ಚನ್ನಪಟ್ಟಣ: ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಬಾಲ್ಯ ವಿವಾಹವನ್ನು ತಳಹಂತದಲ್ಲಿ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಸಾಕಷ್ಟು ಅನಾಹುತಗಳು ಸಂಭವಿಸುತ್ತವೆ ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಹಲ್ಯ ಎಚ್ಚರಿಸಿದರು. ಪಟ್ಟಣದ ಗುರುಭವನದಲ್ಲಿ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪ್ರಡ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.
ವಯಸ್ಸಿನ ದೃಢೀಕರಣ ಅಗತ್ಯ: ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಬಾಲ ನ್ಯಾಯ ಮಂಡಳಿ ಸದಸ್ಯ ಶಿವಲಿಂಗಯ್ಯ ಮಾತನಾಡಿ, ವಿವಾಹಕ್ಕಾಗಿ ಛತ್ರಗಳನ್ನು ಕಾಯ್ದಿರಿಸುವ ವೇಳೆಯಲ್ಲಿ ಮಾಲೀಕರುಗಳು ಮದುವೆಯ ದಿನಾಂಕವನ್ನು ಗುರುತಿಸುವ ಮೊದಲು ವಯಸ್ಸಿನ ದೃಢೀಕರಣ ಚೀಟಿಯನ್ನು ತೆಗೆದುಕೊಳ್ಳಬೇಕು. ಪೋಷಕರು ಮದುವೆ ಮಾಡುವ ಮುನ್ನ ಬಾಲ್ಯ ವಿವಾಹದಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು ಎಂದರು.
ಉತ್ತಮ ಸಮಾಜಕ್ಕೆ ಕೈ ಜೋಡಿಸಿ: ಪ್ರçಡ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೈ.ಪೀರ್ ಸಾಹೇಬ್ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟಲು ಧಾರ್ಮಿಕ ಮುಖಂಡರು, ಕಲ್ಯಾಣ ಮಂಟಪದ ಮಾಲೀಕರು, ಪತ್ರಿಕ ಮುದ್ರಣಕಾರರು, ಮದುವೆ ಅಯೋಜಕರು ಮತ್ತು ಸ್ವಯಂ ಸೇವಾ ಸಂಸ್ಥೆಯವರ ಪಾತ್ರ ಬಹಳ ಮುಖ್ಯವಾಗಿದೆ. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ಕೈಜೋಡಿಸಬೇಕು. ಬಾಲ್ಯ ವಿವಾಹವಾದರೆ ಬಾಲ್ಯ ವಿವಾಹದ ಅಪರಾಧಕ್ಕೆ ಎರಡು ವರ್ಷಗಳವರೆಗೆ ಕಠಿಣ ಜೈಲುವಾಸ ಅಥವಾ 1 ಲಕ್ಷ ರೂ. ವರೆಗೆ ದಂಡ ವಿಸಲಾಗುತ್ತದೆಎಂದು ತಿಳಿಸಿದರು.
ಬಾಲ್ಯ ವಿವಾಹ ತಡೆಯುತ್ತಿಲ್ಲ: ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಷಣ್ಮುಗಂ ಸುಂದರಂ ಮಾತನಾಡಿ, ಮದುವೆ ನಡೆಯುತ್ತಿರುವಾಗ ಬಾಲ್ಯ ವಿವಾಹ ಎಂದು ತಿಳಿದರು ಸಹ ಜನರು ಈ ಮದುವೆಯನ್ನು ತಡೆಯುವುದಿಲ್ಲ. ಘಟನೆ ನಡೆಯುತ್ತಿರುವಾಗ ಸುಮ್ಮನಿರುತ್ತಾರೆ. ಅದು ಸರಿಯಲ್ಲ, ಹೀಗಾಗಿಯೇ ಇಂದಿಗೂ ಭಾರತದಲ್ಲಿ ಬಾಲ್ಯ ವಿವಾಹ ಪದ್ಧತಿ ಜೀವಂತವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕುಸುಮಲತಾ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳ ಕಲ್ಯಾಣ ಸಮಿತಿಯ ಶಿವಲಿಂಗಯ್ಯ, ಕಾನೂನು ಪರೀಕ್ಷಣಾಧಿಕಾರಿ ಸವಿತಾ.ಎಸ್.ಆರ್, ಮಕ್ಕಳ ಸಹಾಯ ವಾಣಿ ಸಂಯೋಜಕ ರಾಮಚಂದ್ರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಗಾಯಕ ಚೌ.ಪು.ಸ್ವಾಮಿ ಪ್ರಾರ್ಥಿಸಿದರು, ಪ್ರçಡ್ ಸಂಸ್ಥೆಯ ಹೇಮಾವತಿ ಸ್ವಾಗತಿಸಿದರು, ಸೌಮ್ಯ ವಂದನಾರ್ಪಣೆ ಮಾಡಿದರು. ಸೌಮ್ಯ ಮತ್ತು ಭವ್ಯ ನಿರೂಪಣೆಯನ್ನು ನಡೆಸಿಕೊಟ್ಟರು.