Advertisement

ಮಕ್ಕಳ ಶುಲ್ಕ,ಪಾಲಕರಿಗೆ ಆನ್‌ಲೈನ್‌ ತರಬೇತಿ ಕಿರಿಕಿರಿ

02:06 AM Jun 09, 2020 | Sriram |

ಬೆಂಗಳೂರು: ಮಕ್ಕಳ ಶೈಕ್ಷಣಿಕ ಶುಲ್ಕ ಪಡೆದು, ಹೆತ್ತವರಿಗೆ ಆನ್‌ಲೈನ್‌ ಮೂಲಕ ತರಬೇತಿ ನೀಡಿ, ಮನೆ ಯಲ್ಲಿ ಮಕ್ಕಳಿಗೆ ಕಲಿಸಿಕೊಡುವಂತೆ ಹೇಳುವ ಹಣ ಗಳಿಕೆಯ ಹೊಸ ಮಾರ್ಗವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಕಂಡುಕೊಂಡಿದ್ದು, ಇದನ್ನು ತಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ.

Advertisement

ಬಹುತೇಕ ಹೆತ್ತವರು ಉದ್ಯೋಗಿಗಳು, ಇನ್ನು ಕೆಲವ ರಿಗೆ ಭಾಷೆಯ ಸಮಸ್ಯೆ ಇರುತ್ತದೆ. ಅನೇಕರಿಗೆ ನೆಟ್‌ವರ್ಕ್‌ ಸಮಸ್ಯೆಯಿದೆ. ಹೀಗಿರುವಾಗ ಆನ್‌ಲೈನ್‌ ತರಗತಿ ಅಥವಾ ತರಬೇತಿಯಲ್ಲಿ ಭಾಗಿಯಾಗುವುದು ಹೇಗೆ ಎಂಬುದು ಪ್ರಶ್ನೆ.

ಪಾಲಕರಿಗೆ ಆನ್‌ಲೈನ್‌ ತರಬೇತಿ ಕುರಿತು ಶಿಕ್ಷಣ ಸಚಿವರು ಅಥವಾ ಶಿಕ್ಷಣ ಇಲಾಖೆ ಖಾಸಗಿ ಯಾವುದೇ ಸೂಚನೆ ನೀಡಿಲ್ಲ. ಸರಕಾರವು ತಟಸ್ಥ ನಿಲುವು ಹೊಂದಿರುವುದರಿಂದಲೇ ಖಾಸಗಿ ಶಿಕ್ಷಣ ಸಂಸ್ಥೆ ಗಳು ಆನ್‌ಲೈನ್‌ ಶಿಕ್ಷಣ, ಶುಲ್ಕ ವಸೂಲಿ ವಿಚಾರದಲ್ಲಿ ತಾವು ಮಾಡಿದ್ದೇ ಕಾನೂನು ಎಂಬಂತೆ ನಡೆದುಕೊಳ್ಳುತ್ತಿವೆ.

ತರಗತಿ ಆರಂಭಿಸಲು ಸರಕಾರ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿಲ್ಲ. ಆದರೂ ಹಲವು ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ನಡೆಸುತ್ತಿವೆ. ಪಾಲಕರಿಗೆ ಆನ್‌ಲೈನ್‌ ತರಗತಿ ನೀಡಿ, ಅದನ್ನು ಮನೆಯಲ್ಲಿ ಮಕ್ಕಳಿಗೆ ಕಲಿಸುವಂತೆ ನಿರ್ದೇಶಿಸಿವೆ. ಅಲ್ಲದೆ ಇದಕ್ಕಾಗಿ ಶೈಕ್ಷಣಿಕ ಶುಲ್ಕ ಪಾವತಿಸಲೇಬೇಕು ಎಂದು ಫರ್ಮಾನು ಹೊರಡಿಸಿವೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಈ ಕ್ರಮಕ್ಕೆ ಪಾಲಕ, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರವೇ ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅನೇಕ ಹೆತ್ತವರು ಒತ್ತಾಯಿಸಿದ್ದಾರೆ.

