Advertisement

ಬಾಲ್ಯವಿವಾಹ ನಿಷೇಧ ಕಾನೂನು ಜಾರಿಗೆ ಬರಲಿ: ಕುಮಾರ

04:31 PM Jun 05, 2017 | Team Udayavani |

ಜೇವರ್ಗಿ: ಬಾಲ್ಯ ವಿವಾಹ ತಡೆಗಟ್ಟಲು ಅಧಿಕಾರಿಗಳ ಜತೆಗೆ ಸಾರ್ವಜನಿಕರ ಪಾತ್ರವು ಬಹಳ ಮುಖ್ಯವಾಗಿರುತ್ತದೆ ಎಂದು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಕುಮಾರ ಜಿ. ಅಭಿಪ್ರಾಯಪಟ್ಟರು. 

Advertisement

ಪಟ್ಟಣದ ಹಳೆ ತಹಶೀಲ್ದಾರ ಕಚೇರಿ ಹಿಂಬಾಗದಲ್ಲಿರುವ ತಾಪಂ ಸಭಾಂಗಣದಲ್ಲಿ ರವಿವಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಾಲ್ಯ ವಿವಾಹ ನಿಷೇಧ ಅರಿವು ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ತಡೆಗಟ್ಟಲು ಅಧಿಕಾರಿಗಳಿಗೆ ಜನರ ಸಹಕಾರ ಮುಖ್ಯವಾಗುತ್ತದೆ. ತಾಲೂಕಿನ ಯಾವುದೇ ಗ್ರಾಮದಲ್ಲಿ ಇಂತಹ ಘಟನೆ ನಡೆಯುವುದು ಕಂಡು ಬಂದಲ್ಲಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ಕೊಡಬೇಕು. ಬಾಲ್ಯವಿವಾಹ ಮಾಡುತ್ತಿರುವ ಬಗ್ಗೆ ದೂರು ನೀಡಿದರೆ ಅಂತಹವರ ಹೆಸರನ್ನು ಗೌಪ್ಯವಿಡಲಾಗುವುದು.

ಮಕ್ಕಳು ಇನ್ನು ಜಗತ್ತು ಅರಿಯುವ ಮೊದಲೇ ಮದುವೆ ಮಾಡುವುದರಿಂದ ಅನೇಕ ದುಷ್ಪರಿಣಾಮಗಳು ಎದುರಿಸಬೇಕಾಗುತ್ತದೆ. ಸರಕಾರ ಬಾಲ್ಯವಿವಾಹ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿರುವುದರಿಂದ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು. 

ತಹಶೀಲ್ದಾರ ಯಲ್ಲಪ್ಪ ಸುಬೇದಾರ ಮಾತನಾಡಿ, ಬಾಲ್ಯವಿವಾಹ ತಡೆದ ಸಂದರ್ಭದಲ್ಲಿ ಅನೇಕ ರಾಜಕೀಯ ಹಾಗೂ ಪ್ರಭಾವಿ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತವೆ. ಇಂತಹ ಸಂದರ್ಭ ಬಂದರೂ ಎದೆಗುಂದದೆ ಹಲವಾರು ಬಾಲ್ಯವಿವಾಹ ತಡೆಗಟ್ಟಲಾಗಿದೆ. ಸರಕಾರಿ ಅಧಿಕಾರಿಗಳು ಸಹ ತಮ್ಮ ಸಂಬಂಧಿಕರು ಬಾಲ್ಯವಿವಾಹ ಮಾಡುತ್ತಿದ್ದರೆ ತಿಳಿವಳಿಕೆ ನೀಡಬೇಕು.

Advertisement

ಸರಕಾರದ ಯಾವುದೇ ಇಲಾಖೆ ಅಧಿಕಾರಿಗಳಿಗೆ ಬಾಲ್ಯವಿವಾಹದ ಮಾಹಿತಿ ಇದ್ದರೆ ತಕ್ಷಣ ಸಂಬಂ ಧಿಸಿದವರಿಗೆ ಮಾಹಿತಿ ನೀಡಬೇಕು. ತಾಲೂಕಿನ 168 ಹಳ್ಳಿಗಳಲ್ಲಿ ಬಾಲ್ಯವಿವಾಹ ನಡೆಯುತ್ತಿದ್ದರೆ ಕೂಡಲೇ ಕಾರ್ಯಪ್ರವೃತ್ತರಾಗುತ್ತೇವೆ. ಜನರು ಸಹ ನಮ್ಮ ಜತೆಗೆ ಕೈಜೋಡಿಸಿದರೆ ಮಕ್ಕಳ ಭವಿಷ್ಯ ಬದಲಾಯಿಸಬಹುದು. 

ಹೆಣ್ಣುಮಕ್ಕಳು ಹೆಚ್ಚು ಶಿಕ್ಷಣವಂತರಾದರೆ ಇಡೀ ಕುಟುಂಬ ಸುಕ್ಷಿತವಾಗುತ್ತದೆ. ಬಾಲ್ಯವಿವಾಹ ತಡೆಗಟ್ಟುವ ಸಂದರ್ಭದಲ್ಲಿ ಅನೇಕ ಅವಮಾನ ಅನುಭವಿಸಿದ್ದೇವೆ. ಗ್ರಾಮದ ಜನರು ನಮ್ಮನ್ನೇ ಅಪರಾಧಿ ಎಂಬಂತೆ ನೋಡುತ್ತಾರೆ. ಸಮಾಜದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಇಂತಹ ಜಾಗೃತಿ ಕಾರ್ಯಕ್ರಮಗಳು ಅವಶ್ಯಕ ಎಂದು ಹೇಳಿದರು. 

ವಕೀಲರಾದ ಶಿವಾನಂದ ಕುಂಟೋಜಿಮಠ, ಸಿವಿಲ್‌ ನ್ಯಾಯಾಧೀಶ ಶಿವರಾಜ ಸಿದ್ದೇಶ್ವರ, ಎಸ್‌.ಬಿ. ಯಂಕಂಚಿ, ಎಸ್‌.ಎಸ್‌. ಪಾಟೀಲ ಮಾತನಾಡಿದರು. ಸಿಡಿಪಿಒ ಪಾಪಮ್ಮ ಹಾಬಾಳ್ಕರ್‌ ಅಧ್ಯಕ್ಷತೆ ವಹಿಸಿದ್ದರು.

ಬಸವರಾಜ ಕಂದಗಲ, ರಾಜಶೇಖರ ಶಿಲ್ಪಿ, ಸೋಮು ಸರಾದಾರ, ಗುರುನಾಥ ಬಳಬಟ್ಟಿ, ವಿಜಯಕುಮಾರ ನರಿಬೋಳ, ವೈ.ಜಿ. ಪಾಟೀಲ, ಮಲ್ಲು ಸೊನ್ನದ, ಬಸವರಾಜ ಕೊಂಬಿನ್‌, ಎಂ.ಐ. ಸೂಗೂರ, ರವಿ ಪಾಟೀಲ, ತ್ರಿವೇಣಿ ಕುಳಗೇರಿ ಇದ್ದರು. ಜ್ಯೋತಿ ಎಂ. ಬೊಮ್ಮನಹಳ್ಳಿ ನಿರೂಪಿಸಿ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next