Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಸಿ

12:59 PM Jun 14, 2020 | Team Udayavani |

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜಿಲ್ಲೆಯಲ್ಲಿ ಸುಗಮವಾಗಿ ನಡೆಯಲು ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಸೂಚಿಸಿದರು.

Advertisement

ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2019-20ನೇ ಸಾಲಿನ ಎಸ್‌ ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾ ಹಂತದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ 10ನೇ ತರಗತಿ ಪರೀಕ್ಷೆಗೆ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ ಶಿಕ್ಷಣ, ಆರೋಗ್ಯ, ಪೊಲೀಸ್‌, ಸಾರಿಗೆ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ನೈರ್ಮಲ್ಯತೆಗೆ ಒತ್ತು ನೀಡಬೇಕು. ಕೋವಿಡ್ ಸೋಂಕು ಹರಡಲು ಶೌಚಾಲಯಗಳು ಕಾರಣವಾಗಿವೆ. ಹಾಗಾಗಿ, ಶೌಚಾಲಯಗಳು ಸ್ವತ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದರು.

ಪರೀಕ್ಷೆ ಸಿದ್ಧತೆ ಸಂದರ್ಭದಲ್ಲಿ ಮಕ್ಕಳಲ್ಲಿ ಭಯ ಹುಟ್ಟಿಸದೇ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಆಯಾ ಶಾಲಾ ಶಿಕ್ಷಕರು ಮಾಡಬೇಕು. ದೂರದ ಪ್ರದೇಶದಿಂದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಲು ಅಗತ್ಯ ವಾಹನ ಸೌಲಭ್ಯ ಕಲ್ಪಿಸಬೇಕು. ವಿದ್ಯಾರ್ಥಿಗಳು ಮುಂಜಾನೆಯೇ ಮನೆಯಿಂದ ಬರಬೇಕಾದಂತಹ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಅಧಿಕಾರಿಗಳು ಕಲ್ಪಿಸಬೇಕೆಂದು ಸೂಚಿಸಿದರು.

ಪರೀಕ್ಷಾ ಕೊಠಡಿಗಳಲ್ಲಿ ಗಾಳಿ, ಬೆಳಕು ಹಾಗೂ ಆಸನದ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಶೃಂಗೇರಿ, ಕೊಪ್ಪ, ಮೂಡಿಗೆರೆ ಹಾಗೂ ಮಲೆನಾಡು ಪ್ರದೇಶಗಳ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ಹೆಚ್ಚಿನ ಬಸ್‌ ಅಥವಾ ಜೀಪ್‌ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಸಾಗಾಟಕ್ಕೆ ವಿಶೇಷ ಗಮನ ಹರಿಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇನ್ನಿತರ ಲೋಪದೋಷಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.

Advertisement

ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿಸಿ ಟಿ.ವಿ. ಅಳವಡಿಸಿ ಪರಿಶೀಲನೆ ನಡೆಸಬೇಕು. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ಯಾವುದೇ ವಿದ್ಯಾರ್ಥಿ ವಂಚಿತವಾಗದಂತೆ ನೋಡಿಕೊಳ್ಳಬೇಕು. ಶಿಕ್ಷಣ, ಆರೋಗ್ಯ, ಪೊಲೀಸ್‌, ಸಾರಿಗೆ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುವಂತೆ ತಿಳಿಸಿದರು.

ಡಿಡಿಪಿಐ ಸಿ.ನಂಜಯ್ಯ ಮಾತನಾಡಿ, ಜಿಲ್ಲೆಯ ಒಟ್ಟು 58 ಪರೀಕ್ಷಾ ಕೇಂದ್ರಗಳಲ್ಲಿ 13,924 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪ್ರತಿ ವಿದ್ಯಾರ್ಥಿಗೆ ವಿವಿಧ ಸಂಘ-ಸಂಸ್ಥೆಗಳಿಂದ 2ಮಾಸ್ಕ್ ವಿತರಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ 2 ಹಂತದಲ್ಲಿ ಮಾರ್ಗದರ್ಶನ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ಸಾಗಾಣಿಕೆ ಮಾರ್ಗಕ್ಕೆ ಪೊಲೀಸ್‌ ಭದ್ರತೆ ಕೋರಿ ಪತ್ರ ಬರೆಯಲಾಗಿದೆ. ಜೊತೆಗೆ ಪರೀಕ್ಷಾ ದಿನಾಂಕಗಳಂದು ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್‌ ಜಾರಿ ಮತ್ತು ಜೆರಾಕ್ಸ್‌ ಅಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ನೀಡಿದ್ದಾರೆ ಎಂದರು.

ಪ್ರತಿ ತಾಲೂಕಿಗೆ 2ರಂತೆ ಜಿಲ್ಲಾ ಕೇಂದ್ರದಲ್ಲಿ ಹೆಚ್ಚುವರಿಯಾಗಿ 1 ಪರೀಕ್ಷಾ ಕೇಂದ್ರ ಕಾಯ್ದಿರಿಸಲಾಗಿದೆ. ತಾಲೂಕಿಗೆ ಒಬ್ಬರಂತೆ ಎಲ್ಲಾ ತಾಲೂಕಿನಲ್ಲೂ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮಾಹಿತಿ ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಎಸ್‌.ಪೂವಿತಾ, ಎಸ್ಪಿ ಹರೀಶ್‌ ಪಾಂಡೆ, ಆರೋಗ್ಯಾಧಿಕಾರಿ ಡಾ| ಉಮೇಶ್‌ ಹಾಗೂ ವಿವಿಧ ತಾಲೂಕುಗಳ ಬಿಇಒಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ತಮ್ಮ ಊರುಗಳಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳಲು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲೂ ಸಾರಿಗೆ ವ್ಯವಸ್ಥೆಯನ್ನು ಅಧಿಕಾರಿಗಳು ಕಲ್ಪಿಸಬೇಕು. ಜಿಲ್ಲಾಡಳಿತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಲಭ್ಯವಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಇರಿಸಲು ಕೇಳಿ ಪಡೆದುಕೊಳ್ಳಬೇಕು.
ಡಾ| ಬಗಾದಿ ಗೌತಮ್‌,
ಜಿಲ್ಲಾಧಿಕಾರಿ

ಕೋವಿಡ್‌-19 ಸೋಂಕು ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಥರ್ಮಲ್‌ ಸ್ಕ್ಯಾನರ್‌ ಮೂಲಕ ತಪಾಸಣೆ ನಡೆಸಬೇಕು. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್‌ ಬಳಸುವಂತೆ ತಿಳಿಸಬೇಕು. ಕುಡಿಯುಲು ಬಿಸಿ ನೀರು ವ್ಯವಸ್ಥೆ ಕಲ್ಪಿಸಬೇಕು. ಯಾವುದೇ ವಿದ್ಯಾರ್ಥಿಯಲ್ಲಿ ಜ್ವರದ ಲಕ್ಷಣ ಕಂಡು ಬಂದಲ್ಲಿ ಆತನಿಗೆ ಧೈರ್ಯ ತುಂಬುವ ಮೂಲಕ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು.
ಸಿ.ಟಿ.ರವಿ,
ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next