Advertisement

ಮಗು ಅಪಹರಣ ಮಾಡಿ ಭಿಕ್ಷಾಟನೆಗೆ ಬಳಕೆ- ಮಹಿಳೆಗೆ ನಾಲ್ಕು ವರ್ಷ ಜೈಲು; ನ್ಯಾಯಾಲಯ ತೀರ್ಪು

08:19 PM Feb 03, 2024 | Team Udayavani |

ಮಂಗಳೂರು: ನಗರದ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದ ಬಳಿಯಿಂದ 7 ತಿಂಗಳ ಮಗುವನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರುಬಿಯಾ ಯಾನೇ ಫಾತಿಮಾ (44) ಮೇಲಿನ ಆರೋಪ ಸಾಬೀತಾಗಿದ್ದು, ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

Advertisement

2016ರ ಡಿಸೆಂಬರ್‌ನಲ್ಲಿ ಫಾತಿಮಾ ಮಂಗಳೂರಿಗೆ ಭಿಕ್ಷಾಟನೆಗೆಂದು ಬಂದಿದ್ದು, ಕಂಕನಾಡಿಯ ರೈಲು ನಿಲ್ದಾಣದಲ್ಲಿ ಮಗುವಿನ ತಾಯಿಯೊಂದಿಗೆ ಸಲುಗೆಯಿಂದ ಇದ್ದಳು. 2017ರ ಜ. 12ರಂದು ನಿಲ್ದಾಣದ ಪಾರ್ಕಿಂಗ್‌ ಸ್ಥಳದ ಬಳಿ ತಾಯಿ ತನ್ನ 7 ತಿಂಗಳ ಹಸುಗೂಸನ್ನು ಮಲಗಿಸಿ, ಭಿಕ್ಷಾಟನೆಗಾಗಿ ಹೋಗಿದ್ದಾಗ ಫಾತಿಮಾ ಆ ಮಗುವನ್ನು ಅಪಹರಿಸಿದ್ದಳು. ಬಳಿಕ ಮಗುವನ್ನು ಬೇರೆ ಕಡೆ ಬಿಟ್ಟು ವಾಪಸ್‌ ಬಂದು ಸಂತ್ರಸ್ತೆಯೊಂದಿಗೆ ಮಗುವನ್ನು ಹುಡುಕುವ ನಾಟಕವಾಡಿ, ಆ ಬಳಿಕ ಮಗುವಿನೊಂದಿಗೆ ಪರಾರಿಯಾಗಿ ಊರೂರು ತಿರುಗಾಡಿಕೊಂಡು ಮಗುವನ್ನು ತೋರಿಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದಳು.

2020ರ ಜ.22ರಂದು ಮೈಸೂರು ನಗರದ ಮಂಡಿ ಪೊಲೀಸ್‌ ಠಾಣಾ ಸರಹದ್ದಿನ ಮಂಡಿ ಮೊಹಲ್ಲಾ ಗ್ರಾಮದ, ಅಶೋಕ ರಸ್ತೆಯಲ್ಲಿರುವ ಮಸ್ಜಿàದ್‌-ಇ- ಅಜಮ್‌ ಮಸೀದಿಯ ಎದುರಿನಲ್ಲಿ ಮಗುವನ್ನು ಬಳಿ ಕುಳ್ಳಿರಿಸಿಕೊಂಡು ಭಿಕ್ಷಾಟನೆ ಮಾಡುವ ಜತೆಗೆ, ಮಗುವಿನಿಂದಲೂ ಭಿಕ್ಷಾಟನೆಯನ್ನು ಮಾಡಿಸಿಕೊಂಡು ಶೋಷಣೆಗೆ ಒಳಪಡಿಸುತ್ತಿದ್ದುದು, ಸಂತ್ರಸ್ತೆಯ ಗಮನಕ್ಕೆ ಬಂದಿದೆ.
ಪ್ರಕರಣವನ್ನು ಕಂಕನಾಡಿ ನಗರ ಪೊಲೀಸ್‌ ಠಾಣೆಯ ಅಂದಿನ ನಿರೀಕ್ಷಕ ರಾಮಕೃಷ್ಣ ಕೆ.ಕೆ. ಹಾಗೂ ಅಂದಿನ ಉಪನಿರೀಕ್ಷಕ ಪ್ರದೀಪ್‌ ಟಿ.ಆರ್‌.ಅವರು ಸಮಗ್ರ ತನಿಖೆ ನಡೆಸಿ ಒಟ್ಟು 20 ಸಾಕ್ಷಿದಾರರನ್ನು ತನಿಖೆ ನಡೆಸಿ ಆಕೆಯ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಡಿಎನ್‌ಎ ಪರೀಕ್ಷೆ
ಪ್ರಕರಣದ ತನಿಖೆಯ ಸಮಯ ಮಗುವಿನ ಜೈವಿಕ ತಾಯಿ ಯಾರು ಎಂದು ರುಜುವಾತು ಮಾಡುವ ಬಗ್ಗೆ ನ್ಯಾಯಾಲಯದ ಸೂಚನೆಯಂತೆ ಮಗುವಿನ ತಾಯಿಯ ಹಾಗೂ ಅಪಹರಣ ಮಾಡಿದ ಆರೋಪಿತೆಯ ರಕ್ತವನ್ನು ತೆಗೆದು ಡಿ.ಎನ್‌.ಎ ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ ದೂರುದಾರ ಮಹಿಳೆಯೇ ಮಗುವಿನ ಜೈವಿಕ ತಾಯಿ ಎಂದು ವರದಿ ಬಂದಿದೆ.

2021ರ ಅ.5ರಂದು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಆರಂಭವಾಗಿ ಅಭಿಯೋಜನೆಯ ಪರ ಒಟ್ಟು 12 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿತ್ತು.ಅಭಿಯೋಜನೆಯ ಸಾಕ್ಷಾಧಾರವನ್ನು ಪರಿಗಣಿಸಿದ ಪೀಠಾಸೀನಾಧಿಕಾರಿ ಪ್ರೀತಿ ಕೆ.ಪಿ. ಅವರು ಫೆ.1ರಂದು ಶಿಕ್ಷೆಯ ತೀರ್ಪು ಪ್ರಕಟಿಸಿದ್ದಾರೆ.

Advertisement

ರುಬಿಯಾ ಯಾನೇ ಫಾತಿಮಾ ಮೇಲೆ ಹೊರಿಸಲಾದ ಎಲ್ಲ ಶಿಕ್ಷಾರ್ಹ ಕಲಂಗೆ ಅಪರಾಧಿ ಎಂದು ಶಿಕ್ಷೆಯ ತೀರ್ಪನ್ನು ಪ್ರಕಟಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಅನುಭವಿಸಲು ತೀರ್ಪಿನಲ್ಲಿ ತಿಳಿಸಲಾಗಿದೆ.

ಅಭಿಯೋಜನೆ ಪರ ಈ ಪ್ರಕರಣವನ್ನು ಜ್ಯೋತಿ ಪ್ರಮೋದ ನಾಯಕ ಅವರು ಪ್ರತಿನಿಧಿಸಿ ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next