ಬೆಳಗಾವಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಫಲಿತಾಂಶದ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಆಂತರಿಕ ಕಚ್ಚಾಟ ಆರಂಭವಾಗಿದೆ. ಫಲಿತಾಂಶ ಕಾಂಗ್ರೆಸ್ ಪರವಾಗಿ ಬಂದಿದ್ದರೂ ಆ ಪಕ್ಷದ ನಾಯಕರ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದಾರೆ.
ಈ ಅಸಮಾಧಾನದ ಕೇಂದ್ರಬಿಂದು ಮಾಜಿ ಡಿಸಿಎಂ ಹಾಗೂ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಎಂಬುದು ಗಮನಿಸಬೇಕಾದ ಸಂಗತಿ. ಚುನಾವಣೆಯ ಫಲಿತಾಂಶ ಬಂದ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಲಕ್ಷ್ಮಣ ಸವದಿ ಹಾಗೂ ಕುಡಚಿ ಕಾಂಗ್ರೆಸ್ ಶಾಸಕ ಮಹೇಂದ್ರ ವಿರುದ್ಧ ನೇರವಾಗಿ ಹರಿಹಾಯ್ದಿದ್ದಾರೆ.
ಚುನಾವಣೆ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾಗೆ ಅಥಣಿ ಕ್ಷೇತ್ರದಿಂದ ಒಳ್ಳೆಯ ಮು°ನಡೆ ಕೊಡಿಸುತ್ತೇನೆ ಎಂದು ಹೇಳಿದ್ದ ಸವದಿ ಬಳಿಕ ಸುಮ್ಮನಾಗಿದ್ದೇಕೆ? ಕೊಟ್ಟ ಮಾತನ್ನು ಯಾಕೆ ಉಳಿಸಿಕೊಳ್ಳಲಿಲ್ಲ ಎಂಬುದು ಸತೀಶ ಜಾರಕಿಹೊಳಿ ಪ್ರಶ್ನೆ.
ಕಳೆದ ಎರಡು ದಿನಗಳಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸತೀಶ ಅವರ ಮಾತಿನ ವೈಖರಿ, ಇದಕ್ಕೆ ಪ್ರತಿಯಾಗಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಆಡಿದ ಮಾತುಗಳು ಹಾಗೂ ಹಾಕಿದ ಸವಾಲು; ಅದಕ್ಕೆ ಪ್ರತಿಯಾಗಿ ಸತೀಶ ಜಾರಕಿಹೊಳಿ ಉತ್ತರ, ಅವರ ಬೆಂಬಲಿಗರ ಪ್ರತಿಕ್ರಿಯೆಗಳ ನಡುವೆಯೇ ಶಾಸಕ ತಮ್ಮಣ್ಣವರ ಅಥಣಿಯಲ್ಲಿ ಸವದಿ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದೆಲ್ಲಕ್ಕೂ ಮಿಗಿಲಾದ ಸಂಗತಿ ಎಂದರೆ ಸತೀಶ ಅವರು ಸವದಿ ವಿರುದ್ಧ ನೇರವಾಗಿ ತಿರುಗಿ ಬಿದ್ದಿರುವುದು. ಲೋಕಸಭೆ ಚುನಾವಣೆಯಲ್ಲಿ ಅಥಣಿಯಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿರುವುದೇ ಇದಕ್ಕೆ ಕಾರಣ. ಸತೀಶ ಅವರ ಈ ಕೋಪ ಈಗ ರಾಜ್ಯ ರಾಜಕಾರಣವನ್ನು ಸುತ್ತಿಕೊಂಡಿದೆ. ಸವದಿ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಬಿರುಕು ಮತ್ತಷ್ಟು ದೊಡ್ಡದಾಗುವ ಲಕ್ಷಣಗಳು ಕಾಣುತ್ತಿವೆ.
-ಕೇಶವ ಆದಿ