Advertisement

ಕಾಡುಪ್ರಾಣಿಗಳ ಕುಡಿವ ನೀರಿಗಾಗಿ ಜಲಮೂಲ ಸಂರಕ್ಷಣೆ

04:00 PM Feb 21, 2020 | Naveen |

ಚಿಕ್ಕಮಗಳೂರು: ಬೇಸಿಗೆ ಕಾಲ ಆರಂಭವಾಗುತ್ತಿದ್ದು, ಕಾಡು ಪ್ರಾಣಿಗಳ ಕುಡಿಯುವ ನೀರಿಗಾಗಿ ಜಲಮೂಲ ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಚಿಕ್ಕಮಗಳೂರು ವಲಯ ಅರಣ್ಯ ಸಂರಕ್ಷಣಾಧಿ ಕಾರಿ ಎನ್‌.ಎಚ್‌. ಜಗನ್ನಾಥ ತಿಳಿಸಿದರು.

Advertisement

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್‌, ಸೆಪ್ಪಂಬರ್‌ ತಿಂಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ನೀರಿನ ಸೆಲೆಗಳು ತುಂಬಿವೆ. ಬೇಸಿಗೆ ಕಾಲದಲ್ಲಿ ಕಾಡುಪ್ರಾಣಿಗಳ ಕುಡಿಯುವ ನೀರಿನ ಸಂರಕ್ಷಣೆ ದೃಷ್ಟಿಯಿಂದ ಚುರ್ಚೆಗುಡ್ಡ, ಕಾಮೇನಹಳ್ಳಿ, ಕಳಾಸಪುರ ಅರಣ್ಯ ಪ್ರದೇಶದಲ್ಲಿ ಇಂಗುಗುಂಡಿ ಮತ್ತು ಝರಿ ತೋರೆಗಳಿಗೆ ಬದುಗಳನ್ನು ನಿರ್ಮಿಸಲಾಗುತ್ತಿದೆ. ಚೆಕ್‌ ಡ್ಯಾಂ, ಬದು, ಇಂಗುಗುಂಡಿ ನಿರ್ಮಿಸಲು ಎನ್‌.ಆರ್‌.ಇ.ಜಿ. ಮತ್ತು ಇಲಾಖೆಯ ಅನುದಾನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಬೆಂಕಿಯಿಂದ ಕಾಡನ್ನು ರಕ್ಷಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ವಿವಿಧ ಅರಣ್ಯ ವ್ಯಾಪ್ತಿಯ 371 ಕಿ.ಮೀ. ಬೆಂಕಿ ರಕ್ಷಣಾ ಪಥ ನಿರ್ಮಿಸಿದ್ದು, ಅಗತ್ಯವಿರುವ 1,200 ಕಿ.ಮೀ. ಬೆಂಕಿ ರಕ್ಷಣಾ ಪಥ ನಿರ್ಮಿಸಲು ಅಗತ್ಯವಿರುವ 54 ಲಕ್ಷ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳಾಸಪುರ, ಚುರ್ಚೆಗುಡ್ಡ, ಕಾಮೇನಹಳ್ಳಿ, ಬೈರಾಪುರ ಅರಣ್ಯ ಪ್ರದೇಶವನ್ನು ರೆಡ್‌ ಅಲರ್ಟ್‌ ಅರಣ್ಯ ಪ್ರದೇಶವೆಂದು ಘೋಷಿ ಸಿದ್ದು, ದಿನದ 24ಗಂಟೆ ಅರಣ್ಯ ಇಲಾಖೆ ಸಿಬ್ಬಂದಿ ಯನ್ನು ಪರಿವೀಕ್ಷಣೆಗೆ ನಿಯೋಜಿಸಲಾಗಿದೆ ಎಂದರು.

