Advertisement
ಇದು ಬೀದರ ಸಮೀಪದ ಹೊನ್ನಡಿ ಎಂಬ ಪುಟ್ಟ ಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ನೈಜ ಘಟನೆ. ಪುಟ್ಟ ಬಾಲಕಿಯ ಮದುವೆಗಾಗಿ ಗ್ರಾಮಸ್ಥರೆಲ್ಲರೂ ಸೇರಿದ್ದರು. ಕೆಲವೇ ಕ್ಷಣಗಳಲ್ಲಿ ಮದುವೆ ನಡೆಯಬೇಕಿತ್ತು. ಆದರೆ, ಗೆಳತಿಯ ಸಾಮಾಜಿಕ ಪ್ರಜ್ಞೆಯಿಂದ ಬಾಲ್ಯ ವಿವಾಹ ನಿಂತಿತ್ತು. ಇಂಥ ಪುಟ್ಟ ಗೌರಿಗಳ ಮದುವೆ ಗಡಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಲೇ ಇವೆ. ಎಳೆ ಕಂದಮ್ಮಗಳ ಹಕ್ಕು ಕಸಿದುಕೊಳ್ಳುವುದಷ್ಟೇ ಅಲ್ಲ, ಅವರ ಬದುಕನ್ನೇ ಮಂಕಾಗಿಸುತ್ತಿದೆ. ಇದಕ್ಕೆ ಕಳೆದ 8 ವರ್ಷದಲ್ಲಿ 309 ವಿವಾಹಕ್ಕೆ ಬ್ರೇಕ್ ಬಿದ್ದಿರುವುದೇ ಸಾಕ್ಷಿ.
Related Articles
Advertisement
ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದಲ್ಲಿ ರೂಪಿಸಿರುವ “ಶಾಲೆ ಕಡೆ ನನ್ನ ನಡೆ’ ಜಾಗೃತಿ ಆಂದೋಲನ ಪರಿಣಾಮ ಬಾಲ್ಯ ವಿವಾಹಗಳು ಬೆಳಕಿಗೆ ಬರುತ್ತಿವೆ. ತಮ್ಮ ಬಾಲ್ಯ ವಿವಾಹ ಮಾಡಲಾಗುತ್ತಿದೆ ಎಂದು ಖುದ್ದು ಬಾಲಕಿಯರು ಮತ್ತು ಗ್ರಾಮದ ಶಿಕ್ಷಿತ ಯುವಕರಿಂದಲೇ (1098) ದೂರು ಬರುತ್ತಿವೆ. ಮಕ್ಕಳ ಸಹಾಯವಾಣಿ ಸಹಕಾರದೊಂದಿಗೆ ಘಟಕ ಅಪ್ರಾಪ್ತರನ್ನು ರಕ್ಷಣೆ ಮಾಡಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿದೆ. ಬಾಲ್ಯ ವಿವಾಹದ ಬಗ್ಗೆ ದೂರು ನೀಡಿದವರ ಮಾಹಿತಿಯನ್ನೂ ಗೌಪ್ಯವಾಗಿ ಇಡಲಾಗುತ್ತಿದೆ.
ಬಾಲಕಿಯರ ಮಾರಾಟ ಶಂಕೆ : ಬಾಲ್ಯ ವಿವಾಹಕ್ಕೆ ಬಡತನ ಮತ್ತು ಅನಕ್ಷರತೆ ಪ್ರಮುಖ ಕಾರಣ. ಕಡಿಮೆ ಖರ್ಚಿನಲ್ಲಿ ಮದುವೆ ಮಾಡಿ ಕೈತೊಳೆದುಕೊಳ್ಳುವ ಮನೋಭಾವ ಪಾಲಕರಲ್ಲಿ ಹೆಚ್ಚುತ್ತಿರುವುದರಿಂದ ಲಿಂಗಾನುಪಾತ ಕಡಿಮೆ ಇರುವ ರಾಜಸ್ಥಾನ ಮತ್ತು ಗುಜರಾತನ ವ್ಯಕ್ತಿಗಳು ಜಿಲ್ಲೆಗೆ ಬಂದು ಇಲ್ಲಿನ ಬಾಲಕಿಯರ ಜತೆ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಮದುವೆಗಳಮೂಲಕ ಬಾಲಕಿಯರ ಮಾರಾಟದ ಶಂಕೆ ವ್ಯಕ್ತವಾಗುತ್ತಿದೆಯಾದರೂ ಅಧಿಕೃತವಾಗಿ ಬೆಳಕಿಗೆ ಬಂದಿಲ್ಲ. ಮತ್ತೂಂದೆಡೆ ಆಸ್ತಿ ಆಸೆಗಾಗಿ ಸಂಬಂಧಗಳಲ್ಲೇ ವಿವಾಹ, ಚಿಕ್ಕ ವಯಸ್ಸಿನಲ್ಲೇ ಪ್ರೀತಿಯ ಜಾಲದಿಂದ ಮೋಸಕ್ಕೆ ಸಿಲುಕುವುದು, ಹಿರಿಯರ ಸಾಂಪ್ರದಾಯಿಕ ಆಲೋಚನೆಗಳೂ ಸಹ ಈ ಪಿಡುಗು ಹೆಚ್ಚಲು ಕಾರಣವಾಗುತ್ತಿದೆ. ಈ ಅನಿಷ್ಠ ಪದ್ದತಿ ಎಳೆ ಕಂದಮ್ಮಗಳಹಕ್ಕು ಕಸಿದುಕೊಳ್ಳುವುದಷ್ಟೇ ಅಲ್ಲ, ಅವರ ಬದುಕನ್ನೇ ಮಂಕಾಗಿಸುತ್ತಿದೆ.
ಹೆಣ್ಣು ಮಕ್ಕಳ ಬಗೆಗಿನ ತಪ್ಪು ಕಲ್ಪನೆಗಳೇ ಬಾಲ್ಯ ವಿವಾಹ ಹೆಚ್ಚಲು ಕಾರಣ. ಬೀದರ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ತಿಂಗಳಲ್ಲೇ 42 ಮಕ್ಕಳ ಮದುವೆ ತಡೆಯಲಾಗಿದೆ. ಮಕ್ಕಳಿಂದಲೇ ಈಗ ದೂರುಗಳು ಬರುತ್ತಿವೆ. ಮಾಹಿತಿ ತಿಳಿದಾಕ್ಷಣ ಅ ಧಿಕಾರಿಗಳ ತಂಡ ಮದುವೆ ನಿಲ್ಲಿಸಿ ಪಾಲಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ ಮತ್ತು ಬಾಲ್ಯ ವಿವಾಹದಿಂದ ಆಗುವ ಅನಾಹುತ, ಕಾನೂನು ಶಿಕ್ಷೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಈವರೆಗೆ ಮದುಮಗ ಮತ್ತು ಪಾಲಕರ ವಿರುದ್ಧ ಮೂರು ಎಫ್‌ಐಆರ್ ಸಹ ದಾಖಲಾಗಿವೆ.- ಶಂಭುಲಿಂಗ ಹಿರೇಮಠ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೀದರ
-ಶಶಿಕಾಂತ ಬಂಬುಳಗೆ