Advertisement

ಸೋಲಿಲ್ಲದೆ ಬಾಳುಂಟೇ?

07:58 PM Oct 21, 2020 | Suhan S |

ಕೋವಿಡ್ ಕಾರಣಕ್ಕೆ ಶಾಲೆಗಳು ಬಂದ್‌ ಆಗಿವೆ. ಮಗನಿಗೆ ಹೊರಗೆ ಹೋಗಿ ಆಡುವ ಆಸೆ. ಆದರೆ, ಅವನನ್ನು ಆಚೆಕಳಿಸಲು ಅಮ್ಮನಿಗೆ ಮನಸ್ಸಿಲ್ಲ. ಆಚೆ ಹೋದಾಗ ಯಾರೋ ಒಬ್ಬರ ಮೂಲಕ ಸೋಂಕು ತಗುಲಿದರೆ?- ಎಂಬ ಭಯ. ಹೊತ್ತುಕಳೆಯುವ ಉದ್ದೇಶದಿಂದ ಅಮ್ಮ- ಮಗ, ದಿನವೂ ತಮ್ಮಿಷ್ಟದ ಒಂದೊಂದು ಆಟ ಆಡುತ್ತಿದ್ದರು. ಅವತ್ತೂಂದು ದಿನ,ಕಳ್ಳ- ಪೊಲೀಸ್‌

Advertisement

ಆಟದಲ್ಲಿ ತೊಡಗಿದ್ದರು.ಕಳ್ಳನ ಪಾತ್ರದಲ್ಲಿ ಅಮ್ಮ ಇದ್ದಾಗ, ಆಕೆ ಬಚ್ಚಿಟ್ಟುಕೊಂಡ ಜಾಗವನ್ನು ಪೊಲೀಸ್‌ ವೇಷದಲ್ಲಿದ್ದ ಮಗ ಸುಲಭವಾಗಿ ಪತ್ತೆ ಮಾಡುತ್ತಿದ್ದ. ಪ್ರತಿ ಬಾರಿಯೂ ಅಮ್ಮ ಮಗನಿಗೆ ಸ್ಪಷ್ಟವಾಗಿ ಕಾಣುವಲ್ಲಿಯೇ ಅಡಗಿದ್ದು, ಬೇಗನೆ ಸಿಕ್ಕಿ ಬೀಳುತ್ತಿದ್ದಳು.ಕಳ್ಳನನ್ನು ಹಿಡಿದಾಗಲೆಲ್ಲಾ ಮಗನ ಖುಷಿಗೆ ಪಾರವೇ ಇರುತ್ತಿರಲಿಲ್ಲ. ಅವನ ಮುಖದ ತುಂಬ ಜಗವ ಗೆದ್ದ ಸಂಭ್ರಮ…

ಹೀಗೇ ಸ್ವಲ್ಪ ಹೊತ್ತುಕಳೆಯಿತು. ಈಗ ಆಟದಲ್ಲಿ ಪಾತ್ರಗಳು ಬದಲಾಗಿವೆ.ಕಳ್ಳನ ಪಾತ್ರದಲ್ಲಿ ಮಗ ಇದ್ದಾನೆ. ಪೊಲೀಸ್‌ ವೇಷದಲ್ಲಿ ಅಮ್ಮ ಇದ್ದಾಳೆ. ಮಗ ಬಚ್ಚಿಟ್ಟುಕೊಂಡಿದ್ದಾನೆ. ಅವನು ಅಡಗಿರುವ ಜಾಗ ಗೊತ್ತಿದ್ದರೂ, ಅದೇನೂ ತನಗೆ ಗೊತ್ತೇ ಇಲ್ಲ ಅನ್ನುವಂತೆ ಅಮ್ಮ ನಟಿಸುತ್ತಾಳೆ. ತುಂಬಾ ಹೊತ್ತು ಹುಡುಕಾಡುವಂತೆ ನಟಿಸಿ,ಕೊನೆಗೂ

