ಉದಕ ಮಂಡಲ, ತಮಿಳು ನಾಡು : ಇಲ್ಲಿಂದ ಸುಮಾರು 80 ಕಿ.ಮೀ ದೂರದ ಗುಡಲೂರು ಎಂಬಲ್ಲಿ ಐದು ಲಕ್ಷ ರೂ.ಗೆ ಮೂರು ತಿಂಗಳ ಹಸುಳೆಯನ್ನು ಖರೀದಿಸಲಿದ್ದ ನಾಲ್ವರು ಸದಸ್ಯರ ಗ್ಯಾಂಗ್ ಒಂದನ್ನು ಬಂಧಿಸುವ ಮೂಲಕ ಪೊಲಿಸರು ಶಿಶು ಕಳ್ಳಸಾಗಣೆ ಜಾಲವೊಂದನ್ನು ಬಯಲಿಗೆಳೆದಿದ್ದಾರೆ.
ಕಿಳಪುಳ್ಳಿ ಎಂಬಲ್ಲಿನ ನಿವಾಸಿಯಾಗಿರುವ ಎರಡು ಮಕ್ಕಳ ತಾಯಿ ಭುವನೇಶ್ವರಿ ಯೊಂದಿಗೆ ಆಖೆಯ ಮನೆಯಲ್ಲಿ ಗ್ಯಾಂಗ್ ಸದಸ್ಯರು ಮಗುವೊಂದನ್ನು ಐದು ಲಕ್ಷ ರೂ.ಗೆ ಖರೀದಿಸುವ ವಹಿವಾಟನ್ನು ನಿನ್ನೆ ಭಾನುವಾರ ರಾತ್ರಿ ನಡೆಸಿದ್ದರು.
ಇದರ ಬಗ್ಗೆ ಸುಳಿವು ಪಡೆದ ನೆರೆಕರೆಯವರು ಪೊಲೀಸರಿಗೆ ಹಾಗೂ ಮಕ್ಕಳ ಹೆಲ್ಪ್ ಲೈನ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರನ್ನು ಜಾಗೃತಗೊಳಿಸಿದರು.
ಮಕ್ಕಳ ಕಳ್ಳಸಾಗಣೆ ತಂಡದ ಸದಸ್ಯರು ಇಂದು ಸೋಮವಾರ ಬೆಳಗ್ಗೆ ಭುವನೇಶ್ವರಿಯ ಮನೆಯಲ್ಲಿ ಆಕೆಗೆ ಐದು ಲಕ್ಷ ರೂ. ನೀಡುವ ಸ್ವಲ್ಪ ಮೊದಲು ಅಲ್ಲಿಗೆ ತಲುಪಿದ ಅಧಿಕಾರಿಗಳು, ಕೇರಳ ಮೂಲದ ಮಹಿಳೆಯಾಗಿರುವ ಗ್ರಾಮ ಆರೋಗ್ಯ ದಾದಿಯೋರ್ವಳ ಸಹಿತ ನಾಲ್ವರನ್ನು ಬಂಧಿಸಿದರು.
ಮಕ್ಕಳ ಕಳ್ಳಸಾಗಣೆ ನಡೆಸುವ ಈ ತಂಡದ ಸದಸ್ಯರು ಕಡಿಮೆ ದುಡ್ಡಿಗೆ ಶಿಶುಗಳನ್ನು ಖರೀದಿಸಿ ಬಳಿಕ ಆ ಶಿಶುಗಳನ್ನು ಅತೀ ಹೆಚ್ಚಿನ ಬೆಲೆಗೆ ಮಕ್ಕಳಿಲ್ಲದ ದಂಪತಿಗೆ ಮಾರುತ್ತಿದ್ದರು ಎಂದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.