Advertisement
ಕಡುಗತ್ತಲು, ಕಣ್ಣರಳಿಸಿದಷ್ಟೂ ದೂರಕೆ… ಅಲೆದೂ ಅಲೆದು ಕಾಲುಗಳು ಸೋತುಬಿಟ್ಟಿವೆ. “ಅಯ್ಯೋ, ಇದೇನಿದು, ನಾನೆಲ್ಲಿದ್ದೇನೆ?’ ಎಂದುಕೊಳ್ಳುವುದರೊಳಗೆ ದೂರದಲೆಲ್ಲೋ ಬೆಳಕಿನ ಕಿಂಡಿ ಕಾಣಿಸಿತು. ಕತ್ತಲ ತಪ್ಪಿಸಿಕೊಳ್ಳುವ ಕಾತರತೆ ಬಹುಬೇಗ ಕಿಂಡಿಯ ತಲುಪಿಸಿತು. ಆದರೆ, ನನ್ನಂಥವರಿಗೆ ಇಲ್ಲಿ ಪ್ರವೇಶವಿಲ್ಲವಂತೆ. ಕಾಡಿ ಬೇಡಿದ ನಂತರವೇ ತಿಳಿದದ್ದು: ವರ್ತಮಾನದ ಪೊರೆಯ ಕಿತ್ತೂಗೆದು ಬಾಲ್ಯದ ಹುಟ್ಟುಡುಗೆಯಲ್ಲಿ ಬಾಗಿ ನುಸುಳಬೇಕೆಂದು. ಬೆಳಕು ಕೈ ಬೀಸಿ ಕರೆಯುತ್ತಿತ್ತು. ಮನದ ಮಾತಿಗೆ ಓಗೊಟ್ಟೆ. ಭವಿಷ್ಯ, ವರ್ತಮಾನವ ಕಳಚಿ ಒಳನುಸುಳಿದೆ. ಅದೆಷ್ಟು ರಂಗುರಂಗಿನ ಲೋಕ. ನಡೆದು ಬಂದ ಹಾದಿಯದ್ದೇ ತುಣುಕು ಇದು. ಮನಸ್ಸು ಹಾರಾಡುವ ಹಕ್ಕಿಯಾಗಿದೆ. ಖುಷಿಯಲ್ಲಿ ಕುಣಿದು ಕುಪ್ಪಳಿಸಬೇಕು. ಅದೆಂಥ ಹಗುರ ಭಾವ, ನಿನ್ನೆಗಳ ಭ್ರಮೆಯ ಲೋಕದಿಂದ ವಾಪಸ್ಸು ಬಂದು ಇಪ್ಪೆ ಗಿಡದ ಮಡಿಲಲ್ಲಿ ದಣಿವಾರಿಸಿಕೊಳ್ಳತೊಡಗಿದೆ. ಕಳಚಿದ ಪೊರೆಯ ಲವಲೇಶಗಳು ಮರೆಯಾಗಿ ಭಾವುಕಳಾಗತೊಡಗಿದೆ, ಉಮ್ಮಳಿಸಿ ಬರುತ್ತಿರುವ ಕಣ್ಣಾಲಿಗಳ, ದುಪಟ್ಟಾದಿಂದ ಒತ್ತಿ ಸುತ್ತಲೂ ಕಣ್ಣಾಡಿಸಿದೆ. ಎದುರಲ್ಲಿ, ಬದುಕ ಅರಳಿಸಿದ ಚಂದನೆಯ ಕೈದೋಟ, ಅಪ್ಪನೇ ಮಾಲಿ. ಹರಿದ ಬನಿಯನ್ನು, ಪಟಾಪಟಿ ಚಡ್ಡಿ, ಉಂಗುಷ್ಟ ಕಿತ್ತ ಚಪ್ಪಲಿ. ಅಯ್ಯೋ, ಅಪ್ಪ ಎಷ್ಟೊಂದು ಸೊರಗಿದ್ದಾನಲ್ಲಾ ಎಂದುಕೊಳ್ಳುವುರೊಳಗೆ, “ಬಾ ಮಗಾ, ಎಲ್ಲಿ ಹೋಗಿದ್ದೆ? ಅಮ್ಮ ನಿನ್ನ ಹುಡುಕುತ್ತಾ ಇದ್ದಳು. ಒಳಗೆ ಹೋಗು, ನಿನಗಾಗಿ ರವೆ ಉಂಡೆ ಮಾಡವಳೆ’ ಎಂದು ಪೀತಿಯಿಂದ ಬರಮಾಡಿಕೊಂಡ. ಬೆನ್ನ ನೇವರಿಸಿದ. ಪ್ರಪಂಚವೇ ಎದುರಾದರೂ, ಇವ ನನ್ನ ಬೆನ್ನೆಲುಬು ಎನ್ನುವುದನ್ನು ಮತ್ತೆ ನೆನಪಾಗಿಸಿದ. ನಾಳೆಗಳು ಮುಷ್ಟಿಯಲ್ಲಿ ಬಿಗಿಯಾದ ಅನುಭವ.
