ಬೆಂಗಳೂರು: ಮಕ್ಕಳ ಹಕ್ಕುಗಳ ಕುರಿತು ಚರ್ಚಿಸಲು ಮಹಾರಾಷ್ಟ್ರ, ಗೋವಾ ಸೇರಿದಂತೆ ದಕ್ಷಿಣ ರಾಜ್ಯಗಳ ಪ್ರಾದೇಶಿಕ ಸಮ್ಮೇಳನವನ್ನು ಗುರುವಾರ (ಸೆ.14) ನಡೆಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಾವೇಶದ ವಿವರ ನೀಡಿದ ಅವರು, ರಾಜ್ಯ ವಿಧಾನಪರಿಷತ್ತಿನಲ್ಲಿ ಮಕ್ಕಳ ಹಕ್ಕುಗಳ ಕುರಿತು ಸಾಕಷ್ಟು ಚರ್ಚೆ ನಡೆಸಿದ ಮೇಲೆ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರವೂ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೇರಿ, ಕರ್ನಾಟಕ ಅಲ್ಲದೇ ಮಹಾರಾಷ್ಟ್ರ ಮತ್ತುಗೋವಾ ರಾಜ್ಯಗಳ ಶಾಸಕರ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ ಎಂದರು.
ಗುರುವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ವಿಧಾನ ಪರಿಷತ್ ಸಭಾಪತಿಗಳು, ಉಳಿದ ರಾಜ್ಯಗಳ ಸಭಾಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಏಳು ರಾಜ್ಯಗಳಿಂದ ಸುಮಾರು 50 ಶಾಸಕರು ಸಮಾವೇಶಕ್ಕೆ ಆಗಮಿಸಲಿದ್ದಾರೆ. ರಾಜ್ಯದ ಸುಮಾರು 30 ಶಾಸಕರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಅವರೊಂದಿಗೆ ಯುನಿಸೆಫ್ ಪ್ರತಿನಿಧಿಗಳು, ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸುವ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕೂಡ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಒಂದು ದಿನದ ಸಮಾವೇಶದಲ್ಲಿ ಎಂಟು ರಾಜ್ಯಗಳಲ್ಲಿನ ಮಕ್ಕಳ ಸಮಸ್ಯೆಗಳು, ಅಲ್ಲಿನ ಸರ್ಕಾರಗಳು ಮಕ್ಕಳ ಹಕ್ಕು ರಕ್ಷಣೆಗೆ ತೆಗೆದುಕೊಂಡ ಕ್ರಮಗಳು ಹಾಗೂ ಮಕ್ಕಳ ಹಕ್ಕು ರಕ್ಷಣೆಯಲ್ಲಿ ಯಾವ ರಾಜ್ಯ ಮುಂಚೂಣಿಯಲ್ಲಿದೆ ಎಂಬ ವರದಿಗಳನ್ನು ಮಂಡಿಸಲಾಗುತ್ತದೆ.ಸಮಾವೇಶದ ಕೊನೆಯಲ್ಲಿ ಮಕ್ಕಳ ಹಕ್ಕು ರಕ್ಷಣೆ ಕುರಿತ “ಬೆಂಗಳೂರು ಘೋಷಣೆ’ ಮಾಡಲು ನಿರ್ಧರಿಸಲಾಗಿದೆ
ಎಂದು ಶಂಕರ ಮೂರ್ತಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜಾ, ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಶರಣಪ್ಪ ಮಟ್ಟೂರು ಹಾಜರಿದ್ದರು.