ಚಿಕ್ಕೋಡಿ: ರಾಜ ಮಹಾರಾಜರು ಬೆಳ್ಳಿ -ಬಂಗಾರದ ತಟ್ಟೆಯಲ್ಲಿ ಊಟ ಮಾಡಿರಬಹುದು. ಆದರೆ ಇಲ್ಲೊಂದು ಆಶ್ಚರ್ಯಕರ ಸಂಗತಿಯಿದೆ. ಇಲ್ಲಿನ ಕ್ಷೌರಿಕನೊಬ್ಬ ಗ್ರಾಹಕರಿಗೆ ಚಿನ್ನದ ಕತ್ತಿಯಿಂದ ಕ್ಷೌರ ಮಾಡಿ ವಿಶೇಷ ಸೇವೆ ನೀಡುತ್ತಿದ್ದಾರೆ.
ಈ ಸೇವೆಗೆ ಮನಸೋತಿರುವ ಅನೇಕರು ದೂರ ದೂರದಿಂದ ಬಂದು ಇಲ್ಲಿ ಭೇಟಿ ನೀಡುತ್ತಿದ್ದಾರೆ. ಗ್ರಾಹಕರಿಗೆ ಹೊಸ ಮಾದರಿಯ ಕೇಶ ವಿನ್ಯಾಸವನ್ನು ಮಾಡುವುದಲ್ಲದೇ ಎಸಿ ಸೆಲೂನ್‌ನಲ್ಲಿ ಟೀ-ಕಾಫಿ ಆತಿಥ್ಯ ಕೂಡ ಇಲ್ಲಿ ದೊರೆಯುತ್ತದೆ.
ಮಹಾರಾಷ್ಟ್ರದ ಜಿಲ್ಲಾ ಕೇಂದ್ರವಾದ ಸಾಂಗಲಿ ನಗರದ ಮಾಳ ಭಾಗದಲ್ಲಿರುವ ಉಸ್ತ್ರಾ ಸಲೂನ್ ಮಾಲೀಕ ರಾಮಚಂದ್ರ ಕಾಶಿದ್ ಅವರೇ ಈ ಕ್ಷೌರಿಕ. 3.50 ಲಕ್ಷ ರೂ. ಮೌಲ್ಯದ 11 ತೊಲೆ ಬಂಗಾರದಲ್ಲಿ ಮಾಡಿಸಿದ ಬಂಗಾರದ ಕತ್ತಿಯಿಂದ ಜನರ ಕ್ಷೌರ ಮಾಡುತ್ತಾರೆ.
ಇಂಥ ಸೇವೆ ನೀಡಬೇಕೆಂಬ ಆಲೋಚನೆ ಅವರಿಗೆ ಮೊಳೆತಿದ್ದು ವಿಶೇಷ ಸಂದರ್ಭವೊಂದರಲ್ಲಿ. ರಾಮಚಂದ್ರ ತನ್ನ ತಂದೆ-ತಾಯಿಯ 33ನೇ ಮದುವೆ ವಾರ್ಷಿಕೋತ್ಸವದ ನಿಮಿತ್ತ ಬಂಗಾರದ ಕತ್ತಿಯನ್ನು ಮಾಡಿಸಿ ತಂದೆಯ ಕ್ಷೌರ ಮಾಡುವ ಮೂಲಕ ಬಂಗಾರದ ಕತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದರು.
ಸಾಂಗಲಿ ಪಟ್ಟಣದ ಮಾಳ ಭಾಗದಲ್ಲಿ ಕಳೆದ 7 ವರ್ಷಗಳಿಂದ ಕ್ಷೌರಿಕ ವೃತ್ತಿ ಮಾಡುತ್ತಿರುವ ರಾಮಚಂದ್ರ, ನವ ಯುವಕರಿಗೆ ನೂತನ ಮಾದರಿಯ ಕೇಶ ವಿನ್ಯಾಸ ಮಾಡುತ್ತ ಗಮನ ಸೆಳೆದಿದ್ದಾರೆ. ಕೆಲ ತಿಂಗಳ ಹಿಂದೆ ವಾಟ್ಸ್‌ಅಪ್ ಗ್ರೂಪ್ ಒಂದರಲ್ಲಿ ಬಂಗಾರದ ಕತ್ತರಿ ಹಾಗೂ ಕತ್ತಿಯ ಚಿತ್ರ ಬಂದಿರುವುದನ್ನು ಗಮನಿಸಿ ತಾವೂ ಬಂಗಾರದ ಕತ್ತಿ ಮೂಲಕ ಕ್ಷೌರ ಮಾಡಬೇಕೆಂದು ಆಲೋಚಿಸಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಈಗ ಯಶಸ್ವಿಯಾಗಿದ್ದಾರೆ.
ಬಂಗಾರದ ಕತ್ತಿಯಿಂದ ಕ್ಷೌರದ ವಿಷಯ ಗ್ರಾಹಕರಿಗೆ ತಿಳಿಯುತ್ತಿದ್ದಂತೆ ಮಹಾರಾಷ್ಟ್ರ ವಿವಿಧೆಡೆಯಿಂದ ಜನರು ಸೆಲೂನ್‌ಗೆ ಬಂದು ಕ್ಷೌರ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಇದಕ್ಕಾಗಿ ಗ್ರಾಹಕರಿಗೆ ಅವರು 200 ರೂ. ದರ ನಿಗದಿ ಮಾಡಿದ್ದಾರೆ. ತಾವು ಬಯಸಿದಂತೆ ಕ್ಷೌರಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಬಂಗಾರದ ಕತ್ತಿ ಮಾಡಿಸಿ ಗ್ರಾಹಕರಿಗೆ ವಿಶೇಷ ಸೇವೆ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಬಂಗಾರದ ಲೇಪನದಿಂದ ಕೂಡಿದ ಬ್ಲೇಡ್ ಬಳಸುವ ಯೋಚನೆ ಹೊಂದಿರುವುದಾಗಿ ರಾಮಚಂದ್ರ ಹೇಳಿದ್ದಾರೆ.