ನವದೆಹಲಿ: ‘ಮಕ್ಕಳ ಯೋಗಕ್ಷೇಮ ಸೂಚ್ಯಂಕ’ ಪಟ್ಟಿಯನ್ನು ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ ಮೊದಲ ಮೂರು ಸ್ಥಾನಗಳನ್ನು ಅಲಂಕರಿಸಿವೆ.
ಮಕ್ಕಳ ಶೈಕ್ಷಣಿಕ ವರ್ಷಗಳ ಆರಂಭದಲ್ಲಿಯೇ ಅವರಿಗೆ ಸಿಗುವ ಗುಣಮಟ್ಟದ ಶಿಕ್ಷಣ, ಆರೋಗ್ಯಕರ ವಾತಾವರಣ, ಪರಿಶುದ್ಧವಾದ ಕುಡಿಯುವ ನೀರು, ಉತ್ತಮ ನೈರ್ಮಲ್ಯೀಕರಣ ವ್ಯವಸ್ಥೆಗಳು ಕೇರಳದಲ್ಲಿವೆ. ಜತೆಗೆ, ಪೌಷ್ಟಿಕಾಂಶದ ಕೊರತೆಯಂಥ ಸಮಸ್ಯೆಯನ್ನೂ ಕೇರಳದಲ್ಲಿ ಯಶಸ್ವಿಯಾಗಿ ಪರಿಹರಿಸಲಾಗಿದೆ.
ಹೀಗಾಗಿ, ಆ ರಾಜ್ಯಕ್ಕೆ 0.76 ಅಂಕ ನೀಡಲಾಗಿದೆ. ಇದೇ ವಿಷಯಗಳಲ್ಲಿ, ತಮಿಳುನಾಡು 0.67 ಅಂಕ ಪಡೆದಿದ್ದರೆ, ಹಿಮಾಚಲ ಪ್ರದೇಶ 0.67 ಅಂಕ ಗಳಿಸಿದೆ.
ಆದರೆ, ಪಟ್ಟಿಯ ಕೆಳಗಿನ ಮೂರು ಸ್ಥಾನಗಳಲ್ಲಿ ಇರುವ ಮೇಘಾಲಯ, ಜಾರ್ಖಂಡ್, ಮಧ್ಯಪ್ರದೇಶ ಕ್ರಮವಾಗಿ 0.53, 0.50 ಹಾಗೂ 0.44 ಅಂಕಗಳನ್ನು ಪಡೆದಿವೆ.
ಈ ರಾಜ್ಯಗಳು, ಮಕ್ಕಳು ಬದುಕುಳಿಯುವ ಪ್ರಮಾಣ ಹೆಚ್ಚಿಸುವಲ್ಲಿ, ಪೌಷ್ಟಿಕಾಂಶಗಳ ಪೂರೈಕೆಯಲ್ಲಿ, ಅತ್ಯುತ್ತಮ ಕುಡಿಯುವ ನೀರು ಹಾಗೂ ನೈರ್ಮಲ್ಯೀಕರಣ ವ್ಯವಸ್ಥೆಗಳನ್ನು ಕಲ್ಪಿಸುವ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ. ಜತೆಗೆ, ಬಾಲಾಪರಾಧ ಪ್ರಮಾಣವನ್ನೂ ಗಣ ನೀಯವಾಗಿ ಇಳಿಕೆ ಮಾಡಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.