ಚಿಕ್ಕಬಳ್ಳಾಪುರ: ಸಮಾಜದಲ್ಲಿ ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿ ಜೀವಂತವಾಗಿರುವುದು ವಿಷಾದನೀಯ. ಮುಂದಿನ ದಿನಗಳಲ್ಲಿ ಯಾವುದೇ ಪೋಷಕರು ಬಾಲ್ಯ ವಿವಾಹ ಮಾಡಲು ಮುಂದಾದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಕಾನೂನು ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣಧಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಬಾಲ್ಯವಿವಾಹಗಳನ್ನು ತಡೆಯುವ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ, ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ ತಡೆಗಟ್ಟಲು ಜಿಲ್ಲಾಮಟ್ಟದ ಸಮನ್ವಯ ಸಮಿತಿ ಹಾಗೂ ಸಖೀ ಒನ್ ಸ್ಟಾಪ್ ಸೆಂಟರ್ ಯೋಜನೆಯ ಜಿಲ್ಲಾಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರಿವು ಮೂಡಿಸಿ: ಪ್ರತಿಯೊಂದು ಗ್ರಾಮಗಳಲ್ಲಿ ಬಾಲ್ಯ ವಿವಾಹ ನಡೆಸದಂತೆ ಅರಿವು ಮೂಡಿಸಿ, ತಾಲೂಕು ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ, ವಿಲೇಜ್ ಅಕೌಂಟೆಂಟ್, ವೈದ್ಯಕೀಯ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆಮುಂತಾದವರು ಬಾಲ್ಯ ವಿವಾಹ ತಡೆಯಲು ಶ್ರಮಿಸ ಬೇಕು. ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮ ಬಗ್ಗೆಪೋಷಕರಲ್ಲಿ ಅರಿವು ಮೂಡಿಸಬೇಕು ಎಂದರು.
ನೋಟಿಸ್ ನೀಡಿ: ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಬಾಲ್ಯ ವಿವಾಹ ಮಾಡಿದಂತಹ ಪೋಷಕರ ವಿರುದ್ಧ ಎಫ್‌ಐಆರ್ ದಾಖಲಿಸಿ, ಗ್ರಾಮಗಳಲ್ಲಿ ನಡೆದರೆ ಆ ಗ್ರಾಮದ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಪಂ ಅಧಿಕಾರಿಗಳಿಗೆ ನೋಟಿಸ್ ನೀಡಿ ಸೂಚಿಸಿದರು. ಎನ್.ಆರ್.ಸಿ ಕೇಂದ್ರಗಳಲ್ಲಿ ಇರುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಿ ಎಂದು ತಿಳಿಸಿದರು. ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಬಾಲ್ಯವಿವಾಹ ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ತಡೆಗಟ್ಟಲು ನ್ಯಾಯಾಧೀಶ ದೇವರಾಜ್, ಜಿಲ್ಲಾಧಿಕಾರಿಆರ್.ಲತಾ,ಎಸ್ಪಿ ಮಿಥುನ್‌ಕುಮಾರ್‌ಮತ್ತಿತರರುಪ್ರತಿಜ್ಞೆ ಸ್ವೀಕರಿಸಿದರು.ಸಭೆಯಲ್ಲಿಹಿರಿಯಸಿವಿಲ್‌ನ್ಯಾಯಾಧೀಶ ಹೆಚ್.ದೇವರಾಜು, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಮೊಹ್ಮದ್ ಉಸ್ಮಾನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
2020-21ನೇ ಸಾಲಿನಲ್ಲಿ ಬಾಲ್ಯವಿವಾಹ ಸಂಬಂಧ 98 ದೂರು ಸ್ವೀಕರಿಸಲಾಗಿದೆ. ಇದರಲ್ಲಿ 92 ತಡೆಗಟ್ಟಲಾಗಿದೆ. 6 ನಡೆದಿದ್ದು, ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ.
–ನಾರಾಯಣ ಸ್ವಾಮಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