ಹಿಡಿಯಲಾಗದೆ ಸೋಲೊಪ್ಪುತ್ತಾಳೆ. ಅದನ್ನುಕಂಡ ಮಗ, ಈ ಬಾರಿಯೂ ನಾನೇ ಗೆದ್ದೆ ಎನ್ನುತ್ತಾ ಇಮ್ಮಡಿ ಹರ್ಷದಿಂದಕುಣಿಯುತ್ತ ಬಂದ. ಇದನ್ನೆಲ್ಲಾ ನೋಡುತ್ತಿದ್ದ ಆ ಹುಡುಗನ ಅಜ್ಜಿ, ಆ ಮಗುವಿನ ತಾಯಿಯನ್ನುಕುರಿತು- ಅದ್ಯಾಕೇ ಹಾಗೆ ಮಾಡಿದೆ? ಅವನಿಗೆ ಸೋಲಿನ ರುಚಿ ಹೇಗಿರುತ್ತದೆ ಎನ್ನುವುದನ್ನೂ ತೋರಿಸು. ಆಟ ಅಂದಮೇಲೆ ಸೋಲು- ಗೆಲುವೂ ಎರಡೂ ಇರುತ್ತದೆ ಎಂದು ಮಕ್ಕಳಿಗೆ ಈಗಿಂದಲೇ ಗೊತ್ತಾಗಲಿ- ಅಂದರು. ಈ ಮಾತು, ಆ ತಾಯಿಗೆ ಇಷ್ಟವಾಗಲಿಲ್ಲ. ಅವಳ ಮುಖದಲ್ಲಿ ಸ್ಪಷ್ಟವಾಗಿ ಅಸಮಧಾನದ ಗೆರೆ. ಹುಬ್ಬು ಗಂಟಿಕ್ಕಿಕೊಂಡೇ ಆಕೆ ಹೇಳಿದಳು: ಅವನು ಸೋತರೆ ಅಳ್ತಾನೆ.ಊಟ ಮಾಡುವುದಿಲ್ಲ, ನನಗೆ ಜಿಗುಟುತ್ತಾನೆ. ಅವನನ್ನು ಸಮಾಧಾನ ಮಾಡುವ ವೇಳೆಗೆ ಸುಸ್ತಾಗಿಬಿಡುತ್ತೆ. ಅದಕ್ಕೇ, ಎಲ್ಲ ಆಟಗಳಲ್ಲೂ ಅವನನ್ನೇ ಗೆಲ್ಲಿಸ್ತೇವೆ.

“ಮಕ್ಕಳಿಗೆ ಗೆಲ್ಲುವುದನ್ನು ಮಾತ್ರಕಲಿಸಿದರೆ ಸಾಲದು; ಗೆಲುವಿನ ಸಿಹಿ ಮತ್ತು ಸೋಲಿನಕಹಿ- ಈ ಎರಡರ ಮಹತ್ವವನ್ನೂ ಅವರಿಗೆ ಪರಿಚಯಮಾಡಿಕೊಡಬೇಕು. ಸೋಲಿನಿಂದಲೂ ಕಲಿಯಬೇಕಾದ,ಕಲಿಯಬಹುದಾದ ಪಾಠಗಳು ಇರುತ್ತವೆ ಅಲ್ಲವಾ?’- ಹಿರಿಯಾಕೆಯ ಅನುಭವದನುಡಿಗೆ ಅಲ್ಲಿ ಬೆಲೆ ಸಿಗಲೇ ಇಲ್ಲ.

Advertisement

ಸಿಹಿ-ಕಹಿಯ ಪರಿಚಯ ಆಗಲಿ : ಪರಿಚಿತರೊಬ್ಬರ ಮನೆಯಲ್ಲಿ ಅಪ್ಪ- ಅಮ್ಮ, ತಮ್ಮ ಏಳರ ಹರೆಯದ ಮಗನಿಗೆಕೇಳಿದ್ದು,ಕೇಳದೆ ಇದ್ದದ್ದು ಎಲ್ಲವನ್ನೂ ತಂದು ಸುರಿಯುತ್ತಿದ್ದರು. ಎರಡೇ ದಿನದಲ್ಲಿ ಅದನ್ನು ಮೂಲೆಗೆಸೆದು ಮಗದೊಂದು ವಸ್ತುವಿಗೆ ಆ ಮಗುವಿನಿಂದ ಡಿಮ್ಯಾಂಡ್‌. ಅದೂ ಕಾಲಿನ ಬುಡಕ್ಕೇ ಬರುತ್ತಿತ್ತು. ಹಿರಿಯರಾಗಿದ್ದ ಅಜ್ಜ ಇದನ್ನೆಲ್ಲಾ ನೋಡುವಷ್ಟು ದಿನ ನೋಡಿ ಕೊನೆಗೊಮ್ಮೆ ಹೇಳಿದರು: ಮಗುವಿಗೆ ಕೇಳಿದ್ದೆಲ್ಲ ಕೊಟ್ಟು ಕಲಿಸಬೇಡ. ಹೀಗೇ ಮುಂದುವರಿದರೆ ಇವನು ಹಠಮಾರಿ ಆಗಿಬಿಡ್ತಾನೆ. ಆಮೇಲೆಕಷ್ಟ ಆಗಬಹುದು ನಿಮಗೆ… ಅಪ್ಪನ ಅನುಭವದ ನುಡಿಗೆ ಮಗ ಒಪ್ಪಿದರೂ,