Related Articles
Advertisement
ಅಯ್ಯೋ, ಅದೆಷ್ಟು ಹುಡುಕಿದರೂ ಮನೆ ಸಿಗುತ್ತಲೇ ಇಲ್ಲ. ಭಯವಾಗತೊಡಗಿತು. ಅಪ್ಪಾ… ಅಮ್ಮಾ… ಜೋರಾಗಿ ಕೂಗತೊಡಗಿದೆ. ಯಾರೂ ಒಗೊಡುತ್ತಿಲ್ಲ. ನಾನೆಲ್ಲೋ ಕಳೆದುಹೋಗಿದ್ದೇನೆ. ಗಂಟಲು ಗದ್ಗದಿತವಾಗತೊಡಗಿತು. ಎಲ್ಲಿ ಅಂತ ಹುಡುಕಲಿ? ಎದೆಯ ಡವಡವ ನನಗೇ ಕೇಳಿಸುತ್ತಿದೆ. ಕೈಕಾಲು ನಡುಗುತ್ತಿವೆ. ಬಾಯಿ ಒಣಗತೊಡಗಿದೆ.. ಮತ್ತಷ್ಟು ಭಯ ಆವರಿಸಿತು. ಅದೆಂಥದೋ ಕರ್ಕಶ ಶಬ್ದ ಹೆದರಿಕೆಯನ್ನು ಇನ್ನೂ ಹೆಚ್ಚಿಸಿತು. ಎರಡೂ ಕಿವಿಗಳನ್ನು ಮುಚ್ಚಿಕೊಂಡೆ. ಉಹುಂ, ನಿಲ್ಲದು. ಶಬ್ದದ ದಿಕ್ಕಿನೆಡೆಗೆ ಕೈಬೀಸಿದೆ; ಟಳ್- ಟಪ್ ಎಂದಿತು.
ಕಣ್ಣೆಲ್ಲಾ ಮಂಜು ಮಂಜು. ಕಣ್ಣುಗಳನ್ನು ಉಜ್ಜುತ್ತಾ ಬಿಡಿಸಲು ಕಷ್ಟಪಟ್ಟೆ. ಸೂರ್ಯನ ಕಿರಣಗಳು ರೂಮ್ ತುಂಬಿಕೊಂಡಿದ್ದವು. ವಾಹನಗಳ ಸದ್ದು ವಾಸ್ತವಕ್ಕೆ ಕರೆತಂತು. ಅಯ್ಯೋ, ಮೊಬೈಲ್ ಸ್ಕ್ರೀನ್ ಒಡೆದಿದೆ. ಕರ್ಮ ಇದೊಂದು ಬಾಕಿ ಇತ್ತು.
ಉಫ್, ಇಷ್ಟೊತ್ತು ಕಂಡಿದ್ದೆಲ್ಲಾ ಕನಸೇ? ಇಷ್ಟು ಬೇಗ ಮುಗಿದವೇ ಚಂದದ ದಿನಗಳು? ಒಳಗೊಳಗೇ ಹವಣಿಕೆ. ದೂರದಲ್ಲಿ ಮಿನುಗಿ ಮರೆಯಾಗುವ ಚುಕ್ಕಿಯಂತೆ ಸಂಭ್ರಮಿಸುತ್ತಿರುವಾಗಲೇ ಮತ್ತೆ ಕರಾಳ ವರ್ತಮಾನಕ್ಕೆ ಬಂದು ಬಿಟ್ಟೆನೇ? “ಜಗವ ಜಯಿಸಿ ಬಾ ಮಗಳೇ, ಸಾರಥಿ ನಾನಾಗುವೆ’ ಎಂದಿದ್ದ ಅಪ್ಪ- ಅಮ್ಮ, ನಾಲ್ಕಾನೆ ವಯಸ್ಸಾಗಿದೆ ನಿನಗೆ. ಇನ್ಮುಂದೆ ನಿನ್ನ ದಾರಿ ನಿನ್ನದು ಎಂದು ಬದುಕಿನ ಅರ್ಧ ದಾರಿಯಲ್ಲೇ ರಥದಿಂದ ಕೆಳಗಿಳಿದು ದೂರ ಸರಿದಿ¨ªಾರೆ. ಶಾಲೆಯ ಸ್ಥಾನ ತುಂಬಿದ ಆಫೀಸು ನನ್ನಿಂದ ಆಗುವ ಉಪಯೋಗವನ್ನು ಹಿಂಡಿ ಹೀರುತ್ತಿದೆ. ಬದುಕನ್ನು ಸವೆಸಲು ಕಬ್ಬಿನ ಕಾಯಕ ಮುಂದುವರಿದಿದೆ. ಆಗೊಮ್ಮೆ ಈಗೊಮ್ಮೆ ನಾನು ಇನ್ನೂ ಬದುಕಿದ್ದೇನಾ? ಎಂದು ಏಳುವ ಪ್ರಶ್ನೆಗೆ ಉಸಿರಾಟ ಸಾಕ್ಷಿ ಒದಗಿಸುತ್ತದೆ. ಜೀವನ ಈ ಕಾಂಕ್ರೀಟ್ ಕಾಡಿನಲ್ಲಿ ಜನ- ಧನ, ಗದ್ದಲ- ಗೊಂದಲದಲ್ಲಿಯೇ ಮುನ್ನುಗ್ಗುತ್ತಿದೆ. ಆದರೆ, ಒಳಗೊಳಗೆ ನಾನು ಒಬ್ಬಂಟಿ. ಮನದ ಮಾತು ಮೌನದ ಖಜಾನೆಯಲ್ಲಿ ಯಾವಾಗಲೂ ಬಂಧಿ. ಬಂಧಮುಕ್ತಗೊಳಿಸಲು ಆಗೊಮ್ಮೆ ಈಗೊಮ್ಮೆ ಕನಸಿನ ನಾವಿಕ ಬೇಕು! ಭೂತದಂಗಡಿಯೆಡೆಗೆ ಕೈಹಿಡಿದು ಕರೆದೊಯ್ಯಲು…
– ಜಮುನಾ ರಾಣಿ ಎಚ್.ಎಸ್.