ಯಾದಗಿರಿ: ಹೈದ್ರಾಬಾದ ಕರ್ನಾಟಕ ವ್ಯಾಪ್ತಿಯ ಕಲಬುರಗಿ ವಿಭಾಗದ ಆರು ಜಿಲ್ಲೆಗಳ ಮಕ್ಕಳ ಹಕ್ಕುಗಳ ಸಂಘದ ಮಕ್ಕಳೊಂದಿಗೆ ಸಂವಾದ ಹಾಗೂ ನವದೆಹಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಅಹವಾಲು ಕಾರ್ಯಕ್ರಮ ಜುಲೈ 4 ಮತ್ತು 5ರಂದು ಕಲಬುರಗಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಕ್ಕಳೊಂದಿಗೆ ಸಂವಾದ ಹಾಗೂ ಅಹವಾಲು ಕಾರ್ಯಕ್ರಮದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲಬುರಗಿ, ಬಳ್ಳಾರಿ, ಬೀದರ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಮಕ್ಕಳ ಹಕ್ಕುಗಳ ಸಂಘದ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಜುಲೈ 4ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12:30ಕ್ಕೆ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12:30ರಿಂದ 2:00 ಗಂಟೆಯವರೆಗೆ ಆರ್‌ಟಿಇ ಮತ್ತು ಶಾಲೆ ಬಿಟ್ಟ ಮಕ್ಕಳ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ. ಜುಲೈ 5ರಂದು ಇಡೀ ದಿನ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ಮಕ್ಕಳು ಹಾಜರಾಗಲು ವ್ಯವಸ್ಥೆ ಮಾಡಬೇಕು. ಜುಲೈ 5ರಂದು ನಡೆಯುವ ಮಕ್ಕಳ ಸಮಸ್ಯೆಗಳ ಅಹವಾಲು ಕಾರ್ಯಕ್ರಮದಲ್ಲಿ ಜಿಲ್ಲೆಯ 32 ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದು, ಸಮಸ್ಯೆಗಳಿಗೆ ಸ್ಪಂದಿಸಬೇಕು. ಜಿಲ್ಲೆಯ ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಸತಿ ಶಾಲೆ ಮತ್ತು ವಸತಿ ನಿಲಯಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಸಂಬಂಧಪಟ್ಟಂತೆ ಅಹವಾಲುಗಳಿದ್ದಲ್ಲಿ ಪರಿಶೀಲಿಸಿ, ವರದಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳು ಮಕ್ಕಳ ಸಮಸ್ಯೆಗಳನ್ನು ಗುರುತಿಸಿ, ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಹಾಜರಾಗಲು ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಎಸ್. ಅಲ್ಲಾಭಕ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ. ಮಣ್ಣೂರ, ವನಜಾಕ್ಷಿ ಬೆಂಡಿಗೇರಿ, ಲಾಲಸಾಬ್, ಥಾಮಸ್ ದೊಡ್ಡಮನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಪ್ಪ ಪಾಟೀಲ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್, ಮಕ್ಕಳ ರಕ್ಷಣಾಧಿಕಾರಿ ಗೋವಿಂದ್ ರಾಠೊಡ, ಕಾರ್ಮಿಕ ನಿರೀಕ್ಷಕ ಶಿವಶಂಕರ ಬಿ. ತಳವಾರ, ಎಲ್ಪಿಒ ರಾಜೇಂದ್ರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ| ಹಣಮಂತ್ರಾಯ ಕರಡಿ, ಸಮಿತಿ ಸದಸ್ಯ ಬಿ.ಜಿ. ಪಾಟೀಲ, ಚಂದ್ರಶೇಖರ ಲಿಂಗದಳ್ಳಿ, ಮಾಳಪ್ಪ, ನಿರ್ಮಲಾದೇವಿ ಹೂಗಾರ, ಡಾನ್ ಬಾಸ್ಕೊ ಸಮಾಜ ಸೇವಾ ಕೇಂದ್ರದ ಸಂಯೋಜಕ ಶರಬಯ್ಯ, ಶರಣಪ್ಪ, ಬಾಲ ಮಂದಿರದ ಅಧೀಕ್ಷಕಿ ನಾಗಮ್ಮ ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಹಾಜರಿದ್ದರು.