Advertisement

ಮಕ್ಕಳ ಕಳ್ಳರ ವದಂತಿಗಳಿಗೆ ಕಿವಿಗೊಡಬೇಡಿ

12:15 AM Sep 27, 2022 | Team Udayavani |

ಇತ್ತೀಚಿನ ದಿನಗಳಲ್ಲಿ ಮಕ್ಕಳ ಕಳ್ಳರ ಕುರಿತಂತೆ ನಕಲಿ ವೀಡಿಯೋಗಳು ಹರಿ ದಾಡುತ್ತಿದ್ದು, ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ‌. ಇದಕ್ಕೆ ಪೂರಕ ವೆಂಬಂತೆ, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಇಟ್ಟಂಗಿ ಹಾಳದಲ್ಲಿ ಮಕ್ಕಳ ಕಳ್ಳರೆಂದು ಶಂಕಿಸಿ ಉತ್ತರ ಭಾರತದವರ ಮೇಲೆ ಹಲ್ಲೆ ನಡೆಸಲಾಗಿದೆ. ಅಷ್ಟೇ ಅಲ್ಲ, ಅಪರಿಚಿತರನ್ನು ಕಂಡೊಡನೆಯೂ ಹಲ್ಲೆ ಮಾಡುವ ಘಟನೆಗಳು ನಡೆಯುತ್ತಿವೆ.

Advertisement

ಇದು ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತವಾದ ಘಟನೆಯೇನಲ್ಲ. ದಕ್ಷಿಣ ಮತ್ತು ಮಧ್ಯ ಕರ್ನಾಟಕಕ್ಕೂ ಈ ಮಕ್ಕಳ ಕಳ್ಳರ ವದಂತಿ ಹಬ್ಬಿದೆ. ಪೊಲೀಸರು ಮತ್ತೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಇಂಥ ಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದ್ದರೂ, ಈ ಬಗ್ಗೆ ಜನತೆ ಕಿವಿಗೊಡುತ್ತಿಲ್ಲ. ಹೀಗಾಗಿ ಇದು ಪೊಲೀಸರಿಗೆ ತಲೆನೋವಿನ ಸಂಗತಿಯಾಗಿ ಮಾರ್ಪಟ್ಟಿದೆ.

ರವಿವಾರವಷ್ಟೇ ರಾಮನಗರದಲ್ಲಿಯೂ ಇಂಥದ್ದೊಂದು ಘಟನೆ ನಡೆದಿದೆ. ಬುರ್ಖಾ ಧರಿಸಿ ಬಂದಿದ್ದ ಏಳು ಮಂದಿಯನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಜ್ಯದ ನಾನಾ ಭಾಗಗಳಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇವೆ. ಎಷ್ಟೋ ಬಾರಿ, ಅಪರಿಚಿತರನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಅವರ ಮೇಲೆ ಹಲ್ಲೆ ನಡೆಸುವ ಕ್ರಮಗಳೂ ಆಗುತ್ತಿವೆ. ಈ ವಿಚಾರದಲ್ಲಿ ಏನು ಮಾಡುವುದು ಎಂಬುದು ಗೊತ್ತಾಗದ ಸ್ಥಿತಿ ಉಂಟಾಗಿದೆ.

