ಕೆಜಿಎಫ್: ನಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದೇ ಮಗು ಹೊಟ್ಟೆಯಲ್ಲೇ ಮೃತಪಟ್ಟಿದ್ದು, ನೆಲದ ಮೇಲೆ ಕುಳಿತು ನರಳಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ನಂತರ ಆಸ್ಪತ್ರೆಯಲ್ಲಿ ರೋಗಿಯನ್ನು ಯಾರೂ ಗಮನಿಸುತ್ತಿಲ್ಲ. ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಆರೋಪಿಸಿದ್ದಾರೆ. ಇದೇ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ಸಹ ಆ್ಯಂಬುಲೆನ್ಸ್ ಕರೆಸಲು ಪ್ರಯತ್ನ ಪಟ್ಟಿದ್ದಾರೆ. ಮಹಿಳೆಯನ್ನು ಆಸ್ಪತ್ರೆಯ ಸಿಬ್ಬಂದಿ ಹೊರತರುತ್ತಿರುವಾಗ ಪ್ರೇಮಕುಮಾರ್ ಮತ್ತು ಸಹಚರರು ಅಡ್ಡಿ ಪಡಿಸಿದ್ದಾರೆ. ಅವರೇ ಸ್ಟ್ರೆಚರ್ ತೆಗೆದುಕೊಂಡು ಆ್ಯಂಬುಲೆನ್ಸ್‌ಗೆ ರೋಗಿಯನ್ನು ಸಾಗಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಬಿಡುಗಡೆ ಮಾಡಿದ ಪ್ರೇಮಕುಮಾರ್, ಆಸ್ಪತ್ರೆಯ ದುರಾವಸ್ತೆ ಬಗ್ಗೆ ಹೇಳಿಕೊಂಡಿದ್ದಾರೆ.
ವೈದ್ಯರಿಗೆ ತರಾಟೆ: ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಾಸಕಿ ಎಂ.ರೂಪಕಲಾ ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ಹಣ ಕೊಟ್ಟು ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲದ ಬಡವರು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಮಾನವೀಯತೆ ಇಟ್ಟುಕೊಂಡು ಕೆಲಸ ಮಾಡಬೇಕೇ ವಿನಃ ಪಶುಗಳಂತೆ ವರ್ತಿಸಬಾರದು ಎಂದು ಆಕ್ರೋಶದ ನುಡಿಗಳನ್ನಾಡಿದರು.
ಅವರ ಮನೆಯ ವಾತಾವರಣ ಏನೇ ಇರಲಿ. ಆಸ್ಪತ್ರೆಯಲ್ಲಿ ಅವರಿಗೆ ಸಾಂತ್ವನ ಸಿಗಬೇಕು. ಆಸ್ಪತ್ರೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಸುತ್ತಲೂ ಕಾಂಪೌಂಡು ಹಾಕಿಸಿದ್ದೇನೆ. ಪೊಲೀಸ್ ಭದ್ರತೆಯನ್ನೂ ನೀಡಿದ್ದೇನೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Advertisement
ನಗರದ ಫೋರ್ತ್‌ಬ್ಲಾಕ್‌ನ ಗರ್ಭಿಣಿ ಸಮೀನ ತಪಾಸಣೆಗಾಗಿ ಸೋಮವಾರ ಮಧ್ಯಾಹ್ನ 2.30ಕ್ಕೆ ಆಸ್ಪತ್ರೆಗೆ ಬಂದಿದ್ದಾರೆ. ಏಳು ತಿಂಗಳ ಗರ್ಭಿಣಿಯಾದ ಇವರನ್ನು ಪರಿಶೀಲಿಸಿದ ವೈದ್ಯರು ಹೊಟ್ಟೆಯೊಳಗೆ ಮಗುವಿನ ಚಲನವಲನ ಗೋಚರವಾಗುತ್ತಿಲ್ಲ. ಆದ್ದರಿಂದ ಸ್ಕ್ಯಾನ್ ಮತ್ತು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು. ಅದರಂತೆ ಸಮೀನ ಸ್ಕ್ಯಾನ್ ಮಾಡಿಸಿಕೊಂಡು ಪುನಃ ಆಸ್ಪತ್ರೆಗೆ ಬಂದಿದ್ದಾರೆ. ಆ ಸಮಯದಲ್ಲಿ ವೈದ್ಯರು ಇನ್ನೊಂದು ರೋಗಿ ತಪಾಸಣೆ ಮಾಡುತ್ತಿದ್ದು, ಈ ವೇಳೆ ಸಮೀನಾ ಆಸ್ಪತ್ರೆಯ ಕಾರಿಡಾರ್‌ನ ನೆಲದ ಮೇಲೆ ಕುಳಿತಿದ್ದರು. ಆಗ ಪ್ರೇಮ್‌ಕುಮಾರ್ ಎಂಬಾತ ಸಮೀನ ಅವರು ನೆಲದ ಮೇಲೆ ಕುಳಿತು ನರಳಾಡುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ.
Related Articles
Advertisement
ಗೌರವಯುತವಾಗಿ ನಡೆಸಿಕೊಳ್ಳಿ:ನೆಲದ ಮೇಲೆ ಕುಳಿತು ನರಳುತ್ತಿರುವ ಮಹಿಳೆ ನಿಮ್ಮ ಸಿಬ್ಬಂದಿಯ ಕಣ್ಣಿಗೆ ಕಾಣುವುದಿಲ್ಲವೇ? ನಿಮ್ಮ ಮನೆಯ ಹೆಣ್ಣು ಮಕ್ಕಳಾದರೆ ಇದೇ ರೀತಿ ಮಾಡುತ್ತೀರ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮಲ್ಲಿ ರೋಗಿಗೆ ನೀಡುವ ಹೆಚ್ಚುವರಿ ಚಿಕಿತ್ಸೆ ಸೌಲಭ್ಯ ಇಲ್ಲವಾದಲ್ಲಿ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಬೇರೆಡೆಗೆ ಕಳಿಸಿ. ಗೌರವಯುತವಾಗಿ ನಡೆಸಿಕೊಳ್ಳಿ ಎಂದು ಶಾಸಕಿ ತಾಕೀತು ಮಾಡಿದರು.
