Advertisement

ಡಿಕೆಶಿ ವಿರುದ್ಧ ಕ್ರಮ ತೆಗೆದುಕೊಳ್ಳಿ: ಡಿಜಿಪಿಗೆ ಮಕ್ಕಳ ಆಯೋಗದ ಪತ್ರ

11:53 AM Jan 11, 2022 | Team Udayavani |

ಬೆಂಗಳೂರು:ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಒಂದಿಲ್ಲೊಂದು ವಿವಾದ ಸೃಷ್ಟಿಸಿಕೊಳ್ಳುತ್ತಲೇ ಬಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಈಗ ಮತ್ತೊಂದು ಆತಂಕ ಎದುರಾಗಿದೆ. ಅವರ ವಿರುದ್ಧ ಪೋಕ್ಸೋ ಹಾಗೂ ಆರ್‌ಟಿಇ ಕಾಯಿದೆ ಅನ್ವಯ ಶೀಘ್ರ ಕ್ರಮ ತೆಗೆದುಕೊಂಡು ವರದಿ ನೀಡುವಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಪತ್ರ ಮುಖೇನ ನಿರ್ದೇಶನ ನೀಡಿದೆ.

Advertisement

ಶಾಲಾ ವಿದ್ಯಾರ್ಥಿಗಳನ್ನು ರಾಜಕೀಯ ಕಾರ್ಯಕ್ರಮಕ್ಕೆ ಬಳಸಿಕೊಳ್ಳುವುದರ ಜತೆಗೆ ಸೂಕ್ತ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ತೆಗೆದುಕೊಂಡ ಕ್ರಮ ಏನೆಂಬ ಬಗ್ಗೆ ಏಳು ದಿನದೊಳಗಾಗಿ ವರದಿ ನೀಡಿ ಎಂದು ಆಯೋಗದ ಅಧ್ಯಕ್ಷೆ ಪ್ರಿಯಾಂಕ ಕನೂನ್ಗೋ ಸೂಚಿಸಿದ್ದಾರೆ.

ಕೋವಿಡ್ ನಿಯಮ ಉಲ್ಲಂಘನೆಗಾಗಿ ಸೋಮವಾರ ರಾಜ್ಯ ಸರಕಾರ ಡಿ.ಕೆ.ಶಿವಕುಮಾರ್ ಸೇರಿದಂತೆ 30 ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಇದರ ಬೆನ್ನಲ್ಲೆ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗವೂ ಅಖಾಡಕ್ಕೆ ಇಳಿದಿದ್ದು, ಮೇಕೆದಾಟು ಪಾದಯಾತ್ರೆ ರಾಷ್ಟ್ರ ಮಟ್ಟದಲ್ಲಿ ವಿವಾದ ಸೃಷ್ಟಿಸುವುದು ನಿಚ್ಚಳವಾಗಿದೆ.

ಏನಿದು ವಿವಾದ ? :
ಮೇಕೆದಾಟು ಪಾದಯಾತ್ರೆಯ ಎರಡನೇ ದಿನ ಕನಕಪುರದ ಶಾಲೆಗೆ ಭೇಟಿ ನೀಡಿದ್ದ ಶಿವಕುಮಾರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾಸ್ಕ್ ಧರಿಸದೇ ಮಕ್ಕಳ ಜತೆ ಅರ್ಧಗಂಟೆಗೂ ಹೆಚ್ಚು ಕಾಲ ಸಮಯ ಕಳೆದಿದ್ದರು. ಜತೆಗೆ ಮಕ್ಕಳಿಂದ ರಾಜಕೀಯ ಘೋಷಣೆ ಹಾಕಿಸಿದ್ದರು. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಲಾಗಿತ್ತು.

ಮಕ್ಕಳ ಜತೆಗೆ ಕಳೆದ ಸಮಯದ ವಿಡಿಯೋ ತುಣುಕನ್ನು ಶಿವಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಆಯೋಗ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next