ಬೀದರ: ಹೆಮ್ಮಾರಿ ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಲಸಿಕೆಯೇ ಪ್ರಮುಖ ಅಸ್ತ್ರ. ಹೀಗಾಗಿ ಲಸಿಕಾಕರಣಕ್ಕೆ ಒತ್ತು ನೀಡುತ್ತಿರುವ ಸರ್ಕಾರ ವಯಸ್ಕರು ಮತ್ತು ಯುವಕರ ಬಳಿಕ ಈಗ ಮಕ್ಕಳಿಗೂ ವ್ಯಾಕ್ಸಿನೇಶನ್ ನಡೆಸುತ್ತಿದೆ. ಆದರೆ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಪ್ರಯತ್ನದ ನಡುವೆಯೂ ಮಕ್ಕಳ ಲಸಿಕಾಕರಣದಲ್ಲಿ ಜಿಲ್ಲೆ ಹಿನ್ನಡೆ ಇದ್ದು, ಶೇ.66.6ರಷ್ಟು ಕನಿಷ್ಠ ಗುರಿ ಸಾಧನೆ ಮಾಡಿದೆ.
ಕೋವಿಡ್ ಮೂರನೇ ಅಲೆ ಜತೆಗೆ ಒಮಿಕ್ರಾನ್ ಹೊಸ ತಳಿಯ ಆತಂಕ ಇದ್ದೆ ಇದೆ. ಸದ್ಯ ಸೋಂಕಿನಿಂದ ಜೀವ ಉಳಿಸಿಕೊಳ್ಳಲು ಲಸಿಕೆಯೇ ಮಾರ್ಗ. ಇನ್ನೂ ಮುಂದಿನ ತಿಂಗಳೊಳಗೆ ಎಸ್ ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಸೇರಿ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುವದರಿಂದ ಮಕ್ಕಳಿಗೆ ಲಸಿಕೆ ನೀಡುವುದು ಬಹಳ ಮುಖ್ಯವಾಗಿದೆ. ಹೀಗಾಗಿ ಸರ್ಕಾರ ಲಸಿಕಾಕರಣವನ್ನು ಆದ್ಯತೆಗೆ ಪಡೆದಿದ್ದು, 15 ರಿಂದ 17 ವರ್ಷದೊಳಗಿನ ಆರೋಗ್ಯವಂತ ಮಕ್ಕಳಿಗೆ ವ್ಯಾಕ್ಸಿನೇಶನ್ ಪ್ರಗತಿಯಲ್ಲಿದೆ.
2007ರ ಜ.1ಕ್ಕಿಂತ ಮೊದಲು ಜನಿಸಿರುವ ಮಕ್ಕಳಿಗೆ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿಯೇ ಆರೋಗ್ಯ ಇಲಾಖೆ ಕ್ಯಾಂಪ್ ನಡೆಸಿ ಕೊವಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು, 28 ದಿನಗಳ ನಂತರ 2ನೇ ಡೋಸ್ ಕೊಡಲಾಗುತ್ತಿದೆ. ಬೀದರ ಜಿಲ್ಲೆಯಲ್ಲಿ 15 ರಿಂದ 17 ವರ್ಷದೊಳಗಿನ ಒಟ್ಟು 1,05,083 ಮಕ್ಕಳನ್ನು ಗುರುತಿಸಲಾಗಿದ್ದು, ಫೆ.3ರವರೆಗೆ ಮೊದಲ ಡೋಸ್‌ನ್ನು ಕೇವಲ 70,026 ಮಕ್ಕಳು (ಶೇ.66.6) ಮಾತ್ರ ಪಡೆದಿದ್ದಾರೆ. ಇನ್ನೂ 2ನೇ ಡೋಸ್‌ನ್ನು 25,709 (ಶೇ.24.47) ಹಾಕಿಸಿಕೊಂಡಿದ್ದಾರೆ. ಈ ಅಂಕಿ-ಅಂಶಗಳ ಪ್ರಕಾರ ಗುರಿ ಸಾಧನೆಯಲ್ಲಿ ಬೀದರ ರಾಜ್ಯದ ಕೊನೆ ಮೂರ್‍ನಾಲ್ಕು ಜಿಲ್ಲೆಗಳಲ್ಲಿ ಸೇರಿದಂತಾಗಿದೆ.
