Advertisement

ಮಗು ಅಪಹರಣ ಪ್ರಕರಣ; ಮೂವರು ಅಂದರ್‌

03:40 PM Mar 15, 2022 | Team Udayavani |

ಹಾವೇರಿ: ಇತ್ತೀಚೆಗೆ ಹಾನಗಲ್ಲ ಪಟ್ಟಣದಲ್ಲಿ ನಡೆದ ಮಗು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು, ಬ್ಯಾಡಗಿ ಶಹರದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ಹಾಗೂ ಹಾವೇರಿ ತಾಲೂಕಿನ ಯಲಗಚ್ಚ-ಕೋಣನತಂಬಿಗಿ ಗ್ರಾಮಗಳ ಸಮೀಪ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಯಶಸ್ಸಿಯಾಗಿದೆ.

Advertisement

ನಗರದ ಎಸ್ಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಫೆ.27ರಂದು ಹಾನಗಲ್ಲ ಪಟ್ಟಣದ ಇಂದಿರಾನಗರದ ಮನೆ ಎದುರು ಆಟವಾಡುತ್ತಿದ್ದ ಎರಡು ವರ್ಷದ ಮಗುವನ್ನು ಅಪರಿಚಿತರಿಬ್ಬರು ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು ಹಾನಗಲ್ಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.  ಈ ಪ್ರಕರಣ ಬೇಧಿಸಲು 3 ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಆರೋಪಿತರು ಹಿರೇಕೆರೂರಿನಲ್ಲಿ ಬೈಕ್‌ ಕಳ್ಳತನ ಮಾಡಿಕೊಂಡು ಬಂದು ಮಗುವನ್ನು ಅಪಹರಿಸಿರುವ ವಿಷಯ ಗೊತ್ತಾಗಿದೆ. ಬಳಿಕ ಅವರು ಮಾ. 10ರಂದು ಲಕ್ಷ್ಮೇಶ್ವರದಲ್ಲಿ ಕಳ್ಳತನ ಮಾಡಲಾಗಿದ್ದ ಮೊಬೈಲ್‌ನಿಂದ ಮಗುವಿನ ಪಾಲಕರಿಗೆ ಕರೆ ಮಾಡಿ 5 ಲಕ್ಷ ರೂ. ನೀಡುವಂತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಮಾಹಿತಿ ನೀಡಿದರು.

ಮಗುವಿನ ಪೋಷಕರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂದು ಪೊಲೀಸರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದಾಗ ಆರೋಪಿಗಳು ಮಗುವನ್ನು ಹಾಸನ ಜಿಲ್ಲೆ ಅರಸೀಕೆರೆ ಸಮೀಪದ ಜಾವಗಲ್ಲ ದರ್ಗಾದಲ್ಲಿ ಬಚ್ಚಿಟ್ಟಿರುವ ವಿಷಯ ಗೊತ್ತಾಗಿದೆ. ಅವರು ಮರಳಿ ಹಾವೇರಿ ಕಡೆ ವಾಪಸ್‌ ಬರುತ್ತಿದ್ದ ವೇಳೆ ಹರಿಹರ ರೈಲು ನಿಲ್ದಾಣದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಸತ್ಯಾಂಶ ಒಪ್ಪಿಕೊಂಡಿದ್ದಾರೆ. ಬಳಿಕ ಮಗುವನ್ನು ರಕ್ಷಣೆ ಮಾಡಿ, ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪೋಷಕರಿಗೆ ಒಪ್ಪಿಸಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

ಬ್ಯಾಡಗಿ ಶಹರದ ದಾಸರ ಓಣಿ ಮನೆಯೊಂದರಲ್ಲಿ ಸುಮಾರು 3 ಲಕ್ಷ ರೂ.ಗಳ ಬೆಳ್ಳಿ-ಬಂಗಾರ ಹಾಗೂ ನಗದು ಕಳ್ಳತನವಾಗಿರುವ ಕುರಿತು ಮಾ. 4ರಂದು ಬ್ಯಾಡಗಿ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇನ್ನೋರ್ವ ಆರೋಪಿ ಪತ್ತೆಗಾಗಿ ಜಾಲ ರೂಪಿಸಲಾಗಿದೆ. ಸದ್ಯ ಬಂ ಧಿತ ಆರೋಪಿಯಿಂದ ಕಳ್ಳತನವಾದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಕುರಿಗಾಹಿಯೋರ್ವನ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಹಾವೇರಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹರಿಹರ ತಾಲೂಕು ಬಾನುವಳ್ಳಿ ಗ್ರಾಮದ ನಾಗರಾಜ ಬಲರಾಮಪ್ಪ ಆಡಿನವರ ಕೊಲೆಯಾದ ವ್ಯಕ್ತಿ. ಈ ಪ್ರಕರಣಕ್ಕೆ ಸಂಬಂಧಿ ಸಿದಂತೆ ಮೃತನ ತಾಯಿ ನೀಡಿದ ದೂರಿನ ಹಿನ್ನೆಲೆ ತನಿಖೆ ಆರಂಭಿಸಲಾಯಿತು. ಹರಿಹರ ತಾಲೂಕು ಬಾನುವಳ್ಳಿ ಗ್ರಾಮದವರೇ ಆದ ದೇವರಾಜ ಬಲರಾಮಪ್ಪ ಕೋಣನತಲೆ ಹಾಗೂ ನಾರಾಯಣ ಬಲರಾಮಪ್ಪ ಕೊಣನತೆಲೆ ಕೊಲೆಗೈದಿರುವ ಆರೋಪಿಗಳು. ಇವರು ಕುರಿಗಾಹಿ ತಲೆಗೆ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದರು. ಬಳಿಕ ಬೈಕ್‌ ಅಪಘಾತ ಎನ್ನುವಂತೆ ಬಿಂಬಿಸುವ ಪ್ರಯತ್ನ ಮಾಡಿದ್ದರು. ಈಗ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

Advertisement

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ, ಡಿಎಸ್‌ಪಿ ಶಂಕರ ಮಾರಿಹಾಳ, ಶಿಗ್ಗಾವಿ ಡಿಎಸ್‌ಪಿ ಒ.ಬಿ ಕಲ್ಲೇಶಪ್ಪ, ಡಿಸಿಆರ್‌ಬಿ ಡಿಎಸ್‌ಪಿ ಎಂ.ಎಸ್‌ ಪಾಟೀಲ ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next