ಅಹ್ಮದಾಬಾದ್: ಐವಿಎಫ್ ಮೂಲಕ ಜನಿಸಿದ ಹೆಣ್ಣುಮಗು, ಆನುವಂಶಿಕ ರಕ್ತದ ಕಾಯಿಲೆಯಿಂದ ಬಲುತ್ತಿದ್ದ 6 ವರ್ಷದ ಸೋದರನ ಜೀವ ಉಳಿಸಿದ ವಿಸ್ಮಯಕಾರಿ ಘಟನೆ ಅಹ್ಮದಾ ಬಾದ್‌ನಲ್ಲಿ ಸಂಭವಿಸಿದೆ.
ಸಹದೇವ್ ಸಿಂಗ್ ಸೋಲಂಕಿ ದಂಪತಿಗೆ 2013ರಲ್ಲಿ ಜನಿಸಿದ್ದ ಅಭಿಜಿತ್, “ಥಾಲಸ್ಸೆಮಿಯಾ’ ಎಂಬ ಆನುವಂಶಿಕ ರಕ್ತದ ಕಾಯಿಲೆ ಯಿಂದ ಬಳಲುತ್ತಿದ್ದ. ನಿಸ್ತೇಜ, ಕುಂಠಿತ ಬೆಳವಣಿಗೆ ಮುಂತಾದ ಲಕ್ಷಣ ಹೊಂದಿರುವ ಈ ಕಾಯಿಲೆ ಕ್ರಮೇಣ ಲ್ಯುಕೇಮಿಯಾಕ್ಕೆ ತಿರುಗುತ್ತದೆ. ನಿರಂತರ ರಕ್ತ ಪೂರೈಕೆಯಿಂದ ಅಭಿಜಿತ್‌ಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಆತನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಅಭಿಜಿತ್‌ನ ರಕ್ಷಣೆಗೆ ಒಂದೇ ಮಾರ್ಗ ಎಚ್‌ಎಲ್‌ಎ (ಹ್ಯೂಮನ್ ಲ್ಯುಕೊಕೈಟ್ ಆ್ಯಂಟಿಜೆನ್) ಹೊಂದಿಕೆ ಯಾದ ವ್ಯಕ್ತಿಯಿಂದ ಅಸ್ಥಿಮಜ್ಜೆ ದಾನ ಪಡೆಯು ವುದು. ಆದರೆ ಅಭಿಜಿತ್‌ಗೆ ಹೊಂದಿಕೆಯಾಗುವ . ಎಚ್‌ಎಲ್‌ಎ ದೇಶದ ಹಲವೆಡೆ ಹುಡುಕಿ ದರೂ ಸಿಗಲಿಲ್ಲ. ಆಗ ಸೋಲಂಕಿ ಅವರು ಅಹ್ಮದಾಬಾದ್‌ನ ನೋವಾ ಐವಿಎಫ್ ಫರ್ಟಿಲಿಟಿ ಕೇಂದ್ರಕ್ಕೆ ಭೇಟಿ ಕೊಟ್ಟು, ಪರಿಹಾರ ಮಾರ್ಗ ಕಂಡುಕೊಂಡರು.
ಕೊನೆಗೂ ಫಲಿಸಿತು!: “ವೀರ್ಯ ಮತ್ತು ಮೊಟ್ಟೆ ಬಳಸಿ ಭ್ರೂಣ ಸೃಷ್ಟಿಸಲಾಗುತ್ತದೆ. ಭ್ರೂಣ ಬೆಳೆದ 5 ದಿನಗಳ ಬಳಿಕ ಎಚ್‌ಎಲ್‌ಎ ಹೊಂದಾಣಿಕೆ ಪರೀಕ್ಷೆ ನಡೆಸಲಾಯಿತು. 18 ಭ್ರೂಣಗಳಲ್ಲಿ 1 ಭ್ರೂಣ ಮಾತ್ರವೇ ಅಭಿಜಿತ್‌ನ ಎಚ್‌ಎಲ್‌ಎಗೆ ಹೊಂದಿಕೆಯಾಗುತ್ತಿತ್ತು. ಆ ಭ್ರೂಣವನ್ನು ಬೆಳೆಸಲಾಯಿತು’ ಎಂದು ವಿವರಿಸುತ್ತಾರೆ, ನೋವಾ ಐವಿಎಫ್ ಫರ್ಟಿಲಿಟಿ ಕೇಂದ್ರದ ನಿರ್ದೇಶಕ ಡಾ| ಮನೀಶ್ ಬ್ಯಾಂಕರ್.
ಸೋಲಂಕಿ ಅವರಿಗೆ ಐವಿಎಫ್ ಮೂಲಕ ಮುದ್ದಾದ ಮಗಳು ಕಾವ್ಯ ಜನಿಸಿದ್ದಾಳೆ. ಈಕೆಯಲ್ಲಿನ 10/10 ಎಚ್‌ಎಲ್‌ಎ ಸೋದರನಿಗೆ ಹೊಂದಾಣಿಕೆ ಆಗಿದೆ. ಕಾವ್ಯಾಳ ಅಸ್ಥಿಮಜ್ಜೆ ದಾನದ ಮೂಲಕ ಅಭಿಜಿತ್‌ನ ಪ್ರಾಣವನ್ನು ವೈದ್ಯರು ಉಳಿಸಿದ್ದಾರೆ.
ಮಗನನ್ನು ಕರೆದುಕೊಂಡು ದೇಶದ ಹಲವು ಆಸ್ಪತ್ರೆಗಳಿಗೆ ಓಡಾಡಿದೆ. ಪ್ರಯೋಜನವಾಗಲಿಲ್ಲ. ಅನಂತರ ಹಲವು ವೈದ್ಯಕೀಯ ಸಂಶೋಧನೆ, ಪತ್ರಿಕೆಗಳನ್ನು ಓದಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಬಗ್ಗೆ ತಿಳಿದುಕೊಂಡೆ.
ಸಹದೇವ್ ಸಿಂಗ್ ಸೋಲಂಕಿ, ಅಭಿಜಿತ್‌ನ ತಂದೆ