ಸೌಲಭ್ಯವಿಲ್ಲ:ಸಮೀನ ಪ್ರಕರಣದಲ್ಲಿ ಹೆರಿಗೆ ಆಸ್ಪತ್ರೆಯಲ್ಲಿ ಸಿಬ್ಬಂದಿ ತಮ್ಮ ಶ್ರಮವನ್ನು ನಿರ್ವಹಿಸಿದ್ದಾರೆ. ಆಕೆಗೆ ಬೇಕಾದ ಎಲ್ಲಾ ಚಿಕಿತ್ಸೆಯನ್ನೂ ನೀಡಿದ್ದಾರೆ. ಮಹಿಳೆಯ ಮಗು ಹೊಟ್ಟೆಯೊಳಗೆ ಮೃತಪಟ್ಟಿರುವುದು ತಿಳಿದಿದೆ. ಆದರೆ, ಹೆಚ್ಚುವರಿ ಸೌಲಭ್ಯಗಳು ನಮ್ಮಲ್ಲಿ ಇಲ್ಲದೆ ಇರುವುದರಿಂದ ಕೋಲಾರದ ಆಸ್ಪತ್ರೆಗೆ ಕಳಿಸಲು ನಿರ್ಧರಿಸಲಾಯಿತು ಎಂದು ವೈದ್ಯರು ಉತ್ತರಿಸಿದರು.
ಪೊಲೀಸರಿಗೆ ಪ್ರಶ್ನೆ: ಸಾಮಾಜಿಕ ಜಾಲತಾಣಗಳ ವರದಿಗಾರ ಪ್ರೇಮಕುಮಾರ್ ಎಂಬಾತನ ಹಾವಳಿಯನ್ನು ತಡೆಯಲು ಪೊಲೀಸ್ ಅಧಿಕಾರಿಗಳಿಗೆ ಆಗಲಿಲ್ಲ. ಆಸ್ಪತ್ರೆ ಯಲ್ಲಿ ನಡೆಯುವ ಘಟನೆಗಳನ್ನು ದೊಡ್ಡದಾಗಿ ಬಿಂಬಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಆತನನ್ನು ಆಸ್ಪತ್ರೆಗೆ ಸೇರಿಸಿದ್ದು ಹೇಗೆ? ಪೊಲೀಸ್ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ ಎಂದು ರೂಪಕಲಾ ಪ್ರಶ್ನಿಸಿದರು. ಭಾನುವಾರ ಆಸ್ಪತ್ರೆಯಲ್ಲಿ ಮೃತಪಟ್ಟ ದಿಲೀಪ್ ಕುಮಾರ್ ಎಂಬಾತನ ಸಾವಿನ ಬಗ್ಗೆ ಕೂಡ ಮಾಹಿತಿ ಪಡೆದರು.
ಪ್ರೇಮ್‌ಕುಮಾರ್ ವಿರುದ್ಧ ಪ್ರಕರಣ ದಾಖಲು:
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇರೆಗೆ ಸಾಮಾಜಿಕ ಜಾಲತಾಣದ ವರದಿಗಾರ ಪ್ರೇಮಕುಮಾರ್ ವಿರುದ್ಧ ರಾಬರ್ಟಸನ್‌ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಆರೋಪಿ ವಿರುದ್ಧ ಐಪಿಸಿ 353 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆ ಮಾಡುವಾಗ ಹಾಜರಿದ್ದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಪ್ರೇಮಕುಮಾರ್ ಎಂಬಾತನ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಕುಮಾರ್ ಮತ್ತು ಸಿಬ್ಬಂದಿ ಸೋಮವಾರ ದೂರು ನೀಡಿದ್ದರು.
ಕರ್ತವ್ಯ ಲೋಪ ವೈದ್ಯರ ಅಮಾನತು, ನೋಟಿಸ್ ಜಾರಿ:
ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಚಿಕಿತ್ಸೆ ನೀಡದ ಕಾರಣ ಮಗು ಮೃತಪಟ್ಟಿರುವ ಬಗ್ಗೆ ಬಂದಿರುವ ಮಾಹಿತಿ ಮೇರೆಗೆ ನಿರ್ಲಕ್ಷ್ಯ ತೋರಿದ ವೈದ್ಯರು ಹಾಗೂ ಸಂಬಂಧಪಟ್ಟವರನ್ನು ಅಮಾನತುಗೊಳಿಸಿ ಅವರ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವರು ನಿರ್ದೇಶಿಸಿದ್ದಾರೆ. ಅದೇ ರೀತಿ ವೈದ್ಯರ ನಿರ್ಲಕ್ಷ್ಯದಿಂದ ಮಗುಗೆ ಜೀವಹಾನಿ ಉಂಟಾಗಿರುವ ಕಾರಣ ಕರ್ತವ್ಯ ಲೋಪ ಎಸಗಿರುವ ವೈದ್ಯರ ವಿರುದ್ಧ ತಕ್ಷಣವೇ ಶಿಸ್ತು ಕ್ರಮಕೈಗೊಳ್ಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಸಹ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಎಲ್.ಸಿ.ವೀರೇಶ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.