ಜಿಲ್ಲೆಯ ರೈತರನ್ನು ಶ್ರೀಗಂಧ ಬೆಳೆಸಲು ಉತ್ತೇಜಿಸುವ ನಿಟ್ಟಿನಲ್ಲಿ ಕೇರಳದಿಂದ ಆಮದು ಮಾಡಿಕೊಂಡಿರುವ ಉತ್ತಮ ಗುಣಮಟ್ಟದ ಶ್ರೀಗಂಧ ಬೀಜಗಳನ್ನು ಬಳಸಿ ಮೂಡಿಗೆರೆ, ಆಲ್ದೂರು, ಚಿಕ್ಕಮಗಳೂರು, ಕಡೂರು ಸಸ್ಯ ಕ್ಷೇತ್ರಗಳಲ್ಲಿ ಸುಮಾರು ಎರಡು ಲಕ್ಷ ಶ್ರೀಗಂಧದ ಗಿಡಗಳನ್ನು ಬೆಳೆಸಲಾಗಿದೆ. ಈ ವರ್ಷದ ಜೂನ್‌ ತಿಂಗಳಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ವಿತರಣೆ ಮಾಡಲಾಗುವುದು ಎಂದರು.

ಅರಣ್ಯ ಹಕ್ಕು ಕಾಯ್ದೆಯಡಿ ನೀಡಿದ್ದ ಅರಣ್ಯ ಭೂಮಿಯನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡಿದ್ದ 20.5 ಹೆಕ್ಟೇರ್‌ ಭೂಮಿಯನ್ನು ತೆರವುಗೊಳಿಸಿ ಇಲಾಖೆ ವಶಕ್ಕೆ ಪಡೆಯಲಾಗಿದೆ. ಕೆಲ ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ಆದೇಶ ಬಂದ ಬಳಿಕ ಅರಣ್ಯ ಇಲಾಖೆಗೆ ವಶಕ್ಕೆ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.
ಮುಳ್ಳಯ್ಯನಗಿರಿ ಸಂರಕ್ಷಿತ ಅರಣ್ಯ ಪ್ರದೇಶ ವೆಂದು ಘೋಷಿಸಲು ಸರ್ಕಾರ ಮುಂದಾಗಿದ್ದು, ಫಾರಂ ನಂ. 50, 53 ರ ಅಡಿ ಅರ್ಜಿ ಸಲ್ಲಿಸಿರುವ ಭೂಮಿಯನ್ನು ಹೊರತುಪಡಿಸಿ, ಸುಮಾರು 14 ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಭೂಮಾಪನ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸರ್ವೆ ಕಾರ್ಯ ನಡೆಸುತ್ತಿದ್ದಾರೆಂದು ಹೇಳಿದರು.

Advertisement

ಪ್ರಸ್ತುತ ಜಿಲ್ಲೆಯಲ್ಲಿ ಶೇ.23 ರಷ್ಟು ಅರಣ್ಯವಿದ್ದು, ಈ ಪ್ರಮಾಣವನ್ನು ಶೇ.33 ರಷ್ಟು ವೃದ್ಧಿಸುವ ನಿಟ್ಟಿನಲ್ಲಿ ಲಭ್ಯವಿರುವ ಸಿಬ್ಬಂದಿ ಮತ್ತು ಸಂಪನ್ಮೂಲ ಬಳಸಿ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದರು.

ಅರಣ್ಯ ರಕ್ಷಕರು, ಉಪ ಅರಣ್ಯಾಧಿಕಾರಿಗಳ ಕೊರತೆಯಿದ್ದು, ಸಿಬ್ಬಂದಿ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಲಭ್ಯವಿರುವ ಸಿಬ್ಬಂದಿಯನ್ನೇ ಬಳಸಿಕೊಂಡು ನೀರಿನ ಸೆಲೆ ಮತ್ತು
ಬೆಂಕಿಯಿಂದ ಅರಣ್ಯ ರಕ್ಷಣೆಗೆ ಬೆಂಕಿ ಪಥಗಳನ್ನು ನಿರ್ಮಿಸಲಾಗುತ್ತಿದೆ.
ಎನ್‌.ಎಚ್‌. ಜಗನ್ನಾಥ, ವಲಯ
ಅರಣ್ಯ ಸಂರಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next