Advertisement

ಮಕ್ಕಳ ಆರೋಗ್ಯ ಕಾಳಜಿ ಅತ್ಯಗತ್ಯ

08:08 AM Feb 10, 2019 | Team Udayavani |

ದಾವಣಗೆರೆ: ಪ್ರತಿಯೊಬ್ಬರೂ ಸಹ ಉತ್ತಮ ಆಹಾರ ಸೇವಿಸುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ಹೇಳಿದರು.

Advertisement

ನಗರದ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಮಾತ್ರೆ ನುಂಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಇಂದು ಎಷ್ಟೇ ಮುಂದುವರೆದರೂ ಕೂಡ ಅದಕ್ಕೆ ಸವಾಲಾಗಿ ಹೊಸ ಹೊಸ ಕಾಯಿಲೆಗಳು ಸೃಷ್ಟಿಯಾಗುತ್ತಿವೆ. ಆರೋಗ್ಯವೇ ಭಾಗ್ಯ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಬಾಲ್ಯದಿಂದಲೇ ಕಾಳಜಿವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ| ಜಿ.ಡಿ. ರಾಘವನ್‌ ಮಾತನಾಡಿ, ಮಕ್ಕಳು ಭೌತಿಕ, ಸಾಮಾಜಿಕ, ಮಾನಸಿಕವಾಗಿ ಆರೋಗ್ಯವಂತರಾದಾಗ ಮಾತ್ರ ಸಂಪೂರ್ಣ ಆರೋಗ್ಯ ವೃದ್ಧಿಯಾಗುತ್ತದೆ. ಭಾರತದಲ್ಲಿ ಒಂದನೇ ವಯಸ್ಸಿನಿಂದ 16ನೇ ವಯಸ್ಸಿನ ಮಕ್ಕಳಲ್ಲಿ 21.01 ಕೋಟಿ ಮಕ್ಕಳ ಕರುಳಿನಲ್ಲಿ ಪರಾವಲಂಬಿ ಹುಳುಗಳಿವೆ. ಇವುಗಳ ಪ್ರಭಾವದಿಂದ ಮಕ್ಕಳ ಓದಿನಲ್ಲಿ ಏಕಾಗ್ರತೆ, ರಕ್ತಹಿನತೆ, ನೆನಪಿನ ಶಕ್ತಿ, ಶಾಲೆಯಲ್ಲಿ ಕಲಿಕಾ ಸಾಮರ್ಥ್ಯ ಹಾಗೂ ದೈಹಿಕ ಬೆಳವಣಿಗೆಯಲ್ಲಿ ತೀವ್ರ ಕುಂಠಿತವಾಗುತ್ತದೆ‌ ಎಂದರು.

ಜಂತುಹುಳು ನಿವಾರಣಾ (ಆಲ್ಬೆಂಡಜೋಲ್‌) ಮಾತ್ರೆಯನ್ನು ಮಕ್ಕಳು ಸೇವಿಸುವುರಿಂದ ವಿದ್ಯಾಭ್ಯಾಸ, ಆರ್ಥಿಕತೆಯ ಫಲಿತಾಂಶದಲ್ಲಿ ಏರುಮುಖದ ಬೆಳವಣಿಗೆಯನ್ನು ಕಾಣಬಹುದು. ಆದ್ದರಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳು ವರ್ಷದಲ್ಲಿ ಎರಡು ಬಾರಿ ಜಂತುಹುಳು ನಿವಾರಣಾ ಮಾತ್ರೆಯನ್ನು ಸೇವಿಸುವುದು ಅವಶ್ಯಕವಾಗಿದೆ. ಇದು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದರು.

ರಾಮಕೃಷ್ಣ ಆಶ್ರಮದ ಶ್ರೀ ನಿತ್ಯಾನಂದ ಸ್ವಾಮೀಜಿ, ತಾಲೂಕು ವೈದ್ಯಾಧಿಕಾರಿ ಡಾ| ಮಂಜುನಾಥ ಪಾಟೀಲ್‌, ಡಾ| ರೇಣುಕಾರಾಧ್ಯ, ಆರೋಗ್ಯ ಮೇಲ್ವಿಚಾರಕ ಆರ್‌.ವಿ. ಕುಪಸ್ತ, ಬಿಹೆಚ್ಇಒ ಉಮಾಪತಿ, ಉತ್ತರ ವಲಯದ ಬಿ.ಇ.ಒ ಕೊಟ್ರೇಶ್‌, ಜಿಲ್ಲಾ ಸಮನ್ವಯಾಧಿಕಾರಿ ಪುಷ್ಪಾ, ಕಾಲೇಜಿನ ಪ್ರಾಂಶುಪಾಲ ರಾಜು, ಸಿಡಿಪಿಓ ವೀಣಾ ಸೇರಿದಂತೆ ಕಾಲೇಜಿನ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next