ಮಂಗಳೂರು: ಪಾಂಡೇಶ್ವರ ಪೊಲೀಸ್ ಠಾಣೆಯ ಕೆಲವು ಸಿಬಂದಿ ಮಕ್ಕಳ ಹಕ್ಕುಗಳಿಗೆ ಚ್ಯುತಿ ಉಂಟಾಗುವಂತೆ ವರ್ತಿಸಿದ್ದಾರೆ ಎಂದು ಆರೋಪಿಸಿ ಚೈಲ್ಡ್ ಲೈನ್‌ಗೆ ದೂರು ಹೋಗಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಲೇರಿದೆ. ಜು.11ರಂದು ಮಕ್ಕಳ ಹಕ್ಕುಗಳ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ.
ಪ್ರಕರಣದ ವಿವರ
ನಾಲ್ಕು ದಿನಗಳ ಹಿಂದೆ ನಗರದ ಜಪ್ಪು ಕುಡುಪಾಡಿಯಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿದ್ದಾಗ ನಾಯಿಯೊಂದು ಕ್ರೀಡಾಂಗಣಕ್ಕೆ ಬಂದಿತ್ತು. ಮಕ್ಕಳು ನಾಯಿಗೆ ಎಸೆದ ಕಲ್ಲು ಪಕ್ಕದ ಮನೆಗೆ ಬಿದ್ದಿತ್ತು. ಇದು ಗಲಾಟೆಗೆ ಕಾರಣವಾಗಿತ್ತು. ಬಳಿಕ ಮಕ್ಕಳ ಕ್ರಿಕೆಟ್ ಆಟ ಮುಂದುವರಿಸಿದ್ದರು. ಈ ಸಂದರ್ಭ ಮನೆ ಮಂದಿ ಮಕ್ಕಳ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಬಂದು ಇಬ್ಬರು ಮಕ್ಕಳನ್ನು ಠಾಣೆಗೆ ಕರೆದೊಯ್ದರು. ಬಳಿಕ ಉಳಿದ ಮಕ್ಕಳನ್ನೂ ಠಾಣೆಗೆ ಕರೆಸಿಕೊಂಡಿದ್ದರು. ಅವರನ್ನು ವಿಚಾರಣೆ ನಡೆಸಿ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರುವಂತೆ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ 7 ಮಂದಿ ಮಕ್ಕಳು ಚೈಲ್ಡ್ ಲೈನ್‌ಗೆ ದೂರು ನೀಡಿದ್ದರು.
’10- 11 ವರ್ಷದೊಳಗಿನ ಮಕ್ಕಳು ದೂರು ನೀಡಿರುವುದರಿಂದ ದೂರನ್ನು ಸ್ವೀಕರಿಸಿ ಅದನ್ನು ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ. ಜು. 11ರಂದು ಮಕ್ಕಳ ಹಕ್ಕುಗಳ ನ್ಯಾಯಾಲಯದಲ್ಲಿ ಇದರ ವಿಚಾರಣೆ ನಡೆಯಲಿದೆ’ ಎಂದು ಸಮಿತಿಯ ನಿರ್ದೇಶಕ ರೆನ್ನಿ ಡಿ’ಸೋಜಾ ತಿಳಿಸಿದ್ದಾರೆ. ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ವ್ಯವಹರಿಸಲು ಪೊಲೀಸ್ ಠಾಣೆಯಲ್ಲಿ ವಿಶೇಷ ತರಬೇತಿ ಹೊಂದಿದ ‘ಮಕ್ಕಳ ರಕ್ಷಣಾಧಿಕಾರಿ’ ಇರಬೇಕು. ಅವರು ಪ್ರಕರಣವನ್ನು ಮಕ್ಕಳ ಕಾಯ್ದೆ ಪ್ರಕಾರ ಮಕ್ಕಳ ಸ್ನೇಹಿ ಸ್ವರೂಪದಲ್ಲಿ ವಿಚಾರಣೆ ನಡೆಸಬೇಕು. ಹೆತ್ತವರನ್ನೂ ಕರೆದು ಅವರ ಸಮಕ್ಷಮ ಕೌನ್ಸೆಲಿಂಗ್ ನಡೆಸಬೇಕಾಗುತ್ತದೆ ಎಂದು ರೆನ್ನಿ ಡಿ’ಸೋಜಾ ವಿವರಿಸಿದ್ದಾರೆ.
‘ಈ ಪ್ರಕರಣದಲ್ಲಿ ಮಕ್ಕಳನ್ನು ಅವರ ಹೆತ್ತವರೇ ಠಾಣೆಗೆ ಕರೆದುಕೊಂಡು ಬಂದಿದ್ದರು. ಠಾಣೆಯಲ್ಲಿದ್ದ ಅಧಿಕಾರಿಗಳು ಹೆತ್ತವರ ಸಮಕ್ಷಮ ಮಕ್ಕಳನ್ನು ವಿಚಾರಣೆ ನಡೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ’ ಎಂದು ಈ ಕುರಿತಂತೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರು ತಿಳಿಸಿದ್ದಾರೆ.