Advertisement
ಜಿಲ್ಲೆಯಲ್ಲಿನ 31 ಪ್ರಕರಣಗಳ ಪೈಕಿ 29 ಪ್ರಕರಣಗಳನ್ನು ತಡೆಹಿಡಿಯಲಾಗಿದೆ. ಕೋವಿಡ್ ಸೋಂಕು ತಡೆಗಾಗಿ ಸರ್ಕಾರ ವಿಧಿಸಿದ್ದ ಲಾಕ್‌ಡೌನ್ ಸಂದರ್ಭದಲ್ಲೇ 31 ಪ್ರಕರಣ ಬೆಳಕಿಗೆ ಬಂದಿವೆ. ಜಿಲ್ಲೆ ಬಯಲುಸೀಮೆ ಮತ್ತು ಮಲೆನಾಡು ಪ್ರದೇಶ ಒಳಗೊಂಡಿದ್ದು, ಇಲ್ಲಿನ ಕೆಲವು ಸಮುದಾಯದಲ್ಲಿ ಬಾಲ್ಯ ವಿವಾಹ ಪದ್ಧತಿ ಕಂಡು ಬರುತ್ತಿದೆ. ಹಿರಿಯರಭಾವನಾತ್ಮಕತೆ, ಸಂಪ್ರದಾಯ ಮತ್ತು ಬೇಗ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ಪೋಷಕರ ಭಾವನೆ ಬಾಲ್ಯವಿವಾಹಕ್ಕೆ ಕಾರಣವಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹದ ಸಂಖ್ಯೆ ಹೆಚ್ಚಿದೆ. ಮಲೆನಾಡು ಭಾಗದ ಕಾಫಿ ತೋಟಗಳಲ್ಲಿ ಕಾರ್ಮಿಕ ವೃತ್ತಿಗೆ ವಲಸೆ ಬಂದು ಕೂಲಿಲೈನ್‌ಗಳಲ್ಲಿ ವಾಸ ಮಾಡುತ್ತಿರುವರಲ್ಲಿ ಹಾಗೂ ಬಯಲುಸೀಮೆ ಭಾಗದ ಕೆಲ ಸಮುದಾಯದಲ್ಲಿ ಈ ಪದ್ಧತಿ ಇಂದಿಗೂ ಜೀವಂತವಾಗಿದೆ.
Related Articles
Advertisement
ಹಿರಿಯ ಮಕ್ಕಳ ಕಲ್ಯಾಣಾಧಿಕಾರಿ, ಜಿಪಂ ಸಿಇಒ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಜಿಲ್ಲಾ ಆರೋಗ್ಯಾಧಿಕಾರಿ, ಸಮಾಜ ಕಲ್ಯಾಣಾಧಿಕಾರಿ, ಹಿಂದುಳಿದ ವರ್ಗ ಇಲಾಖೆ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಐಟಿಡಿಪಿ, ಜಿಲ್ಲಾ ಕಾರ್ಮಿಕಾಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾಪಂ ಸಿಇಒ, ತಾಲೂಕು ವೈದ್ಯಾಧಿಕಾರಿ, ತಾಲೂಕು
ಸಮಾಜ ಕಲ್ಯಾಣಾಧಿಕಾರಿ, ಕಾರ್ಮಿಕ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಂರಕ್ಷಣಾಧಿಕಾರಿ (ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ), ಸರ್ಕಲ್ ಇನ್ಸ್ ಪೆಕ್ಟರ್, ಹಿಂದುಗಳಿದ ವರ್ಗಗಳ ಅಭಿವೃದ್ಧಿ ಇಲಾಖೆ ವಿಸ್ತರಣಾಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ.
ಹೋಬಳಿ ವ್ಯಾಪ್ತಿಯಲ್ಲಿ ಕಂದಾಯ ನಿರೀಕ್ಷಕರು, ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಐಸಿಡಿಎಸ್ ವಲಯ ವ್ಯಾಪ್ತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಪಂ ವ್ಯಾಪ್ತಿ, ಗ್ರಾಮ ಲೆಕ್ಕಿಗರು, ಗ್ರಾಮ ವ್ಯಾಪ್ತಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಮಹಾನಗರ ವ್ಯಾಪ್ತಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಕಂದಾಯ ನೀರಿಕ್ಷಕರ ಸಮಿತಿ ರಚಿಸಲಾಗಿದೆ.
ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ ನೀರಿಕ್ಷಕರು, ಹಿರಿಯ ಕಾರ್ಮಿಕ ನಿರೀಕ್ಷಕರು, ಆ ವ್ಯಾಪ್ತಿಯ ಪೊಲೀಸ್ ಇಲಾಖೆ, ಕಂದಾಯ ಅಧಿಕಾರಿಗಳು, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಈ ಸಮಿತಿಗಳು ಹದ್ದಿನ ಕಣ್ಣಿಟ್ಟು ಬಾಲ್ಯವಿವಾಹವನ್ನು ತಡೆಗಟ್ಟಲು ನಿರಂತರವಾಗಿ ಶ್ರಮಿಸುತ್ತಿವೆ. ಬಾಲ್ಯವಿವಾಹ ನಿಷೇಧ ಕಾನೂನು ಮತ್ತು ಅದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕಾನೂನು ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರಿ ಶಾಲೆ, ಅಂಚೆ ಕಚೇರಿ, ಪಂಚಾಯತ್ ಕಚೇರಿ ಮೀನಾ ಕ್ಲಬ್, ಕಿಶೋರಿ ಸಂಘಗಳು, ಮಕ್ಕಳ ಗ್ರಾಮ ಸಭೆಗಳಲ್ಲಿ ತೆರೆದಮನೆ, ಗ್ರಾಮ ಚಾವಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಟಕ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದೆಲ್ಲದರ ನಡುವೆಯೂ ಅಲ್ಲಲ್ಲಿ ಬೆರಳೆಣಿಕೆಯಷ್ಟು ಬಾಲ್ಯವಿವಾಹ ನಡೆಯುತ್ತಿದ್ದು, ಬಾಲ್ಯವಿವಾಹಕ್ಕೆ ಸಂಪೂರ್ಣ ಮುಕ್ತಿ ಹಾಡಬೇಕೆನ್ನುವುದು ಸಾರ್ವಜನಿಕರ ಆಶಯವಾಗಿದೆ.
ಬಾಲ್ಯವಿವಾಹದ ಪ್ರಕರಣ ಬೆರಳೆಣಿಕೆಯಷ್ಟು ಅಲ್ಲೊಂದು ಇಲ್ಲೊಂದು ಕಂಡು ಬರುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದೂರು ಬಂದ ತಕ್ಷಣ ಮಗುವನ್ನು ರಕ್ಷಿಸಿ ಪೋಷಕರ ಮೇಲೆ ದೂರು ದಾಖಲು ಮಾಡಲಾಗುತ್ತಿದೆ. ಬಾಲ್ಯವಿವಾಹ ಒಂದು ಕ್ರಿಮಿನಲ್ ಅಪರಾಧ. ಬಾಲ್ಯವಿವಾಹ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಸದ್ಯಜಿಲ್ಲೆಯಲ್ಲಿ ಶೇ.99ರಷ್ಟು ಬಾಲ್ಯವಿವಾಹ ನಿಂತು ಹೋಗಿದೆ. ಶೇ.1ರಷ್ಟು ಅಲ್ಲೊಂದು ಇಲ್ಲೊಂದು ಪ್ರಕರಣ ಸಂಬಂಧಿಕರೊಳಗೆ ಕದ್ದುಮುಚ್ಚಿ ನಡೆಯುತ್ತವೆ. ದೂರು ಬಂದ ತಕ್ಷಣ ಅವರ ಮೇಲೆ ದೂರು ದಾಖಲಿಸಿ ಮಗುವನ್ನು ಸಂರಕ್ಷಿಸಿ ಸಾಂತ್ವನ ಕೇಂದ್ರದಲ್ಲಿ ಆಶ್ರಯ ನೀಡಲಾಗುತ್ತಿದೆ. -ಸಿ.ಟಿ. ರವಿ, ಜಿಲ್ಲಾ ಉಸ್ತುವಾರಿ ಸಚಿವ
ಬಾಲ್ಯವಿವಾಹ ಸಂಪೂರ್ಣ ತಡೆಗಟ್ಟಿದರೂ ಅಲ್ಲಲ್ಲಿ ಒಂದೊಂದು ಪ್ರಕರಣ ಬೆಳಕಿಗೆ ಬರುತ್ತಿವೆ. ಬಾಲ್ಯ ವಿವಾಹಕ್ಕೆ ಶಿಕ್ಷಣದ ಕೊರತೆ, ಬಡತನ, ಅರಿವಿನ ಕೊರತೆ,ಭಾವನಾತ್ಮಕ ಸಂಬಂಧ ಹೀಗೆ ಅನೇಕ ಕಾರಣಗಳಿಂದ ಕಂಡುಬರುತ್ತಿದ್ದು, ಅದರಲ್ಲೂ ಕೆಲ ಪ್ರಕರಣ ವಿದ್ಯಾವಂತ ಕುಟುಂಬಗಳಲ್ಲಿ ಕಂಡು ಬರುವಂತದ್ದು ಬೇಸರದ ಸಂಗತಿ. ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟಲು ಅನೇಕ ಇಲಾಖೆಗಳು ಹಗಲಿರುಳು ಶ್ರಮಿಸುತ್ತಿದ್ದು, ಜಿಲ್ಲೆಯಲ್ಲಿ ಬಾಲ್ಯವಿವಾಹ ಪದ್ಧತಿ ಸಂಪೂರ್ಣ ನಶಿಸಿಹೋಗಬೇಕು. –ನಟರಾಜ್, ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷರು, ಹಾಲಿ ಬಾಲನ್ಯಾಯ ಮಂಡಳಿ ಸದಸ್ಯರು ಮತ್ತು ವಕೀಲರು