ಮಕ್ಕಳ ಕಳ್ಳರ ಕುರಿತ ಈ ವದಂತಿ ಹೆಚ್ಚಾಗಲು ಸಾಮಾಜಿಕ ಜಾಲ ತಾಣ ಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳೇ ಕಾರಣ ಎಂಬುದು ಈಗಾ ಗಲೇ ಬಹಿರಂಗವಾಗಿದೆ. ಹೀಗಾಗಿ ರಾಜ್ಯ ಸರಕಾರ ಮತ್ತು ಪೊಲೀಸರು ಮೊದಲು ಮಾಡಬೇಕಾಗಿರುವ ಸಂಗತಿ ಎಂದರೆ, ಇಂಥ ವೀಡಿಯೋಗಳ ಹರಿದಾಡುವಿಕೆಯನ್ನು ನಿಲ್ಲಿಸುವುದು. ಏಕೆಂದರೆ, ಇಂಥ ವೀಡಿಯೋಗಳೇ ಮತ್ತಷ್ಟು ಆತಂಕವನ್ನು ಹೆಚ್ಚು ಮಾಡುತ್ತವೆ. ಏಕೆಂದರೆ, ಯಾವುದೇ ಊರಿಗೆ ಪ್ರವೇಶ ಮಾಡುವ ಅಪರಿಚಿತರೆಲ್ಲರೂ ಮಕ್ಕಳ ಕಳ್ಳರೇನಲ್ಲ. ಹಾಗೆಂದು ಎಲ್ಲ ಅಪರಿಚಿತರನ್ನೂ ಸಾರಾಸಗಟಾಗಿ ನಂಬುವುದಕ್ಕೂ ಸಾಧ್ಯವಿಲ್ಲ. ಆದರೆ ಇಲ್ಲಿ ಪೊಲೀಸರ ಪಾತ್ರ ಅತ್ಯಂತ ಮಹತ್ವದ್ದು. ಎಲ್ಲೆಲ್ಲಿ ಮಕ್ಕಳ ಕಳ್ಳರ ಬಗ್ಗೆ ಹೆಚ್ಚು ಆತಂಕ ಉಂಟಾಗಿದೆಯೋ ಅಲ್ಲಿ, ಜನರ ನಂಬಿಕೆ ಗಳಿಸುವ ಕೆಲಸವನ್ನು ಪೊಲೀಸ್‌ ಇಲಾಖೆ ಮಾಡಬೇಕು. ಒಂದು ವೇಳೆ ಅಪರಿಚಿತರು ಕಂಡು ಬಂದರೆ, ಅವರ ನಡೆ ನುಡಿ ಅನುಮಾನಾಸ್ಪದವಾಗಿದ್ದರೆ, ಅಂಥವರ ಬಗ್ಗೆ ಸಾರ್ವಜನಿಕರೇ ತತ್‌ಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಜನರೇ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು.

ಸದ್ಯದ ಮಟ್ಟಿಗೆ, ಉತ್ತರ ಕರ್ನಾಟಕದ ವಿಜಯಪುರ, ಗದಗ, ಧಾರ ವಾಡ, ವಿಜಯನಗರ, ಹಾವೇರಿ, ಯಾದಗಿರಿ, ದಕ್ಷಿಣ ಭಾರತದ ಮಂಡ್ಯ, ತುಮಕೂರು, ದೊಡ್ಡಬಳ್ಳಾಪುರ, ರಾಮನಗರ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಇಂಥ ಮಕ್ಕಳ ಕಳ್ಳರ ಸುದ್ದಿಗಳು ಹರಿದಾಡುತ್ತಿವೆ. ಈ ಎಲ್ಲ ಜಿಲ್ಲೆಗಳ ಹಿರಿಯ ಪೊಲೀಸ್‌ ಅಧಿಕಾರಿಗಳೂ ಸಾರ್ವಜನಿಕರಿಗೆ ಇಂಥ ಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ.

Advertisement

ಅತ್ತ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡ ಇತ್ತೀಚೆಗಷ್ಟೇ ಮಕ್ಕಳ ಕಳ್ಳರ ಕುರಿತ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದ್ದರು. ಅಲ್ಲದೆ, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದ್ದರು. ಆದಾಗ್ಯೂ ಇಂಥ ಘಟನೆಗಳು ನಡೆಯುತ್ತಿರುವುದು ಮಾತ್ರ ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ಜನರ ಆತಂಕ ನಿವಾರಿಸುವ ಕ್ರಮ ಮಾಡಲೇಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next