Advertisement

ಮಹಿಳೆಗೆ ಆಂಬ್ಯುಲೆನ್ಸ್ ನಲ್ಲೇ ಹೆರಿಗೆ : ಮಗು ಸಾವು

09:26 PM Dec 07, 2020 | mahesh |

ಚಾಮರಾಜನಗರ: ಮಹಿಳೆಯೊಬ್ಬರಿಗೆ ಹೆರಿಗೆ ಸಂದರ್ಭದಲ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರಕದೆ, ಮೈಸೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಆಂಬ್ಯುಲೆನ್ಸ್ ನಲ್ಲೇ ಹೆರಿಗೆಯಾಗಿ, ಹುಟ್ಟುವ ಮೊದಲೇ ಮಗು ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ಕೊಳ್ಳೇಗಾಲ ತಾಲೂಕು ಕಾಡಂಚಿನ ಗ್ರಾಮವಾದ ಪುಟ್ಟೀರಮ್ಮನ ದೊಡ್ಡಿಯ ಗರ್ಭಿಣಿ ಮಹದೇವಮ್ಮ ಅವರಿಗೆ ಶನಿವಾರ ರಾತ್ರಿ ಹೊಟ್ಟೆನೋವು ಕಾಣಿಸಿಕೊಂಡಿತ್ತು. ತಕ್ಷಣ ಈಕೆಯ ಪತಿ ಸಮೀಪದಲ್ಲೇ ಇರುವ ಕಾಮಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಇದು 24*7 ಹೆರಿಗೆ ಆಸ್ಪತ್ರೆಯಾಗಿದ್ದರೂ ಇಲ್ಲಿ ವೈದ್ಯರೇ ಇಲ್ಲ. ಹಾಗಾಗಿ ಈ ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲು ಮುಚ್ಚಿತ್ತು. ಬೇರೆ ದಾರಿ ಕಾಣದೆ ನಂತರ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಗರ್ಭಿಣಿಯನ್ನು ಪರೀಕ್ಷಿಸಿದ ಇಲ್ಲಿನ ವೈದ್ಯಕೀಯ ಸಿಬ್ಬಂದಿ ಈಕೆಯನ್ನು ದಾಖಲು ಮಾಡಿಕೊಳ್ಳದೆ ಜಿಲ್ಲಾಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ.

ನಂತರ ಗರ್ಭಿಣಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಈಕೆಯನ್ನು ಪರೀಕ್ಷಿಸಿದ ಕರ್ತವ್ಯನಿರತ ವೈದ್ಯರು ರಾತ್ರಿ ವೇಳೆ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯವಿಲ್ಲ, ಹಾಗಾಗಿ ಹೊರಗಡೆ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರುವಂತೆ ತಿಳಿಸಿದ್ದಾರೆ. ಮಧ್ಯರಾತ್ರಿ ಆಟೋ ಮಾಡಿಕೊಂಡು ನಗರದ ಎಲ್ಲಾ ಕಡೆ ಹುಡುಕಾಟ ನಡೆಸಿದ ಗರ್ಭಿಣಿ ಮಹಿಳೆಯ ಕಡೆಯವರು ಎಲ್ಲಿಯೂ ಸ್ಕ್ಯಾನಿಂಗ್ ಮಾಡಿಸಲಾಗದೆ ಮತ್ತೆ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ.

ಹೊಟ್ಟೆಯಲ್ಲಿರುವ ಮಗು ಚಲನೆಯಲ್ಲಿ ಇಲ್ಲದಂತೆ ಕಂಡುಬರುತ್ತಿದೆ. ಹಾಗಾಗಿ ಸ್ಕ್ಯಾನಿಂಗ್ ರಿಪೋರ್ಟ್ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಅಲ್ಲದೆ ಮಾರನೇ ದಿನ ಭಾನುವಾರ ಸ್ಕ್ಯಾನಿಂಗ್ ಮಾಡುವ ರೆಡಿಯಾಲಜಿಸ್‌ಟ್ ಬರುವುದಿಲ್ಲ. ಹಾಗಾಗಿ ಮೈಸೂರಿಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದರು. ಈ ವೇಳೆ ಮೈಸೂರಿಗೆ ತೆರಳುತ್ತಿರುವಾಗ ಮಾರ್ಗ ಮಧ್ಯೆದಲ್ಲಿ ಆಂಬ್ಯುಲೆನ್ಸ್ ನಲ್ಲೇ ಹೆರಿಗೆಯಾಗಿ ಮಗು ಸಾವನ್ನಪ್ಪಿತು. ಬೇರೆ ದಾರಿ ಕಾಣದೆ ವಾಪಸ್ ಜಿಲ್ಲಾಸ್ಪತ್ರೆಗೆ ಕರೆತಂದು ಸೇರಿಸಿದ್ದೇನೆ ಎಂದು ಮಹಿಳೆಯ ಪತಿ ಮಹದೇವ ನೊಂದು ನುಡಿದರು.

