Advertisement

ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಆರಂಭ

03:38 PM Nov 09, 2019 | Naveen |

ಚಿಕ್ಕಮಗಳೂರು: 14 ರಿಂದ 17ರ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ನಗರದಲ್ಲಿ ಶುಕ್ರವಾರ ಆರಂಭವಾಯಿತು.

Advertisement

ಇಲ್ಲಿನ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಶುಕ್ರವಾರ ವಿಧಾನಪರಿಷತ್‌ ಉಪಸಭಾಪತಿ ಪಂದ್ಯಾವಳಿಗೆ ಚಾಲನೆ ನೀಡಿದರು.

ಪಂದ್ಯಾವಳಿಯಲ್ಲಿ ರಾಜ್ಯದ 24 ಜಿಲ್ಲೆಗಳ 890 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ವಿಧಾನಪರಿಷತ್‌ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಕುಸ್ತಿ ವಿಶಿಷ್ಟವಾದ ಕ್ರೀಡೆಯಾಗಿದೆ. ರಾಜಮಹಾರಾಜರ ಕಾಲದಲ್ಲಿ ಧರ್ಮಯುದ್ಧದ ಹೆಸರಿನಲ್ಲಿ ಕುಸ್ತಿ ನಡೆಯುತ್ತಿತ್ತು. ಕುಸ್ತಿಗೆ ವಿಶ್ವದೆಲ್ಲೆಡೆ ಬಹಳ ಮಹತ್ವ ಕೊಡಲಾಗಿದೆ. ಹಾಗಾಗಿಯೇ ಕುಸ್ತಿಯನ್ನು ಓಲಂಪಿಕ್‌ ಕ್ರೀಡಾಕೂಟದಲ್ಲಿ ಬಹಳ ವರ್ಷಗಳ ಹಿಂದೆಯೇ ಸೇರ್ಪಡೆಗೊಳಿಸಲಾಗಿದೆ ಎಂದರು.

ಈ ಪಂದ್ಯಾವಳಿಗೆ ರಾಜ್ಯದ ವಿವಿಧೆಡೆಗಳಿಂದ ಸ್ಪರ್ಧಾಳುಗಳು ಬಂದಿದ್ದಾರೆ. ತೀರ್ಪುಗಾರರು ತೀರ್ಪು ನೀಡುವ ಸಂದರ್ಭದಲ್ಲಿ ಯಾರಿಗೂ ಅನ್ಯಾಯವಾಗದಂತೆ ಬಹಳ ಎಚ್ಚರಿಕೆಯಿಂದ ತೀರ್ಪು ನೀಡಬೇಕೆಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಮಾತನಾಡಿ, ದೇಹವನ್ನು ಉತ್ತಮವಾಗಿಟ್ಟುಕೊಳ್ಳಲು ಕ್ರೀಡೆ ಅತ್ಯಗತ್ಯ. ಕುಸ್ತಿ ಬಹಳ ಉತ್ತಮ ಕ್ರೀಡೆಯಾಗಿದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

Advertisement

ರಾಜ್ಯದಲ್ಲಿ ದೈಹಿಕ ಶಿಕ್ಷಕರ ಕೊರತೆ ಬಹಳ ಹೆಚ್ಚಾಗಿದೆ. ಇದನ್ನು ಹೋಗಲಾಡಿಸುವ ಅಗತ್ಯ ಸರ್ಕಾರಕ್ಕಿದೆ. ಪ್ರತಿಯೊಬ್ಬರೂ ಪಠ್ಯದೊಂದಿಗೆ ಕ್ರೀಡೆಗೂ ಹೆಚ್ಚು ಒತ್ತು ಕೊಡಬೇಕೆಂದು ಹೇಳುತ್ತಾರೆ. ಆದರೆ ದೈಹಿಕ ಶಿಕ್ಷಕರೇ ಇಲ್ಲದಿದ್ದರೆ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಕ್ರೀಡೆಯನ್ನು ಕಲಿಸುವವರಾದರೂ ಯಾರು ಎಂದು ಪ್ರಶ್ನಿಸಿದರು.

ದೈಹಿಕ ಶಿಕ್ಷಕರನ್ನು ಅಗತ್ಯಕ್ಕೆ ತಕ್ಕಂತೆ ನೇಮಿಸಿ ಮೂಲಭೂತ ಸೌಕರ್ಯಗಳನ್ನೂ ಒದಗಿಸಬೇಕೆಂದು ಹೇಳಿದರು. ದೈಹಿಕ ಶಿಕ್ಷಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಬಡ್ತಿ ವಿಚಾರದ ಸಮಸ್ಯೆಗೆ ಈಗಾಗಲೇ ಪರಿಹಾರ ದೊರೆತಿದೆ. ಇನ್ನಿತರೆ ಶಿಕ್ಷಕರಿಗೆ ನೀಡುತ್ತಿರುವ ವೇತನವನ್ನೇ ದೈಹಿಕ ಶಿಕ್ಷಕರಿಗೂ ನೀಡಬೇಕೆಂಬ ಬೇಡಿಕೆ ಬಾಕಿ ಉಳಿದಿದೆ. ಈ ಕುರಿತ ಕಡತ ಈಗ ಹಣಕಾಸು ಇಲಾಖೆಯಲ್ಲಿದ್ದು, ಶೀಘ್ರದಲ್ಲಿಯೇ ಆ ಬೇಡಿಕೆಯನ್ನೂ ಈಡೇರಿಸುವುದಾಗಿ ತಿಳಿಸಿದರು.

ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್‌ಕುಮಾರ್‌, ಸದಸ್ಯರಾದ ಬೆಳವಾಡಿ ರವೀಂದ್ರ, ಸೋಮಶೇಖರ್‌, ತಾ.ಪಂ. ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷೆ ದಿವ್ಯಾ ನಾಗೇಶ್‌, ಸಾಮಾಜಿಕ ಸ್ಥಾಮಿ ಸಮಿತಿ ಅಧ್ಯಕ್ಷೆ ರೇಖಾ ಅನಿಲ್‌, ಸದಸ್ಯರಾದ ದಾಕ್ಷಾಯಿಣಿ, ರಮೇಶ್‌, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಡಿ.ಡಿ.ಪಿ.ಐ. ಜಯಣ್ಣ, ಡಯಟ್‌ ಉಪನಿರ್ದೇಶಕ ಶಿವಪ್ಪ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next