ಬೆಂಗಳೂರು: ಶೀಲ ಶಂಕಿಸುತ್ತಿದ್ದ ಪತಿಯ ವರ್ತನೆಯಿಂದ ಬೇಸತ್ತ ಪತ್ನಿ ಸೆಲ್ಫಿ ವಿಡಿಯೋ ಮಾಡಿ, ನಂತರ ತನ್ನ ಏಳು ವರ್ಷದ ಪುತ್ರಿಯನ್ನು ಅಪಾರ್ಟ್‌ಮೆಂಟ್ನಿಂದ ಎಸೆದು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಟ್ಟೇನಹಳ್ಳಿಯ ಆರ್‌ಬಿಐ ಲೇಔಟ್‌ನ ಎಲ್ಐಸಿ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ಸಂಜೆ ನಡೆದಿದೆ.
ಜ್ಯೋತಿ ಅಗರ್‌ವಾಲ್(35) ಆತ್ಮಹತ್ಯೆ ಮಾಡಿಕೊಡಿದ್ದು, ಅದಕ್ಕೂ ಮೊದಲು ತನ್ನು ಏಳು ವರ್ಷದ ಮಗಳು ಸುಹಾನಾಳನ್ನು ಅಪಾರ್ಟ್‌ಮೆಂಟ್‌ನ 20ನೇ ಮಹಡಿಯಿಂದ ಎಸೆದು ಕೊಂದಿದ್ದಾರೆ. ಘಟನೆ ಸಂಬಂಧ ಜ್ಯೋತಿ ಅಗರ್‌ವಾಲ್ ಪತಿ ಪಂಕಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ರಾಜಸ್ಥಾನ ಮೂಲದ ಜ್ಯೋತಿ ಮತ್ತು ಪಂಕಜ್ ಪೋಷಕರು ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಪಂಕಜ್ ಹಾಗೂ ಜ್ಯೋತಿ 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಸುಹಾನಾ(7) ಎಂಬ ಮಗಳಿದ್ದಳು. ಪಂಕಜ್ ಜಯನಗರದ ಅಶೋಕ ಪಿಲ್ಲರ್ ಬಳಿ ಹಾರ್ಡ್‌ವೇರ್ ಅಂಗಡಿ ಇಟ್ಟುಕೊಂಡಿದ್ದಾನೆ. ಜ್ಯೋತಿ ಡ್ಯಾನ್ಸ್, ನಾಟಕ ಮಾಡುತ್ತಿದ್ದು, ತರಬೇತಿ ಪಡೆಯುತ್ತಿದ್ದರು. ಇಬ್ಬರ ನಡುವೆ ವಯಸ್ಸಿನ ಅಂತರ ಇತ್ತು ಎಂದು ಹೇಳಲಾಗಿದೆ.
ಶೀಲದ ಬಗ್ಗೆ ಸಂಶಯ: ಈ ಮಧ್ಯೆ ಪತ್ನಿ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪಂಕಜ್, ತಾನು ಮನೆಯಲ್ಲಿ ಇಲ್ಲಿದಿರುವಾಗ ಬೇರೆಯವರ ಜತೆ ಅನೈತಿಕ ಸಂಬಂಧ ಹೊಂದಿರುವೆ ಎಂದು ಪ್ರತಿನಿತ್ಯ ಆಕೆಯೊಂದಿಗೆ ಜಗಳ ಮಾಡುತ್ತಿದ್ದ. ಅಲ್ಲದೆ, ನೃತ್ಯ ಮತ್ತು ನಾಟಕ ತರಬೇತಿ ಶಾಲೆಗೆ ಹೋಗದಂತೆ ಎಚ್ಚರಿಕೆ ನೀಡಿದ್ದ. ಅದಕ್ಕೆ ಒಪ್ಪದ ಜ್ಯೋತಿ, ‘ನಾನು ಯಾರೊಂದಿಗೂ ಅನೈತಿಕ ಸಂಬಂಧ ಹೊಂದಿಲ್ಲ. ನನ್ನ ಹವ್ಯಾಸಗಳಿಗೆ ಅಡ್ಡಿಪಡಿಸಬೇಡಿ’ ಎಂದು ಮನವಿ ಮಾಡಿಕೊಂಡಿದ್ದರು. ಆದರೂ ಪಂಕಜ್ ನಿತ್ಯ ಪತ್ನಿ ಜತೆ ಜಗಳ ಮಾಡುತ್ತಿದ್ದ. ಭಾನುವಾರ ಸಹ ದಂಪತಿ ನಡುವೆ ವಾಗ್ವಾದ ನಡೆದಿದ್ದು, ಅದರಿಂದ ಬೇಸತ್ತ ಪತಿ ಪಂಕಜ್ ಮನೆ ಬಿಟ್ಟು ಹೋಗಿ ಜಯನಗರದ ವಸತಿ ಗೃಹದಲ್ಲಿ ವಾಸವಾಗಿದ್ದ ಎಂದು ಪೊಲೀಸರು ಹೇಳಿದರು.
ಮಗು ಕೊಂದು, ತಾನೂ ಆತ್ಮಹತೆ: ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಪುತ್ರಿ ಸುಹಾನಾಳನ್ನು ಅಪಾರ್ಟ್‌ಮೆಂಟ್‌ನ 20ನೇ ಮಹಡಿಯಿಂದ ಎಸೆದು ಕೊಂದಿದ್ದಾಳೆ. ನಂತರ ತಾನು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಿದ್ದ ಜೋರು ಶಬ್ಧಕ್ಕೆ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿನೊಂದಿಗೆ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
ಸೆಲ್ಫಿ ವಿಡಿಯೋ ನೀಡಿದ ಮಾಹಿತಿ: ಪತಿಯ ವರ್ತನೆಯಿಂದ ಬೇಸತ್ತ ಜ್ಯೋತಿ ಆತ್ಮಹತ್ಯೆಗೂ ಮೊದಲು ಐದಾರು ನಿಮಿಷದ ಸೆಲ್ಫಿ ವಿಡಿಯೋ ಮಾಡಿ, ಪತಿಯ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಪತಿ ಪಂಕಜ್ ವಿರುದ್ಧ ಆರೋಪ ಮಾಡಿರುವ ಜ್ಯೋತಿ, ಪತಿ ನನ್ನ ಮೇಲೆ ಯಾವಾಗಲೂ ಅನುಮಾನ ಪಡುತ್ತಿದ್ದರು. ಸಾಕಷ್ಟು ಬಾರಿ ಬುದ್ಧಿ ಹೇಳಿದರೂ ಸುಧಾರಿಸಿರಲಿಲ್ಲ. ಹೀಗಾಗಿ ತಾನೂ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದೇನೆ. ನಾನು ಸತ್ತ ನಂತರ ಮಗಳು ಅನಾಥ ಳಾಗುತ್ತಾಳೆ ಎಂದು ಭಾವಿಸಿ ನನ್ನೊಂದಿಗೆ ಆಕೆಯನ್ನು ಕರೆದೊಯ್ಯುತ್ತಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ ಎಂದು ಪೊಲೀಸರು ಹೇಳಿದರು.