Advertisement
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಮಾರ್ಚ್‌ತಿಂಗಳಲ್ಲಿ ಲಾಕ್‌ಡೌನ್ ಘೋಷಣೆ ಮಾಡಿ ಯಾರೂ ಕೂಡ ಮನೆಯಿಂದ ಹೊರಬರಬೇಡಿ ಎಂದು ಎಲ್ಲೆಡೆ ಬಂದೋಬಸ್ತ್ ಮಾಡಿದ್ದ ಸಂದರ್ಭವನ್ನೇ ದುರುಪಯೋಗ ಮಾಡಿಕೊಂಡ ಕೆಲವರು ಸದ್ದಿಲ್ಲದೆ ಮಕ್ಕಳ ಮದುವೆ ಮಾಡಿ ಮುಗಿಸಲು ಮುಂದಾಗಿದ್ದರು ಎಂಬುದು ಆತಂಕಕಾರಿ ಸಂಗತಿ. 2020 ಮಾರ್ಚ್‌ನಿಂದ ಮೇ ತಿಂಗಳರೆಗಿನ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧ ಇಲಾಖೆಯ, ವಿವಿಧ ಹಂತದ ಅಧಿಕಾರಿಗಳು 50 ಬಾಲ್ಯವಿವಾಹ ಪ್ರಕರಣಗಳನ್ನು ತಡೆಹಿಡಿದು ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಏಳು ಬಾಲಕಿಯರನ್ನು ಬಾಲ್ಯವಿವಾಹದಿಂದ ರಕ್ಷಿಸಿದ್ದಾರೆ. ಇದೇ ವಿಚಾರಕ್ಕೆ ಒಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ ಭಾಗಗಳಲ್ಲಿ ಕದ್ದು ಮುಚ್ಚಿ ಬಾಲ್ಯವಿವಾಹ ಮಾಡುವ ಪ್ರಯತ್ನಗಳು ಆಗಾಗ ನಡೆಯುತ್ತವೆ. ಹೊಸದುರ್ಗ, ಹಿರಿಯೂರು ಹಾಗೂ ಹೊಳಲ್ಕೆರೆ ತಾಲೂಕು ವ್ಯಾಪ್ತಿಗಳಲ್ಲಿ ಇದು ಕೊಂಚ ನಿಯಂತ್ರಣದಲ್ಲಿದೆ.
Related Articles
Advertisement
ನೆರವಿಗೆ ಬಂತು ಸಹಾಯವಾಣಿ: ಸರ್ಕಾರ ಮಕ್ಕಳ ನೆರವಿಗಾಗಿ ರೂಪಿಸಿರುವ 1098 ಮಕ್ಕಳ ಸಹಾಯವಾಣಿಗೆ ಬಂದಿರುವ ಕರೆಗಳ ಜಾಡು ಹಿಡಿದು ಬಾಲ್ಯವಿವಾಹ ತಡೆಯಲಾಗಿದೆ. ಸಾಮಾನ್ಯವಾಗಿ ಬೆಳಗಿನ ಜಾವ 4 ರಿಂದ 5 ಅಥವಾ ಮಧ್ಯರಾತ್ರಿ ವೇಳೆಗೆ ಹೆಚ್ಚು ಮದುವೆಗಳು ನಡೆಯುತ್ತಿದ್ದವು ಎನ್ನುವುದು ಅಧಿಕಾರಿಗಳ ದಾಳಿ ವೇಳೆ ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಕೋಟೆನಾಡಿನಲ್ಲಿ ಬಾಲ್ಯವಿವಾಹ ಪಿಡುಗು ಇನ್ನೂ ಜೀವಂತವಾಗಿದ್ದು, ಅದಕ್ಕೆ ತಡೆ ಹಾಕಲು ಮತ್ತಷ್ಟು ಶ್ರಮ ಅಗತ್ಯ.
ಬಾಲ್ಯವಿವಾಹ ಪ್ರಕರಣಗಳ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿ ತಡೆಯುವ ಕೆಲಸ ಒಂದೆಡೆಯಾದರೆ, ಮದುವೆ ತಡೆದ ಮಕ್ಕಳಿಗೆ 18 ವರ್ಷ ಪೂರ್ಣವಾಗುವವರೆಗೆ ಆಗಾಗ ಅವರ ಮನೆ, ಶಾಲೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದೇವೆ. ಇದರಿಂದ ಮಕ್ಕಳನ್ನು ಬಾಲ್ಯದಲ್ಲೇ ಮದುವೆಗೆ ದೂಡುವ ಪೋಷಕರ ಆಲೋಚನೆಯಲ್ಲಿ ಬದಲಾವಣೆ ತರಬಹುದು. ವೆಂಕಟಲಕ್ಷ್ಮೀ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
-ತಿಪ್ಪೇಸ್ವಾಮಿ ನಾಕೀಕೆರೆ