ಸೊಸೆ ಒಪ್ಪಲಿಲ್ಲ. ಮಗುವನ್ನು ತಮಗೆ ಬೇಕಾದ ಹಾಗೆ ಬೆಳೆಸುವುದುಕಂಡು ಮಾವನಿಗೆಕಣ್ಣುರಿ ಎನ್ನುವ ಅಸಮಾಧಾನ ಅವಳಿಗೆ. ಅದನ್ನಾಕೆ ಆಡಿಯೂ ತೋರಿಸಿದಳು. “ನಮ್ಮ ಸಂಪಾದನೆ, ನಮ್ಮ ಮಗು. ನಮಗೆಕಂದ ಆಸೆಪಟ್ಟಿದ್ದನ್ನೆಲ್ಲ ತಂದುಕೊಡುವ ಶಕ್ತಿ ಇದೆ. ನಿಮ್ಮಕಾಲದಲ್ಲಿ ಬಡತನವಿತ್ತು. ಮಕ್ಕಳು ಕೇಳಿದ್ದನ್ನುಕೊಡಿಸಲು ಆಗ್ತಿರಲಿಲ್ಲ. ಹಾಗೆಂದು ನಮ್ಮ ಕಂದನೂ ಗತಿಯಿಲ್ಲದವನ ಹಾಗೆ ಬೆಳೆಯಬೇಕೇ? ಆಟದ ವಸ್ತುಗಳಿಲ್ಲ ಅನ್ನುತ್ತಾ ಅವನು ಅತ್ತರೆ ನನಗೆ ಸಹಿಸಿಕೊಳ್ಳಲೇ ಆಗುವುದಿಲ್ಲ’- ಅಂದಳು.

ಅತೀಮುದ್ದು ಅನಾಹುತಕ್ಕೆ ದಾರಿ : ಮೊಮ್ಮಗನಿಗೆ ದುಬಾರಿಯದಿರಲಿ; ಸಾಮಾನ್ಯದ್ದೇ ಆಗಲಿ ಬೆಲೆ ತಿಳಿಯದು. ಇಂದು ಅದರಲ್ಲಿ ಆಟವಾಡುತ್ತಾನೆ; ಬೇಸರ ಬಂದರೆ ಎತ್ತಿಎಸೆಯುತ್ತಾನೆ. ಉಡುಗೆ, ತೊಡುಗೆ ಅದೆಷ್ಟು. ಒಂದಕ್ಕಿಂತ ಒಂದು ದುಬಾರಿ. ತುಂಬಾ ಮುದ್ದಿನಿಂದ ಸಾಕುತ್ತಿರುವ ಕಾರಣ, ಇಂದು ಕೊಡಿಸಿದ್ದು ನಾಲ್ಕು ತಿಂಗಳು ಕಳೆಯುವುದರೊಳಗೆ ಬಿಗಿಯಾಗುತ್ತದೆ. ಹೊಸತನ ಮಾಸುವ ಮೊದಲೇ ಅದನ್ನು ಮೂಲೆಗೆಸೆದು ಬೇರೆ ಖರೀದಿ ಮಾಡುತ್ತಾರೆ.

ತಾನು ಕಾಲಿನಲ್ಲಿ ತೋರಿಸಿದ್ದನ್ನು ಅಪ್ಪ- ಅಮ್ಮ ತಲೆಯಲ್ಲಿ ಹೊತ್ತು ಮಾಡುತ್ತಾರೆ ಎನ್ನುವ ಅರಿವಿದೆ ಮಗುವಿಗೆ. ಅದೇಕಾರಣಕ್ಕೆ ಅದರ ಹಟ, ರಚ್ಚೆ, ರಂಪ ಧಾರಾಳವಾಗಿದೆ.ತಾನು ಬಯಸಿದೆಲ್ಲಾ ಸಿಗುತ್ತದೆ ಮತ್ತು ಸಿಗಲೇಬೇಕು ಎಂಬಮನಸ್ಥಿತಿಯಲ್ಲಿ ಬೆಳೆಯುವ ಮಗು, ಮನೆಯಿಂದ ಆಚೆಕಾಲಿಟ್ಟ ನಂತರ ನಿಜಕ್ಕೂ ಕಂಗಾಲಾಗುತ್ತದೆ.ಕಾರಣ, ಕೇಳಿದ್ದನ್ನೆಲ್ಲಾ ತಂದು ಸುರಿಯಲು, ಸದಾ ತನ್ನ ಪರವಾಗಿ ತೀರ್ಪು ಕೊಡಲು ಇಲ್ಲಿ ಅಪ್ಪ- ಅಮ್ಮ ಇರುವುದಿಲ್ಲ! ಇಂಥ ಸಂದರ್ಭದಲ್ಲಿ ಸೋಲು ಎಂಬ ಪದದ ಪರಿಚಯವೇ ಇಲ್ಲದೇ ಬೆಳೆದ ಮಕ್ಕಳು, ದಿಢೀರ್‌ ಎದುರಾಗುವ ಪರಾಜಯವನ್ನು ಅಥವಾ ವೈಫ‌ಲ್ಯವನ್ನು ಒಪ್ಪಿಕೊಳ್ಳಲಾಗದೆ ಒದ್ದಾಡುತ್ತಾರೆ. ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಡಿಪ್ರಶನ್‌ಗೆ ತುತ್ತಾಗುತ್ತಾರೆ.

