ಚಿಕ್ಕೋಡಿ: ಗಡಿ ಭಾಗದ ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಚೆಂದೂರ-ಸೈನಿಕ ಟಾಕಳಿ ಮಧ್ಯೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡುತ್ತಿರುವ ಸೇತುವೆ ಕಾಮಗಾರಿಯನ್ನು ಬರುವ ಮಾರ್ಚ ಅಂತ್ಯದವರಿಗೆ ಮುಕ್ತಾಯ ಮಾಡಬೇಕೆಂದು ಸಂಸದ ಪ್ರಕಾಶ ಹುಕ್ಕೇರಿ ಸಂಬಂಧಿಸಿದ ಗುತ್ತಿಗೆದಾರ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಡಿ ಭಾಗದ ಚೆಂದೂರ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದ ಅವರು ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ಕೆಆರ್‌ಡಿಸಿಎಲ್ ನಿಂದ ನಿರ್ಮಾಣವಾಗುತ್ತಿರುವ ಈ ಸೇತುವೆ ಕಾಮಗಾರಿ ಅತೀ ವಿಳಂಭವಾಗುತ್ತಿದೆ. ಇದರಿಂದ ಗಡಿ ಭಾಗದ ಜನರಿಗೆ ಅನಾನುಕೂಲವಾಗುತ್ತಿದೆ. ಶೀಘ್ರವಾಗಿ ಕಾಮಗಾರಿ ಮುಕ್ತಾಯ ಮಾಡಬೇಕೆಂದು ಗುತ್ತಿಗೆದಾರ ಜಿ.ವಿ.ನಂಧಾ ಅವರಿಗೆ ಸೂಚನೆ ನೀಡಿದರು.
ಸೇತುವೆ ಮುಂಭಾಗದಲ್ಲಿ ರಸ್ತೆ ಮಾಡಲು ರೈತರ ಜಮೀನುಗಳನ್ನು ಸ್ವಾದೀನ ಪಡಿಸಿಕೊಳ್ಳಲಾಗಿದೆ. ಕೆಲವೊಬ್ಬ ರೈತರಿಗೆ ಪರಿಹಾರ ಸಿಗದೇ ಇರುವದರಿಂದ ತಕಾರಾರು ಮಾಡಿದ್ದರು. ಆದರೆ ಈ ಹಿಂದಿನ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ಎಲ್ಲ ರೈತರಿಗೆ ಯೋಗ್ಯ ದರದಲ್ಲಿ ಪರಿಹಾರ ನೀಡುವ ಮೂಲಕ ರೈತರ ಸಮಸ್ಯೆ ಬಗೆ ಹರಿಸಿದ್ದಾರೆ. ಗುತ್ತಿಗೆದಾರರು ಯಾವುದೇ ಕುಂಟು ನೆಪ ಹೇಳದೆ ಕಾಮಗಾರಿ ಮುಕ್ತಾಯ ಮಾಡಬೇಕು ಎಂದರು.
ನದಿಯಲ್ಲಿ ಅಪಾರ ಪ್ರಮಾಣದ ನೀರು ಇರುವುದರಿಂದ ಕಾಮಗಾರಿ ವಿಳಂಭವಾಗುತ್ತಿದೆ. ಈಗಾಗಲೇ ಸೇತುವೆ ಎಲ್ಲ ಕಾಲಂಗಳನ್ನು ಹಾಕಲಾಗಿದೆ. ನೀರು ಹೆಚ್ಚಿಗೆ ಇರುವದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಮತ್ತು ಮರಳಿನ ಕೊರತೆ ಇರುವದರಿಂದ ಕಾಮಗಾರಿ ನೆನೆಗುದಿಗೆ ಕಾರಣವಾಗಿದೆಂದು ಗುತ್ತಿಗೆದಾರ ನಂದಾ ಅವರು ಸಂಸದರಿಗೆ ಸ್ಪಷ್ಟನೆ ನೀಡಿದರು. ಕೂಡಲೇ ಸಂಸದ ಪ್ರಕಾಶ ಹುಕ್ಕೇರಿ ಅವರು ಕೆಆರ್‌ಡಿಸಿಎಲ್ ಎಚಿಡಿ ಅವರಿಗೆ ದೂರವಾಣಿ ಕರೆ ಮಾಡಿ ಸೇತುವೆ ಕಾಮಗಾರಿ ವಿಳಂಭದ ಕುರಿತು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು. ಇಲ್ಲವಾದರೆ ಶೀಘ್ರ ಕಾಮಗಾರಿ ಮುಕ್ತಾಯ ಮಾಡಬೇಕೆಂದು ತರಾಟೆಗೆ ತೆಗೆದುಕೊಂಡರು.