ಹುಬ್ಬಳ್ಳಿ: ಬಾಲ್ಯವಿವಾಹ ತಡೆಗೆ ಜಾಗೃತಿ ಕಾರ್ಯ ಕೈಗೊಳ್ಳುತ್ತಿದ್ದರೂ, ಸಮೀಕ್ಷೆಯೊಂದರ ಪ್ರಕಾರ ಈಗಲೂ ಶೇ.29ರಷ್ಟು ಬಾಲ್ಯವಿವಾಹ ನಡೆಯುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಡಾ| ಎಚ್.ಎಚ್. ಕುಕನೂರ ವಿಷಾದ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರಿನ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇಲ್ಲಿನ ಘಂಟಿಕೇರಿಯ ಬಾಲಕಿಯರ ಸರಕಾರಿ ಬಾಲ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಜಾಗೃತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ ಜಿಲ್ಲೆಯಲ್ಲಿ ಪ್ರತಿ ತಿಂಗಳು 2-3 ಬಾಲ್ಯವಿವಾಹ ಪ್ರಕರಣ ನಡೆಯುತ್ತಿವೆ. ರಾಜ್ಯ ಸರಕಾರ ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆ, ತಾಲೂಕು, ಗ್ರಾಮಮಟ್ಟಗಳಲ್ಲಿ ಬಾಲ್ಯವಿವಾಹ ತಡೆ ಆಚರಿಸುತ್ತಿದ್ದು, ಅದು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ.
ಆದ್ದರಿಂದ ಪ್ರತಿ ತಿಂಗಳು 21ನೇ ತಾರೀಖೀನಂದು ಪ್ರತಿ ಗ್ರಾಮಮಟ್ಟದಲ್ಲಿ ಬಾಲ್ಯವಿವಾಹ ತಡೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಎಲ್.ಎಸ್. ಅಂಬ್ಲಿ ಮಾತನಾಡಿ, ಬಾಲ್ಯವಿವಾಹವೊಂದು ಸಾಮಾಜಿಕ ಪಿಡುಗಾಗಿದ್ದು, ಈ ಕುರಿತು ಜನರಲ್ಲಿ ಮೊದಲು ತಿಳಿವಳಿಕೆ ಮೂಡಿಸಬೇಕಾಗಿದೆ ಎಂದರು.
ಬಿ.ವೈ. ಪಾಟೀಲ ಮಾತನಾಡಿ, ಹುಬ್ಬಳ್ಳಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಬಿ. ಮುನಿಯಪ್ಪನವರ ಮಾತನಾಡಿದರು. ಉಣಕಲ್ಲ ಸರಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕಿ ವಿಜಯಲಕ್ಷ್ಮೀ ಪಾಟೀಲ, ಸರಕಾರಿ ಮನೋವಿಕಲ ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ದೀಪಾ ಜಾವೂರ, ಧಾರವಾಡದ ಸರಕಾರಿ ವೀಕ್ಷಣಾಲಯದ ಅಧೀಕ್ಷಕ ಮುತ್ತಣ ಸಿ.ಎ., ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ತೆರೆದ ತಂಗುದಾಣ ಸಿಬ್ಬಂದಿ, ಬಾಲಮಂದಿರದ ಅಧೀಕ್ಷಕರು, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು ಇದ್ದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ನಿಂಗಪ್ಪ ಮಡಿವಾಳರ ನಿರೂಪಿಸಿದರು. ಘಂಟಿಕೇರಿ ಸರಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಅನ್ನಪೂರ್ಣ ಸಂಗಳದ ವಂದಿಸಿದರು. ಇದಕ್ಕೂ ಮುನ್ನ ಸಿಬಿಟಿಯಿಂದ ಘಂಟಿಕೇರಿಯ ಬಾಲಕಿಯರ ಸರಕಾರಿ ಬಾಲ ಮಂದಿರವರೆಗೆ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ತಡೆಗಟ್ಟುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಜಾಗೃತಿ ಜಾಥಾಕ್ಕೆ ಪಾಲಿಕೆ ಸದಸ್ಯೆ ಲಕ್ಷ್ಮೀಬಾಯಿ ಬಿಜವಾಡ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.