ವಯಸ್ಕರಿಗೆ ಹೋಲಿಕೆ ಮಾಡಿದರೆ, ಮಕ್ಕಳ ಮೇಲೆ ಕೊರೊನಾ ಬೀರಿದ ಅಪಾಯ ಸ್ವಲ್ಪ ಕಡಿಮೆಯೇ. ಆದರೂ ಸೋಂಕಿಗೆ ತುತ್ತಾಗುವ ಅಪಾಯ ಎದುರಿಸುತ್ತಿರುವವರಲ್ಲಿ ಮಕ್ಕಳೂ ಇದ್ದಾರೆ. ಅಲ್ಲದೆ ಒಂದು ವೇಳೆ ಮಕ್ಕಳಿಗೆ ಸೋಂಕು ಬಂದಲ್ಲಿ, ಅವರು ಸೂಪರ್ ಸ್ಪ್ರೆಡರ್ಸ್ ಆಗುತ್ತಾರೆ. ಇದರಿಂದ ಅಪಾಯದ ಆತಂಕವೂ ಹೆಚ್ಚುತ್ತಿದೆ. ಹಾಗಾಗಿ ಸರ್ಕಾರ ಲಸಿಕಾರಣದ ಮೂಲಕ ಕೋವಿಡ್ ಹಬ್ಬುವಿಕೆ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದೆ. ಆದರೆ, ಪಾಲಕರು ಮತ್ತು ಮಕ್ಕಳು ಮಾತ್ರ ವ್ಯಾಕ್ಸಿನೇಶನ್‌ಗೆ ಹಿಂದೇಟು ಹಾಕುತ್ತಿದ್ದಾರೆ.
ಮಕ್ಕಳ ಲಸಿಕೆ ಸುರಕ್ಷಿತವಾಗಿದ್ದು, ವಿಜ್ಞಾನಿಗಳು ಮತ್ತು ತಜ್ಞರ ಸಹ ದೃಢಪಡಿಸಿದ್ದಾರೆ. ಆದರೆ, ಪಾಲಕರು ಮಾತ್ರ ಲಸಿಕೆ ಹಾಕಿದರೆ ಮಕ್ಕಳಿಗೆ ಯಾವ ರೀತಿಯ ಪರಿಣಾಮ ಬೀರಲಿದೆ? ಏನಾದರೂ ಅಡ್ಡ ಪರಿಣಾಮ ಆಗಬಹುದೇ ಎಂಬ ಅನುಮಾನ ಇರುವುದರಿಂದ ಜಿಲ್ಲೆಯಲ್ಲಿ ವ್ಯಾಕ್ಸಿನೇಶನ್‌ದಿಂದ ದೂರ ಉಳಿಯುತ್ತಿದ್ದಾರೆ. ಆದರೆ, ಲಸಿಕೆ ಬಹು ಪ್ರಮುಖ್ಯ ಆಗಿರುವುದರಿಂದ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ, ಲಸಿಕೆ ಬಗೆಗೆ ಅರಿವು ಮೂಡಿಸುವ ಮೂಲಕ ನಿಗದಿತ ಗುರಿ ಸಾಧನೆಗೆ ಪ್ರಯತ್ನಿಸಬೇಕಿದೆ. ಈ ಕಾರ್ಯಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಎನ್ ಜಿಒಗಳು ಸಹ ಕೈಜೋಡಿಸಬೇಕಿದೆ.
ಮಕ್ಕಳ ಲಸಿಕಾರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಗುರಿ ಸಾಧನೆಗೆ ಪ್ರಯತ್ನಿಸಲಾಗುತ್ತಿದೆ. ಮಕ್ಕಳನ್ನು ಪತ್ತೆ ಹಚ್ಚಿ ಲಸಿಕೆ ಹಾಕಿಸುವುದು ದೊಡ್ಡ ಕೆಲಸ ಆಗಿದೆ. ಮಕ್ಕಳನ್ನು ಗುರುತಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಆರೋಗ್ಯ ಇಲಾಖೆಯಿಂದ ವ್ಯಾಕ್ಸಿನೇಶನ್ ಜಾಗೃತಿ ಮೂಡಿಸಲಾಗುತ್ತಿದೆ.
-ಡಾ| ರತಿಕಾಂತ ಸ್ವಾಮಿ, ಡಿಎಚ್‌ಒ, ಬೀದರ
-ಶಶಿಕಾಂತ ಬಂಬುಳಗೆ