ಒಂದು ವೇಳೆ ಜಿಲ್ಲಾಸ್ಪತ್ರೆಯಲ್ಲೇ ಸ್ಕ್ಯಾನಿಂಗ್ ಮಾಡಿ ರಿಪೋರ್ಟ್ ನೀಡಿದ್ದರೆ ಗರ್ಭಿಣಿ ಮಹಿಳೆಯ ಸ್ಥಿತಿಗತಿ ತಿಳಿಯುತ್ತಿತ್ತು. ಆದರೆ ಇಲ್ಲಿ ರಾತ್ರಿ ವೇಳೆ ಸ್ಕ್ಯಾನಿಂಗ್ ಮಾಡುವವರಿಲ್ಲದೆ ಈ ಘಟನೆ ಸಂಭವಿಸಿದೆ.

Advertisement

ಘಟನೆ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಸರ್ಜನ್ ಡಾ.ಮುರಳಿಕೃಷ್ಣ, ಮಹಿಳೆ ಆಸ್ಪತ್ರೆಗೆ ಬರುವ ಮೊದಲೆ ಹೊಟ್ಟೆಯಲ್ಲೇ ಮಗು ಮೃತಪಟ್ಟಿತ್ತು. ಮಹಿಳೆ ಕಡೆಯವರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ನಿರಾಕರಿಸಿ ಅವರೇ ಮೈಸೂರಿಗೆ ಕರೆದೊಯ್ದರು. ಇಲ್ಲೇ ಸೇರ್ಪಡೆಯಾಗಿದ್ದರೆ ಏನೂ ತೊಂದರೆಯಾಗುತ್ತಿರಲಿಲ್ಲ ಎಂದು ತಿಳಿಸಿದರು.

ಆದರೆ ಗರ್ಭಿಣಿ ಮಹಿಳೆಗೆ ಕಾಮಗೆರೆ ಅಥವಾ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿದ್ದರೆ ಮಗುವನ್ನು ಉಳಿಸಿಕೊಳ್ಳಬಹುದಿತ್ತು ಎಂದು ರೋಗಿಯ ಸಂಬಂಧಿಕರು ದೂರಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ರೆಡಿಯಾಲಜಿಸ್ಟಗಳಿದ್ದು, ಒಬ್ಬರು ಹೆರಿಗೆ ರಜೆಯಲ್ಲಿದ್ದಾರೆ. ಹಾಗಾಗಿ ಹಗಲು ವೇಳೆ ಒಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದು ರಾತ್ರಿ ವೇಳೆ ಸ್ಕ್ಯಾನಿಂಗ್ ಸೌಲಭ್ಯ ಕಷ್ಟವಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ

300 ಹಾಸಿಗೆ ಸೌಲಭ್ಯವುಳ್ಳ ಜಿಲ್ಲಾಸ್ಪತ್ರೆಯಲ್ಲಿ ಏಳು ಮಂದಿ ರೆಡಿಯಾಲಜಿಸ್ಟ್ ಗಳು ಇರಬೇಕು. ಆದರೆ ಇಲ್ಲಿರುವುದು ಕೇವಲ ಇಬ್ಬರು ಮಾತ್ರ. ಅದರ‌್ಲಲೂ ಈಗ ಒಬ್ಬರು ರಜೆಯಲ್ಲಿದ್ದು ರೋಗಿಗಳಿಗೆ ಸಮರ್ಪಕವಾದ ಸೇವೆ ಲಭ್ಯವಾಗುತ್ತಿಲ್ಲ ಸರ್ಕಾರ ಈ ಸಮಸ್ಯೆ ಮನಗಂಡು ಅಗತ್ಯ ಸಂಖ್ಯೆಯ ರೆಡಿಯಾಲಜಿಸ್ಟ್ ಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next