ಸೋಲಿನ ಹಿಂದಿದೆ ಗೆಲುವು :

ಬದುಕೆಂದರೆ ಅಲ್ಲಿ ಗೆಲುವು, ಸೋಲು ಎರಡೂ ಇದೆ. ಇಂದು ಸೋತವನು, ನಾಳೆಗೆ ಗೆದ್ದೇ ಗೆಲ್ಲುತ್ತಾನೆ. ಸಣ್ಣದೊಂದು ವೈಫ‌ಲ್ಯದಿಂದ ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ. ಅದನ್ನು ಮೆಟ್ಟಿ ನಿಲ್ಲುವ ಮನೋದಾಡ್ಯì ಬೆಳೆಸಬೇಕು. ಅದಕ್ಕಾಗಿ ಮಕ್ಕಳಿಗೆ ಮನೆಯಲ್ಲೇ ಸೋಲು, ಗೆಲುವುಗಳ ಪರಿಚಯ ಮಾಡಿಕೊಡಬೇಕು. ಅದು ಪರೀಕ್ಷೆ, ಆಟ, ಚರ್ಚಾ ಸ್ಪರ್ಧೆ,ಕಥೆ ಬರೆಯುವ-ಸ್ಪೆಲ್ಲಿಂಗ್‌ ಹೇಳುವ ಸ್ಪರ್ಧೆ- ಈ ಯಾವುದೇ ಆಗಿರಬಹುದು. ಅಲ್ಲೆಲ್ಲಾ ಒಂದು ನಾಣ್ಯದ ಎರಡು ಮುಖಗಳಂತೆ ಸೋಲು ಮತ್ತು ಗೆಲುವು ಇರುತ್ತವೆ. ಪ್ರತಿ ಬಾರಿಯೂ ಗೆಲ್ಲುವ ಉದ್ದೇಶದಿಂದಲೇ ಮುನ್ನುಗ್ಗಬೇಕು. ಅಕಸ್ಮಾತ್‌ ಸೋಲು ಜೊತೆಯಾದರೆ, ಅದನ್ನೂ ಸಮಾಧಾನದಿಂದಲೇ ಸ್ವೀಕರಿಸಬೇಕು.ಕೆಲವೊಮ್ಮೆ, ಸೋಲುವುದರಿಂದಲೂ ಒಳಿತಾಗುತ್ತದೆ ಎಂದು ಹೇಳಿಕೊಡಬೇಕು.

ಇಂಥದೊಂದು ಪಾಠವನ್ನು ಮಕ್ಕಳಿಗೆ ಚಿಕ್ಕಂದಿನಲ್ಲೇಹೇಳಿಕೊಟ್ಟರೆ, ಭವಿಷ್ಯದಲ್ಲಿ ಸೋಲು ಜೊತೆಯಾದಾಗ ಅವರು ಎದೆಗುಂದುವುದಿಲ್ಲ. ಬದಲಿಗೆ ನಾಳೆಯ ಗೆಲುವು ನನ್ನದೇ ಎಂಬ ವಿಶ್ವಾಸದಲ್ಲಿ ಮುನ್ನುಗ್ಗುತ್ತಾರೆ. ಒಮ್ಮೆ ಸೋಲುವುದರಿಂದ ಬದುಕು ಮುಳುಗಿಹೋಗುವುದಿಲ್ಲ ಎಂಬ ಪಾಠಕಲಿಯುತ್ತಾರೆ. ಅಷ್ಟೇ ಅಲ್ಲ; ತನ್ನ ಸೋಲಿಗೆಕಾರಣಗಳು ಏನೇನು? ತಾನು ಎಡವಿದ್ದು ಎಲ್ಲಿ ಎಂದು ಹುಡುಕಾಟಕ್ಕೆ ನಿಲ್ಲುತ್ತಾರೆ. ಗೆದ್ದರೆ ಮಾತ್ರ ಜೀವನ. ಸೋತರೆ ಅಂಥವರಿಗೆ ಎಲ್ಲೂ ಬೆಲೆ ಸಿಗಲ್ಲ ಎಂಬ ನೆಗೆಟಿವ್‌ ಮಾತುಗಳನ್ನೇ ಮಕ್ಕಳ ತಲೆಗೆ ತುಂಬುವ ಪೋಷಕರು ಇದನ್ನೆಲ್ಲಾ ಗಮನಿಸಬೇಕು.­

 

– ಕೃಷ್ಣವೇಣಿ ಕಿದೂರು, ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next