ಹಿರೇಬಾಗೇವಾಡಿ: ಖಾಸಗಿ ಕಾನ್ವೆಂಟ್ ಹಾವಳಿಯಿಂದಾಗಿ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ದಾಖಲಾತಿಯ ಪ್ರಮಾಣ ಕುಸಿಯುತ್ತಿದೆ ಎಂದುಕೊಂಡರೂ ಇದಕ್ಕೆ ಅಪವಾದ ಎಂಬಂತೆ ಮಾಸ್ತಿಮರರ್ಡಿ ಗ್ರಾಮದ 455 ಸಂಖ್ಯೆಯ ಅಂಗನವಾಡಿ ಕೇಂದ್ರದಲ್ಲಿ 42 ವಿದ್ಯಾರ್ಥಿಗಳು ದಾಖಲಾಗಿ ಅಚ್ಚರಿ ಮೂಡಿಸಿದ್ದಾರೆ. ವಿಪರ್ಯಾಸ ಎಂದರೆ ಬಹು ವರ್ಷಗಳಿಂದಲೂ ಸ್ವಂತ ಕಟ್ಟಡ ಇಲ್ಲದೇ ಹತ್ತು ಹಲವು ಸಮಸ್ಯೆಗಳಿಂದ ಅಂಗನವಾಡಿ ಶಿಕ್ಷಕಿಯರು ಹಾಗೂ ಮಕ್ಕಳು ಬಳಲುವಂತಾಗಿದೆ.
ಏನು ಸಮಸ್ಯೆಃ ಈ ಅಂಗನವಾಡಿಗೆ ಸ್ವಂತ ಕಟ್ಟಡ ಒದಗಿಸಲು 2013-14ರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆರ್.ಐ.ಡಿ.ಎಫ್ ಯೋಜನೆ ಅಡಿ 4.50 ಲಕ್ಷ ರೂ. ಅಂದಾಜು ವೆಚ್ಚ ನಿಗದಿ ಪಡಿಸಲಾಗಿತ್ತು. ಆದರೆ ಗುತ್ತಿಗೆದಾರನ ವಿಳಂಬ ಧೋರಣೆ ಹಾಗೂ ಜಿ.ಪಂ ಅಭಿಯಂತರ. ನಿರ್ಲಕ್ಷ್ಯ ದಿಂದ ಇದುವರೆಗೂ ಕಟ್ಟಡ ಪೂರ್ಣಗೊಳ್ಳದೇ ಮಕ್ಕಳು ಬೇರೆ ಕಟ್ಟಡದಲ್ಲಿ ಓದುವ ಅನಿವಾರ್ಯತೆ ಬಂದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅನೈತಿಕ ಚಟುವಟಿಕೆ: ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾದಾಗಿನಿಂದಲೂ ಇಲ್ಲಿಯವರೆಗೆ ಸ್ವಂತ ಜಾಗವಿಲ್ಲದೇ ಪಕ್ಕದ ಪ್ರೌಢಶಾಲೆಯಲ್ಲಿ ಆಶ್ರಯ ಪಡೆದು ಕೆಂದ್ರವನ್ನು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಣಕಾಸಿನ ಮುಗ್ಗಟ್ಟು ಮತ್ತು ಗ್ರಾಪಂ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಜಿಪಂ ಬೆಳಗಾವಿ ಉಪ ವಿಭಾಗದ ತಾಂತ್ರಿಕ ಅಧಿ ಕಾರಿ ಇವರ ನಡುವಿನ ಸಮನ್ವಯದ ಕೊರತೆಯಿಂದಾಗಿ ಜನರಿಗೆ ತಲುಪಬೇಕಾದ ಕಟ್ಟಡ ಅರ್ಧಕ್ಕೆ ನಿಂತು ಉಪಯೋಗಕ್ಕೆ ಬಾರದಂತಾಗಿದೆ. ಈಗ ಈ ಕಟ್ಟಡ ಜೂಜಾಟ, ಮದ್ಯ ಸೇವನೆ ಸೇರಿದಂತೆ ಹಲವಾರು ಅನೈತಿಕ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿದೆ.
ನಮ್ಮ ಭಾಗದ ಜನಪ್ರತಿನಿ ಧಿಗಳು ಹಾಗೂ ಬೆಳಗಾವಿ. ಸ್ಥಳೀಯ ಗ್ರಾಪಂ ಈ ಬಗ್ಗೆ ಗಮನ ಹರಿಸಲ್ಲ. ಕಾಮಗಾರಿಯ ತಾಂತ್ರಿಕ ಉಸ್ತವಾರಿ ಜಿ.ಪಂ. ಅಭಿಯಂತರು ನಿರ್ಲಕ್ಷ್ಯ ಧೋರಣೆಯೇ ಕಟ್ಟಡ ಅಪೂರ್ಣಗೊಳ್ಳಲು ಪ್ರಮುಖ ಕಾರಣ.
ಪ್ರಕಾಶಗೌಡ ಪಾಟೀಲ ಗ್ರಾಮಸ್ಥರು ಹಾಗೂ ಅಧ್ಯಕ್ಷರು ಪಿ.ಎಲ್.ಡಿ ಬ್ಯಾಂಕ್ ಬೆಳಗಾವಿ.
-ಶಿವಾನಂದ ಮೇಟಿ