Advertisement

ರೈತರ ಬದುಕಿಗೆ ಬಲ ತುಂಬುವುದೇ ಗುರಿ

12:53 PM Jan 15, 2020 | Team Udayavani |

ಚಿಕ್ಕಮಗಳೂರು: ರೈತರಿಗೆ ಎಲ್ಲ ರೀತಿಯ ಸಹಕಾರ ಕೊಡುವುದೇ ತಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

Advertisement

ಅಜ್ಜಂಪುರ ಸಮೀಪದ ಸುಕ್ಷೇತ್ರ ಸೊಲ್ಲಾಪುರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶ್ರೀ ಗುರುಸಿದ್ಧರಾಮ ಶಿವಯೋಗಿಗಳ 847ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಪ್ರಸ್ತುತ ತೀವ್ರ ಸಂಕಷ್ಟದಲ್ಲಿದ್ದಾರೆ. ಒಂದೆಡೆ ಅತಿವೃಷ್ಟಿಯಾಗಿದ್ದರೆ ಮತ್ತೂಂದೆಡೆ ಅನಾವೃಷ್ಟಿಯಾಗಿದೆ. ರೈತರು ಬೆಳೆಯುವ ಬೆಳೆಗೆ ವೈಜ್ಞಾನಿಕ ಬೆಲೆ ನೀಡಬೇಕಿದೆ. ಮುಂದಿನ ಬಜೆಟ್‌ನಲ್ಲಿ ಈ ಎಲ್ಲ ವಿಚಾರಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು ಎಂದರು.

ಶ್ರೀ ಸಿದ್ದರಾಮೇಶ್ವರರು ನೊಳಂಬರ ಕಾಲದಲ್ಲಿಯೇ ಕೆರೆಗಳಿಗೆ ಪುನಃಶ್ಚೇತನ
ನೀಡಿದ್ದರಲ್ಲದೆ, ಜನತೆಗೆ ಕುಡಿಯುವ ನೀರು ಒದಗಿಸಲು ಶ್ರಮಿಸಿದ್ದರು. ಬಸವೇಶ್ವರರ ಕಾಯಕವೇ ಕೈಲಾಸ ಎಂಬುದನ್ನು ತಮ್ಮ ಜೀವನದಲ್ಲಿ ತೋರಿಸಿಕೊಟ್ಟಿದ್ದಾರೆ. ಕಾಯಕದಿಂದ ಜನರನ್ನು ಸರಿದಾರಿಯಲ್ಲಿ ಕರೆದೊಯ್ಯಲು ಸಾಧ್ಯ ಎಂಬುದನ್ನು ಮನಗಂಡು ಅದರಂತೆ ನಡೆದವರು ಎಂದು ಹೇಳಿದರು.

ಶ್ರೀ ಸಿದ್ದರಾಮ ಶ್ರೀಗಳು ಆ ಕಾಲದಲ್ಲಿ ರೈತರಿಗಾಗಿ ಕೆರೆಕಟ್ಟೆಗಳನ್ನು ಕಟ್ಟುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಇಂದು ಇರುವ ಕೆರೆಕಟ್ಟೆಗಳನ್ನು ಉಳಿಸಿಕೊಳ್ಳಬೇಕಾಗಿದೆ. ಕೆರೆಕಟ್ಟೆಗಳಿಗೆ ಪುನಃಶ್ಚೇತನ ಕಲ್ಪಿಸಬೇಕಾಗಿದೆ. ಜಲಾಶಯಗಳಿಂದ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕಿದೆ. ಅಂತರ್ಜಲವನ್ನು
ಉಳಿಸಬೇಕಾಗಿದೆ. ಇದು ನಮ್ಮ ಸರ್ಕಾರಕ್ಕೆ ಇರುವ ಸವಾಲಾಗಿದೆ. ಮುಂದಿನ ಬಜೆಟ್‌ನಲ್ಲಿ ಗುರು ಸಿದ್ದರಾಮೇಶ್ವರರ ಕನಸನ್ನು ಈಡೇರಿಸಲು, ರೈತರಿಗೆ ಉತ್ತಮಜೀವನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

Advertisement

ರೈತರನ್ನು ಸ್ವಾಭಿಮಾನಿಗಳಾಗಿ ಬದುಕುವಂತೆ ಮಾಡಬೇಕಿದೆ. ಈ ಹಿಂದೆಯೂ ತಾವು ಮುಖ್ಯಮಂತ್ರಿಗಳಾಗಿದ್ದಾಗ ರೈತರಿಗಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರೂ ರೈತರಿಗಾಗಿ ಹಲವು ಉತ್ತಮ ಯೋಜನೆಗಳನ್ನು ರೂಪಿಸಿದ್ದಾರೆ. ಇತ್ತೀಚೆಗಷ್ಟೇ ಭತ್ತಕ್ಕೆ ಬೆಂಬಲ ಬೆಲೆ ಕೊಡುವ ಮೂಲಕ ಸಹಕಾರ ನೀಡಲಾಗಿದೆ.

ಮುಂದಿನ 3 ವರ್ಷಗಳಲ್ಲಿಯೂ ರೈತ ಪರವಾದ ಆಡಳಿತ ನೀಡುವುದಾಗಿ ಹೇಳಿದರು. ಈ ಜಿಲ್ಲೆಯ ಬಯಲು ಭಾಗಗಳಾದ ಕಡೂರು, ತರೀಕೆರೆ ತಾಲೂಕುಗಳು ಹಾಗೂ ಚಿಕ್ಕಮಗಳೂರು ತಾಲೂಕಿನ ಬಯಲು ಭಾಗಗಳ 180 ಕೆರೆಗಳಿಗೆ ನೀರು ತುಂಬಿಸುವ ಗೋಂದಿ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. 1,200 ಕೋಟಿ ರೂ. ಯೋಜನೆ ಇದಾಗಿದ್ದು, ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next