Advertisement

ಮಕ್ಕಳ ಸ್ನೇಹಿ ಕೋರ್ಟ್‌ ಆರಂಭ

11:49 AM Aug 06, 2017 | |

ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ “ಪೋಕ್ಸೋ’ ಕಾಯ್ದೆ ಜಾರಿಗೆ ಬಂದಾಗಿದೆ. ಅದರ ಮುಂದುವರಿದ ಭಾಗವಾಗಿ ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗೆ ಕಾಯಕಲ್ಪ ಕೊಟ್ಟಿರುವ ರಾಜ್ಯ ಸರ್ಕಾರ ಎರಡು ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯ ಸ್ಥಾಪಿಸಿದ್ದು, ಅದು ಶನಿವಾರದಿಂದ ತನ್ನ ಕೆಲಸ ಆರಂಭಿಸಿದೆ.

Advertisement

ಈ ಮಕ್ಕಳ ಸ್ನೇಹಿ ನ್ಯಾಯಾಲಯಗಳಿಗೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಮದನ್‌ ಬಿ. ಲೋಕೂರ ಚಾಲನೆ ನೀಡಿದರು. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌. ಕೆ. ಮುಖರ್ಜಿ, ಬಾಲ ನ್ಯಾಯ ಸಮಿತಿ ಅಧ್ಯಕ್ಷರೂ ಆದ ಹೈಕೋರ್ಟ್‌ ನ್ಯಾ. ಅಶೋಕ್‌ ಬಿ. ಹಿಂಚಗೇರಿ, ನ್ಯಾ. ಬಿ.ವಿ.ನಾಗರತ್ನ,  ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅಶೋಕ್‌ ಜಿ. ನಿಜಗಣ್ಣನವರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌ ಸೇರಿದಂತೆ ಹಲವರು ಇದಕ್ಕೆ ಸಾಕ್ಷಿಯಾದರು.

ಸಿಟಿ ಸಿವಿಲ್‌ ಕೋರ್ಟ್‌ ಆವರಣದ ಐದನೇ ಮಹಡಿಯಲ್ಲಿರುವ ಈ ನ್ಯಾಯಾಲಯಗಳನ್ನು ಹೈಕೋರ್ಟ್‌ನ ಬಾಲ ನ್ಯಾಯ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ವಕೀಲರ ಸಂಘದ ಸಹಯೋಗದೊಂದಿಗೆ ಸ್ಥಾಪಿಸಲಾಗಿರುವ ಈ ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯಗಳಲ್ಲಿ  ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪೋಕ್ಸೋ ಪ್ರಕರಣಗಳ ವಿಚಾರಣೆ ಇಲ್ಲಿ ನಡೆಯಲಿವೆ.

ಈ ಮೂಲಕ ದೆಹಲಿ, ಗೋವಾ, ತೆಲಂಗಾಣದ ಬಳಿಕ ಪೋಕ್ಸೋ ಪ್ರಕರಣಗಳ ವಿಚಾರಣೆಗೆ ” ಮಕ್ಕಳ ಸ್ನೇಹಿ’ ಕೋರ್ಟ್‌ಗಳನ್ನು ಸ್ಥಾಪಿಸಿದ ಹೆಗ್ಗಳಿಕೆಗೆ ರಾಜ್ಯಸರ್ಕಾರ ಪಾತ್ರವಾಗಲಿದೆ. ಮಕ್ಕಳ ಮಾನಸಿಕತೆ, ಸಂವೇದನ, ಸೂಕ್ಷ್ಮತೆ ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ ಈ ವಿಶೇಷ ಕೋರ್ಟ್‌ಗಳ ಕಾರ್ಯಶೈಲಿ ಸಂಪೂರ್ಣ ವಿಭಿನ್ನವಾಗಿರಲಿದೆ. ಮಕ್ಕಳಿಗೆ ಆಪ್ತ ಮತ್ತು ಆಕರ್ಷಕವೆನಿಸುವ”ಪ್ಲೇ ಹೋಮ್‌ಗಳ’ ಮಾದರಿಯಲ್ಲಿ ಅವು ಕಾರ್ಯನಿರ್ವಹಿಸಲಿವೆ. ವಿಚಾರಣೆಗೊಳಪಡುವ ಮಕ್ಕಳಿಗೆ ಇಲ್ಲ ಭಯಮುಕ್ತ ಹಾಗೂ ಕೌಟುಂಬಿಕ ಪರಿಸರದಂತಹ ವಾತಾವರಣ ನಿರ್ಮಾಣ ಇರಲಿದೆ. ಅದು ಕೋರ್ಟ್‌ ಆಗಿದ್ದರೂ, ಕೋರ್ಟ್‌ ರೀತಿ ಕಾಣಿಸುವುದಿಲ್ಲ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಈಗಾಗಲೇ ಮಾನಸಿಕವಾಗಿ ಕುಗ್ಗಿರುವ ಸಂತ್ರಸ್ಥ ಮಕ್ಕಳ ಮನಸ್ಸಿಗೆ ಕೋರ್ಟ್‌ನ ವಿಚಾರಣೆ ಮತ್ತಷ್ಟು ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳುವ ಸಲುವಾಗಿ ಮಕ್ಕಳ ಸ್ನೇಹಿ ಕೋರ್ಟ್‌ಗಳನ್ನು ರೂಪಿಸಲಾಗಿದೆ. ವಿಚಾರಣೆಗೆ ಬರುವ ಸಂತ್ರಸ್ಥ ಮಕ್ಕಳು ಹಾಗೂ ಪೋಷಕರಿಗೆ ಪ್ರತ್ಯೇಕ ಕೊಠಡಿ, ಮಕ್ಕಳಿಗೆ ಆಪ್ತವೆನಿಸುವ ವಾತಾವರಣ ರೂಪಿಸಲು ಗೋಡೆಗಳ ಮೇಲೆ ಚಿತ್ರಪಟಗಳು, ಆಟವಾಡಲು ಆಟಿಕೆ ವಸ್ತುಗಳು, ಹಸಿವಾದರೆ ತಿಂಡಿ, ಸಿಹಿ ತಿನಿಸುಗಳು, ಹಾಲು ಕೊಡುವ ಕ್ಯಾಂಟೀನ್‌ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.