Advertisement

ಹೋಂ ವರ್ಕ್‌ಗೆ ಸೂಚನೆ
ಬೆಳಗ್ಗೆ ಬಂದು ಮಕ್ಕಳ ಹೋಂ ವರ್ಕ್‌ ಪುಸ್ತಕ ಕೊಟ್ಟು ಹೋಗಿ, ಸಂಜೆ ಶಾಲೆ ಬಿಡುವ ಸಮಯಕ್ಕೆ ಬಂದು ವಾಪಸ್‌ ಒಯ್ಯಿರಿ ಎಂದು ಸೂಚಿಸಿರುವ ಉದಾಹರಣೆಯೂ ಇದೆ. ಹೋಂ ವರ್ಕ್‌ ಪುಸ್ತಕದಲ್ಲಿ ಸೂಚಿಸಿದ್ದನ್ನು ಮಗು ಮನೆಯಲ್ಲಿ ಮಾಡಬೇಕು. ಇದೆಲ್ಲವೂ ಹಣ ಮಾಡುವ ತಂತ್ರವೇ ವಿನಾ ಬೋಧನೆಯ ಘನ ಉದ್ದೇಶದ್ದಲ್ಲ. ಸಚಿವ ಸುರೇಶ್‌ ಕುಮಾರ್‌ ಇದರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಶುಲ್ಕ ಪಾವತಿಸಿ, ಪುಸ್ತಕ ಒಯ್ಯಿರಿ
ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಕಂತು ರೂಪದಲ್ಲಿ ಶುಲ್ಕ ಪಡೆಯುತ್ತಿದ್ದು, ಮೊದಲ ಕಂತಿನ ಹಣ ಪಾವತಿಸಿ ಪಠ್ಯಪುಸ್ತಕ ಕೊಂಡೊಯ್ಯಿರಿ ಎಂಬ ಸಂದೇಶವನ್ನು ಪಾಲಕರಿಗೆ ರವಾನಿಸಿವೆ. ಶಾಲೆ ಯಾವಾಗ ಆರಂಭ ಎಂಬ ಬಗ್ಗೆಯೇ ಇನ್ನೂ ತೀರ್ಮಾನವಾಗಿಲ್ಲ. ಅದಕ್ಕೂ ಮೊದಲೇ ಶುಲ್ಕ ಪಾವತಿಗೆ ಒತ್ತಾಯಿಸುತ್ತಿವೆ. ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ ಎಂದು ನಗರದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಯ ಹೆತ್ತವರೊಬ್ಬರು ನೋವು ತೋಡಿಕೊಂಡಿದ್ದಾರೆ.

ಆನ್‌ಲೈನ್‌ ಶಿಕ್ಷಣ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಸೋಮವಾರ ಇಲಾಖೆಯ ಸಭೆ ನಡೆಸಿದ್ದು, ಚರ್ಚೆ ಅಪೂರ್ಣವಾಗಿದೆ. ಮಂಗಳವಾರ ಪೂರ್ವನಿಯೋಜಿತ ಕಾರ್ಯಕ್ರಮದಂತೆ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಶಿಕ್ಷಣ ಇಲಾಖೆ ಸಭೆಗಳಲ್ಲಿ ಭಾಗವಹಿಸಲಿದ್ದೇನೆ. ಬುಧವಾರ ಇದೇ ವಿಚಾರದ ಕುರಿತು ವಿಸ್ತೃತ ಸಭೆ ನಡೆಯಲಿದೆ.
-ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ

ದೇಶದಲ್ಲಿ ಇಂಟರ್‌ನೆಟ್‌ ಸಂಪರ್ಕ ಸಾಧ್ಯವಿರುವುದು ಕೇವಲ ಶೇ. 24 ಜನರಿಗೆ ಮಾತ್ರ. ಗ್ರಾಮೀಣ ಪ್ರದೇಶದಲ್ಲಿ ಶೇ.15 ಮಾತ್ರ. ಹೀಗಿರುವಾಗ ಆನ್‌ಲೈನ್‌ ಶಿಕ್ಷಣ ಎನ್ನುವುದು ಬಹುಜನರನ್ನು ಶಿಕ್ಷಣದಿಂದ ಹೊರಗಿಡುವ ಹೊಸ ವರ್ಣಾಶ್ರಮವಾಗುವ ಅಪಾಯವಿದೆ. ಒಂದು ವೇಳೆ ಸೌಲಭ್ಯ ಕಲ್ಪಿಸಿದರೂ ನೇರ ತರಗತಿಗೆ ಆನ್‌ಲೈನ್‌ ಪರ್ಯಾಯ ಅಲ್ಲವೇ ಅಲ್ಲ. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ತುಂಬಾ ಮಿತಿಯಲ್ಲಿರಬೇಕು. ಮಕ್ಕಳನ್ನು ಯಂತ್ರಗಳನ್ನಾಗಿ ರೂಪಾಂತರಿಸಬಾರದು.
– ಪ್ರೊ| ಬರಗೂರು ರಾಮಚಂದ್ರಪ್ಪ,
ಕನ್ನಡ ಅಭಿವೃದ್ಧಿ ಪ್ರಾಧಿ ಕಾ ರದ ಮಾಜಿ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next