಮಾಡಲು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು
ಗ್ರಾಮದ ಯುವಕರಾದ ಗುರು ಯಾದವ್‌, ಬಸಣ್ಣ, ಬೋಸಲಿಂಗಯ್ಯ, ಬೋರಯ್ಯ ಮತ್ತಿತರರು ಒತ್ತಾಯಿಸಿದ್ದಾರೆ.

Advertisement

ಕಳೆದ ಹತ್ತಾರು ವರ್ಷಗಳಿಂದ ನಮ್ಮ ಗ್ರಾಮದ ಪುಟ್ಟ ಮಕ್ಕಳು ಅಕ್ಷರ ಕಲಿಯಲು ಅಂಗನವಾಡಿ ಕೇಂದ್ರಕ್ಕೆ ಹೋಗಿ  ಬರುತ್ತಾರೆ. ಆದರೆ ಸುಸಜ್ಜಿತವಾದ ಕಟ್ಟಡವಿಲ್ಲ. ಬಯಲಿನಲ್ಲೇ ವಿದ್ಯಾಭ್ಯಾಸ ಮಾಡಬೇಕಾಗಿದೆ. ಮಳೆ, ಗಾಳಿ, ಗುಡುಗು, ಸಿಡಿಲು ಉಂಟಾದಲ್ಲಿ ಮಕ್ಕಳ ಪೋಷಕರು ಹೋಗಿ ಮನೆಗೆ ಕರೆದುಕೊಂಡು ಬರಬೇಕಿದೆ. ಆದ್ದರಿಂದ ಕೂಡಲೇ ಕಟ್ಟಡ ನಿರ್ಮಿಸಿಕೊಡಬೇಕು. 
 ಶಿವು ಯಾದವ್‌, ಗ್ರಾಮಸ್ಥ

 ಓಬಯ್ಯನಹಟ್ಟಿ ಗೊಲ್ಲರಹಟ್ಟಿಯ ಅಂಗನವಾಡಿ ಕಟ್ಟಡದ ಬುನಾದಿ ಕಾರ್ಯ ಪೂರ್ಣಗೊಂಡಿದೆ. ಈ ಕಟ್ಟಡವನ್ನು
ಆದಷ್ಟು ಬೇಗ ನಿರ್ಮಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಇದ್ದಿದ್ದರಿಂದ ವಿಳಂಬವಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಶೀಘ್ರದಲ್ಲೇ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುವುದು.
 ಸಿ.ಕೆ. ಗಿರಿಜಾಂಬ, ಸಿಡಿಪಿಒ.

„ಕೆ.ಎಸ್‌. ರಾಘವೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next