Advertisement

ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎಂಬ ಸಂಗತಿ ಮಕ್ಕಳ ಗಮನಕ್ಕೆ ಬಾರದ ಹಾಗೆ ವಕೀಲರು ಹಾಗೂ ನ್ಯಾಯಾಧೀಶರು ನಡೆದುಕೊಳ್ಳಲಿದ್ದಾರೆ. ನ್ಯಾಯಾಧೀಶರು ಮನೆಯ ಹಿರಿಯ ಸದಸ್ಯರಂತೆ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದಾರೆ. ಅಲ್ಲದೆ, ದೌರ್ಜನ್ಯ ಎಸಗಿದ ಆರೋಪಿಗಳು ಯಾವುದೇ ಕಾರಣಕ್ಕೂ ಸಂತ್ರಸ್ಥ ಮಕ್ಕಳ ಕಣ್ಣಿಗೆ ಬೀಳದಂತೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಆರೋಪಿಗಳಿಗೆ ಪ್ರತ್ಯೇಕವಾದ ಏಕಮುಖ ಗಾಜಿನ ಕಟಕಟೆ ನಿರ್ಮಿಸಲಾಗಿದ್ದು, ಮಕ್ಕಳಿಗೆ ಆರೋಪಿ ಕಾಣಿಸುವುದಿಲ್ಲ. ಕೆಲ ಅನಿವಾರ್ಯ ಸಂಧರ್ಭಗಳಲ್ಲಿ ಮಾತ್ರ ಆರೋಪಿಯನ್ನು ತೋರಿಸಲಾಗುವುದು. 

ಈಗಾಗಲೇ ಸಿಟಿ ಸಿವಿಲ್‌ ಕೋರ್ಟ್‌ನ ಐದನೇ ಮಹಡಿಯಲ್ಲಿರುವ  51, 54, 55ನೇ ಕೋರ್ಟ್‌ ಹಾಲ್‌ಗ‌ಳಲ್ಲಿ ಪೋಕ್ಸೋ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ಹೊಸದಾಗಿ ರೂಪುಗೊಂಡಿರುವ ಮಕ್ಕಳ ಸ್ನೇಹಿ ಎರಡು ಕೋರ್ಟ್‌ಗಳಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದ 750ಕ್ಕೂ ಅಧಿಕ ಹಾಗೂ ಬೆಂಗಳೂರು ಗ್ರಾಮಾಂತರದ 250ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳ ವಿಚಾರಣೆ ನಡೆಯಲಿದೆ. ಇದರಿಂದ ಪ್ರಕರಣಗಳ ಇತ್ಯರ್ಥ ಚುರುಕುಗೊಳ್ಳಲಿದ್ದು,ಆರೋಪಿಗಳಿಗೆ ಶಿಕ್ಷೆಯಾಗಲಿದೆ ಎಂದು ಕೋರ್ಟ್‌ ಅಧಿಕಾರಿಗಳು ಹೇಳುತ್ತಾರೆ.

ಇದು ಕೋರ್ಟ್‌ ಎಂದು ಮಕ್ಕಳಿಗೆ ತಿಳಿಯುವುದೇ ಇಲ್ಲ 
ಕೋರ್ಟ್‌ಗಳಿಗೆ ಬರಲು ಸಂತ್ರಸ್ಥ ಮಕ್ಕಳು ಹಾಗೂ ಪೋಷಕರಿಗೆ ಪ್ರತ್ಯೇಕ ಲಿಫ್ಟ್ ಹಾಗೂ ಆರೋಪಿಗಳು, ಪೊಲೀಸರಿಗೆ ಮತ್ತೂಂದು ಲಿಫ್ಟ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಇವುಗಳಲ್ಲಿ ವಕೀಲರು ಹಾಗೂ ಇತರೆ ಸಾರ್ವಜನಿಕರ ಓಡಾಟಕ್ಕೆ ಅವಕಾಶವಿರುವುದಿಲ್ಲ. ವಿಚಾರಣೆ ವೇಳೆ ಕೂಡ ಮಕ್ಕಳಿಗೆ ಇದು ಕೋರ್ಟ್‌ ಎಂಬ  ಸಂಗತಿ ಬರದ ಹಾಗೇ ನೋಡಿಕೊಳ್ಳಲಾಗುತ್ತದೆ ಕೋರ್ಟ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next