Advertisement

Child Day Care Centre: ಕರಾವಳಿಯಲ್ಲಿ 55 “ಕೂಸಿನ ಮನೆ’

09:10 AM Aug 09, 2023 | Team Udayavani |

ಮಂಗಳೂರು: ನಗರ ಪ್ರದೇಶಗಳಲ್ಲಿ ಈಗಾಗಲೇ ಹೆಚ್ಚು ಪ್ರಚಲಿತದಲ್ಲಿರುವ, ದುಡಿಯುವ ಮಹಿಳೆಯರಿಗೆ ಅವರ ಶಿಶುಗಳನ್ನು ನೋಡಿಕೊಳ್ಳುವಂತಹ “ಚೈಲ್ಡ್‌ ಡೇ ಕೇರ್‌ ಸೆಂಟರ್‌’ ಮಾದರಿಯ “ಶಿಶುಪಾಲನಾ ಕೇಂದ್ರ’ಗಳು ಇನ್ನು ಮುಂದೆ ಗ್ರಾಮೀಣ ಭಾಗದಲ್ಲೂ ಆರಂಭವಾಗಲಿವೆ.

Advertisement

ಕೆಲಸಕ್ಕೆ ತೆರಳುವ ಗ್ರಾಮೀಣ ತಾಯಂದಿರ ಅನುಕೂಲಕ್ಕಾಗಿ ಮತ್ತು ಶಿಶುಗಳ ಆರೋಗ್ಯ, ಪೌಷ್ಟಿಕತೆ ಮತ್ತು ಸುರಕ್ಷೆಗಾಗಿ “ಕೂಸಿನ ಮನೆ’ ಎಂಬ ಹೆಸರಿನಲ್ಲಿ ರಾಜ್ಯದಲ್ಲಿ ಒಟ್ಟು 4 ಸಾವಿರ ಗ್ರಾಮ ಪಂಚಾಯತ್‌ಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಈ ಕೇಂದ್ರಗಳು ಆರಂಭವಾಗಲಿದ್ದು, ಮೊದಲ ಹಂತದಲ್ಲಿ ಆ. 15ರೊಳಗೆ ರಾಜ್ಯದ ಒಂದು ಸಾವಿರ ಗ್ರಾಮಗಳಲ್ಲಿ ಶಿಶುಪಾಲನಾ ಕೇಂದ್ರ ಆರಂಭಿಸುವ ಗುರಿ ಹೊಂದಲಾಗಿದೆ.

ಕರಾವಳಿಯಲ್ಲಿ 55 ಕೇಂದ್ರ:

ಆರಂಭಿಕ ಹಂತದಲ್ಲಿ ಅತೀ ಹೆಚ್ಚು ಆವಶ್ಯಕತೆ ಇರುವ ಜಿಲ್ಲೆಗಳಲ್ಲಿ ಕೇಂದ್ರ ರಚಿಸಲು ರಾಜ್ಯ ಸರಕಾರ ಉದ್ದೇಶಿಸಿದೆ. ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲಿ ನಿರ್ಮಾಣವಾಗಲಿದೆ. ಆದ್ದರಿಂದ ಮೊದಲ ಹಂತದ ಅನುಷ್ಠಾನದಲ್ಲಿ ದ.ಕ. ಉಡುಪಿ ಜಿಲ್ಲೆಗಳು ಸ್ಥಾನ ಪಡೆದಿಲ್ಲ. ಎರಡು ಮೂರನೇ ಹಂತದಲ್ಲಿ ಕರಾವಳಿಯಲ್ಲೂ ಕೇಂದ್ರಗಳು ಆರಂಭವಾಗಲಿದ್ದು, ಈಗಾಗಲೇ ದ.ಕ. ಜಿಲ್ಲೆಗೆ 33 ಕೇಂದ್ರ ಸ್ಥಾಪನೆ ಮತ್ತು ಉಡುಪಿ ಜಿಲ್ಲೆಯಲ್ಲಿ 22 ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಗುರಿ ನೀಡಲಾಗಿದೆ.

Advertisement

ಏನಿದು “ಕೂಸಿನ ಮನೆ’?:

ಆರಂಭದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಮಹಿಳಾ ಕೂಲಿ ಕಾರ್ಮಿಕರಿಗೆ ಅವರ ಸಣ್ಣ ಮಕ್ಕಳನ್ನು ಬೆಳಗ್ಗಿನಿಂದ ಸಂಜೆ ವರೆಗೆ ಬಿಡಲು ಎಂದು ಮೊದಲು ಯೋಜನೆ ರೂಪಿಸಲಾಗಿತ್ತು. ಬಳಿಕ ಗ್ರಾಮದ ಎಲ್ಲ ಮಹಿಳೆಯರಿಗೂ ಇದನ್ನು ವಿಸ್ತರಿಸಲಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದಿದ್ದರೆ ಈ ಕೇಂದ್ರಗಳಲ್ಲಿ ಬಿಟ್ಟು ಕೆಲಸಕ್ಕೆ ಹೋಗಬಹುದಾಗಿದೆ. ಇವು ಅಂಗನವಾಡಿಗಿಂತ ತುಸು ಭಿನ್ನವಾಗಿದ್ದು, ಅಂಗನವಾಡಿಯಲ್ಲಿ ಮೂರ್ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳನ್ನು ಸೇರಿಸಲಾಗುತ್ತದೆ. ಆದರೆ ಇದು ಹಾಲುಣಿಸುವ ಒಂದು ವರ್ಷ-ಎರಡು ವರ್ಷದ ಮಕ್ಕಳಿಗೆ ಸಂಬಂಧಿಸಿದ್ದು. ನರೇಗಾ ಜಾಬ್‌ ಕಾರ್ಡ್‌ ಹೊಂದಿರುವ ಮಹಿಳೆಯೇ ಇಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಮಕ್ಕಳಿಗೆ ಬೇಕಾದ ಪೌಷ್ಟಿಕ ಆಹಾರವನ್ನೂ ಒದಗಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಸರಕಾರದ ಸೂಚನೆ ಏನು?:

ಶಿಶಿಪಾಲನೆಗೆ ಯೋಗ್ಯ ಇರುವಂತಹ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಸರಕಾರಿ ಕಟ್ಟಡಗಳನ್ನು ಗುರುತಿಸಿ ಕೇಂದ್ರ ನಿರ್ಮಿಸಬೇಕು ಎಂದು ಸರಕಾರ ಸೂಚಿಸಿದ್ದು, ಮುಖ್ಯವಾಗಿ ಅಂಗನವಾಡಿ, ಶಾಲೆ ಕಟ್ಟಡ, ಸಮುದಾಯ ಕಟ್ಟಡ, ಉಪಯೋಗವಿಲ್ಲದ ಉತ್ತಮ ಸ್ಥಿತಿಯಲ್ಲಿರುವ ಸರಕಾರಿ ಕಟ್ಟಡ ಕೇಂದ್ರಗಳನ್ನು ಗುರುತಿಸಲು ಸೂಚಿಸಿದೆ. ಕನಿಷ್ಠ 300 ಚ.ಅಡಿ.ವಿಸ್ತೀರ್ಣ ಹೊಂದಿರುವ ಕಟ್ಟಡ ಗಾಳಿ, ಬೆಳಕು, ರ್‍ಯಾಂಪ್‌ ಹೊಂದಿರುವುದು ಕಡ್ಡಾಯ.

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next