Advertisement

ಹನುಮಂತಾಪುರದಲ್ಲಿ ಚಿಕೂನ್‌ಗುನ್ಯಾ ಕಾಟ

11:23 AM Jan 19, 2020 | Naveen |

ಜಗಳೂರು: ತಾಲೂಕಿನ ಹನುಮಂತಾಪುರ ಗ್ರಾಮದಲ್ಲಿ 100ಕ್ಕೂ ಅಧಿಕ ಗ್ರಾಮಸ್ಥರು ಚಿಕೂನ್‌ಗೂನ್ಯಾ ಜ್ವರದಿಂದ ಬಳಲುತ್ತಿದ್ದು, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಪರೀತ ಕೈಕಾಲು ನೋವಿನಿಂದ ಹಾಸಿಗೆ ಹಿಡಿದಿದ್ದರೂ ಆರೋಗ್ಯ ಇಲಾಖೆ ಗ್ರಾಮದತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

ಹನುಮಂತಾಪುರ ಗ್ರಾಮದಲ್ಲಿ 400ಕ್ಕೂ ಹೆಚ್ಚು ಕುಟುಂಬಗಳು ಜೀವನ ಸಾಗಿಸುತ್ತಿವೆ. ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಚಿಕೂನ್‌ ಗೂನ್ಯಾದಂತಹ ಜ್ವರದಿಂದಾಗಿ ಬಹುತೇಕ ಮನೆಗಳಲ್ಲಿ ಎಲ್ಲ ಕುಟುಂಬಗಳು ಸೇರಿದಂತೆ 100ಕ್ಕೂ ಹೆಚ್ಚು ಮಹಿಳೆ ಮತ್ತು ಪುರುಷರು ವಿಪರೀತ ಜ್ವರದಿಂದ ಬಳಲುವಂತಾಗಿದೆ. ಚಿಕಿತ್ಸೆಗಾಗಿ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ತೆರಳುತ್ತಿರುವುದು ಸಾಮಾನ್ಯವಾಗಿದೆ. ಮಹಿಳೆ ಮತ್ತು ಮಕ್ಕಳು ಹಾಗೂ ವೃದ್ಧರಿಗೆ ಕೈ ಕಾಲುಗಳ ಕೀಲು ನೋವು ಜಾಸ್ತಿಯಾಗಿ ನಡೆದಾಡುವುದೇ ದುಸ್ತರವಾಗಿದೆ.

ಪ್ರತಿ ಮನೆ ಮನೆಗಳಲ್ಲಿ ಮೂರ್‍ನಾಲ್ಕು ಮಂದಿ ಜ್ವರಕ್ಕೆ ತುತ್ತಾಗಿದ್ದಾರೆ. ಕೆಲವು ಮನೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಜ್ವರಕ್ಕೆ ತುತ್ತಾಗಿ ಸಾಕಷ್ಟು ಹಣ ಖರ್ಚು ಮಾಡಿ ಚಿಕಿತ್ಸೆ ಪಡೆದರೂ ಗುಣಮುಖರಾಗದೇ ಮನೆಯಲ್ಲಿಯೇ ಹಾಸಿಗೆಯಿಂದ ಮೇಲೇಳಲಾಗದೇ ಯಮಯಾತನೆ ಅನುಭವಿಸುವಂತಾಗಿದೆ. ಕಳೆದ ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ಚಿಕೂನ್‌ ಗುನ್ಯಾ, ಡೆಂಘೀಯಂತಹ ವಿಚಿತ್ರ ಜ್ವರದಿಂದ ಮನೆ ಮನೆಗಳಲ್ಲಿ ವಿಪರೀತ ಕೈಕಾಲು ನೋವಿನಿಂದ ಮೂರರಿಂದ ನಾಲ್ಕು ಮಂದಿ ಹಾಸಿಗೆ ಹಿಡಿದಿದ್ದಾರೆ.

ಇನ್ನು ಗ್ರಾಮದ ಚರಂಡಿ ಸ್ವತ್ಛಗೊಳಿಸದೇ ಸೊಳ್ಳೆಗಳ ವಿಪರೀತ ಹಾವಳಿಯಿಂದ ವಿವಿಧ ರೋಗಗಳು ಹರಡುವಂತಾಗಿದ್ದರೂ ಗ್ರಾಪಂ ಮಾತ್ರ ಸ್ವಚ್ಛತೆ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.

ಗ್ರಾಮದ ಜನರಿಗೆ ಚಿಕೂನ್‌ ಗುನ್ಯಾ ಜ್ವರ ಕಾಣಿಸಿಕೊಂಡು
ಪ್ರತಿ ಮನೆ ಮನೆಗಳಲ್ಲಿ ನಾಲ್ಕಾರು ಮಂದಿ ಹಾಸಿಗೆ ಹಿಡಿದಿರುವ ಬಗ್ಗೆ ತಿಳಿದು ಬಂದಿದೆ. ಕೂಡಲೇ ತಾತ್ಕಾಲಿಕ ಶಿಬಿರ ಏರ್ಪಡಿಸಿ ಸ್ಥಳದಲ್ಲಿಯೇ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು.
ಡಾ| ನಾಗರಾಜ್‌, ಜಗಳೂರು
ತಾಲೂಕು ಆರೋಗ್ಯಾಧಿಕಾರಿ.

Advertisement

ಗ್ರಾಮದಲ್ಲಿ ಸ್ವಚ್ಛತೆ ಕೊರತೆಯಿಂದ ಜ್ವರ
ಉಲ್ಬಣಗೊಂಡಿದೆ. ಗ್ರಾಮದಲ್ಲಿ ಜ್ವರಕ್ಕೆ ಜನತೆ ತತ್ತರಿಸಿದ್ದರೂ ಆರೋಗ್ಯ ಇಲಾಖೆ ಇತ್ತ ಗಮನ ಹರಿಸುತ್ತಿಲ್ಲ.
ಹುಸೇನಪೀರ್‌
ಹನುಮಂತಪುರ ಗ್ರಾಮಸ್ಥ.

Advertisement

Udayavani is now on Telegram. Click here to join our channel and stay updated with the latest news.

Next