Advertisement

ಬಾಲ್ಯವಿವಾಹ ನಿರ್ಮೂಲನೆಯಾಗಲಿ

10:18 AM Jan 28, 2019 | |

ಮೊಳಕಾಲ್ಮೂರು: ಸಮಾಜದಲ್ಲಿನ ಅನಿಷ್ಠ ಪದ್ಧತಿಗಳಾದ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ. ಹೊನ್ನಪ್ಪ ಹೇಳಿದರು.

Advertisement

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯ ಗೀತ ಮತ್ತು ನಾಟಕ ವಿಭಾಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್‌, ಶಿಶು ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಇವುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೇಟಿ ಬಚಾವೋ ಬೇಟಿ ಪಡಾವೋ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯವಿವಾಹ ಮಾಡುವುದರಿಂದ ಮಹಿಳೆಯರು ಅನಾರೋಗ್ಯಕ್ಕೀಡಾಗಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಮೂಢನಂಬಿಕೆ ಮತ್ತು ಕೆಟ್ಟ ಸಂಪ್ರದಾಯಗಳಿಂದ ಬಾಲ್ಯವಿವಾಹಗಳು ನಡೆದು ಸಮಾಜವನ್ನು ದುಸ್ಥಿತಿಗೆ ತಳ್ಳಲಾಗುತ್ತಿದೆ. ಅಜ್ಞಾನ ಮತ್ತು ಮೂಢ ನಂಬಿಕೆಗಳನ್ನು ನಿರ್ಮೂಲನೆ ಮಾಡಲು ಅನಕ್ಷರತೆಯೇ ಕಾರಣ. ಆದ್ದರಿಂದ ಪ್ರತಿಯೊಂದು ಮಗುವನ್ನೂ ಕಡ್ಡಾಯವಾಗಿ ಶಾಲೆಗೆ ಸೇರಿಸಿ ಉನ್ನತ ಶಿಕ್ಷಣ ನೀಡಬೇಕು. ಕುಟುಂಬದಲ್ಲಿನ ಬಡತನ ಇನ್ನಿತರ ಕಾರಣಗಳಿಂದ ಮಕ್ಕಳನ್ನು ಕೈಗಾರಿಕೆಗಳು, ಇಟ್ಟಿಗೆ ಭಟ್ಟಿ, ಹೋಟೆಲ್‌ ಹಾಗೂ ಇನ್ನಿತರ ಕೆಲಸಗಳಿಗೆ ಕಳುಹಿಸಬಾರದು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಕಡ್ಡಾಯವಾಗಿ ಶಾಲೆಗೆ ಸೇರಿಸಿ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಿದ್ದಾಪುರದ ಶ್ರೀ ಶಂಭುಲಿಂಗೇಶ್ವರ ಯಕ್ಷ ನಾಟ್ಯಮೇಳ ಕಲಾವಿದ ಸಂತೋಷ್‌ ಹೆಗಡೆ ಹಾಗೂ ಸಂಗಡಿಗರು ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ದುಷ್ಪರಿಣಾಮ ಬಿಂಬಿಸುವ ಯಕ್ಷಗಾನವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next