Advertisement

ಬಾನಂಗಳದ ಆಟ ಕಣ್ತುಂಬಿಕೊಂಡ ಜನ

12:34 PM Dec 27, 2019 | Naveen |

ಚಿಕ್ಕಮಗಳೂರು: ನಗರದ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ಅಪರೂಪದ ಕಂಕಣ ಸೂರ್ಯಗ್ರಹಣ ಸಂಭವಿಸಿದ ಸಂದರ್ಭದಲ್ಲಿ, ಬೆಳಗ್ಗೆ 9.38ಕ್ಕೆ ತನ್ನ ಹೊಳಪನ್ನು ಮರೆಮಾಚುವಂತೆ ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಾಗ ಗ್ರಹಾಧಿಪತಿ ಸೂರ್ಯ ತನ್ನ ಅಂಚುಗಳನ್ನು ಸ್ವರ್ಣಮಯವಾಗಿಸಿಕೊಂಡ.

Advertisement

ಸೌರ ಮಂಡಲದ ಈ ವಿದ್ಯಮಾನ ಹಾಗೂ ಖಗೋಳ ವಿಸ್ಮಯವನ್ನು ಜನ ಅನುಭವಿಸಿ ಖುಷಿಪಟ್ಟರು. ಸೂರ್ಯಗ್ರಹಣದ ಅಂಗವಾಗಿ ಸಂಪ್ರದಾಯವನ್ನು ಅನುಸರಿಸುವವರು ಗ್ರಹಣ ಹಿಡಿದ ಕಾಲ ಹಾಗೂ ಬಿಟ್ಟ ಕಾಲದಲ್ಲಿ ಸ್ನಾನ ಮಾಡಿ ಗ್ರಹಣ ಪೂರ್ವ ಹಾಗೂ ನಂತರದ ಆಚರಣೆಗಳನ್ನು ಮನೆಗಳಲ್ಲಿ ನಡೆಸಿದರು.

ಅನೇಕ ಜನ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೊರಬಂದು ಸೂರ್ಯನನ್ನು ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಾಗ ಹೇಗೆ ಮರೆಮಾಚುತ್ತದೆ ಎಂಬ ದೃಶ್ಯವನ್ನು ನೋಡಿ ನಭೋ ಮಂಡಲದಲ್ಲಿ ನಡೆದ ವಿದ್ಯಮಾನಕ್ಕೆ ಸಾಕ್ಷಿಭೂತರಾದರು. ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರ ಗ್ರಹಣ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆ ಮಾಡಿತ್ತು. ಸಂಘದ ಗೌರವಾಧ್ಯಕ್ಷ ಎ.ಎನ್‌.ಮಹೇಶ್‌, ಅಧ್ಯಕ್ಷ ಎಚ್‌.ಎಂ.ನೀಲಕಂಠಪ್ಪ, ಕಾರ್ಯದರ್ಶಿ ಟಿ.ತ್ಯಾಗರಾಜ್‌, ಸಹ ಕಾರ್ಯದರ್ಶಿಗಳಾದ ಟಿಜಿಕೆ ಅರಸ್‌, ಕೆ.ಜಿ.ನೀಲಕಂಠಪ್ಪ ಬೆಳಗ್ಗೆ 7.45ಕ್ಕೆ ಆಜಾದ್‌ ವೃತ್ತಕ್ಕೆ ಆಗಮಿಸಿ ಗ್ರಹಣದ ವಿಶೇಷತೆಯನ್ನು, ಆ ಬಗ್ಗೆ ಇರುವ ಭಯದ ವಾತಾವರಣವನ್ನು ದೂರ ಮಾಡುವ ಬಗ್ಗೆ ವಿವರಗಳನ್ನು ನೀಡತೊಡಗಿದರು.

ವಿಜ್ಞಾನ ಕೇಂದ್ರದ ವತಿಯಿಂದ ಸೂರ್ಯ ಗ್ರಹಣ ವೀಕ್ಷಣೆಗೆ ಕಣ್ಣಿಗೆ ಯಾವುದೇ ರೀತಿ ಹಾನಿಯಾಗದಂತೆ ವೀಕ್ಷಿಸಲು ಸೌರ ಸೋಸುಕಗಳನ್ನು ಆಸಕ್ತ ಜನತೆಗೆ ನೀಡಿ ಗ್ರಹಣ ವೀಕ್ಷಿಸಲು ಪ್ರೇರೇಪಿಸಲಾಯಿತು. ಬೆಳಗ್ಗೆ 8.04 ಗಂಟೆಗೆ ಚಂದ್ರನ ನೆರಳು ಭೂಮಿಯನ್ನು ತಾಕಿದಾಕ್ಷಣ ಸೂರ್ಯನ ಮೇಲ್ಭಾಗದಿಂದ ಗ್ರಹಣ ಆವರಿಸಲಾರಂಭಿಸಿತು. 9 ಗಂಟೆಯ ವೇಳೆಗೆ ಅರ್ಧ ಸೂರ್ಯಾಕೃತಿ ಕಂಡುಬಂತು. ಪ್ರಖರವಾಗಿದ್ದ ಸೂರ್ಯ ಕಿರಣಗಳು ಕ್ಷೀಣವಾಗುತ್ತಾ ಏರಿದ ಬಿಸಿಲು ಮಾಯವಾಯಿತು.

ಮೊದಲ ಬಾರಿಗೆ ಈ ಆಕಾಶದ ವಿದ್ಯಮಾನವನ್ನು ವೀಕ್ಷಿಸಿದ ಪುಟಾಣಿಗಳಾದ ಪೂರ್ವಿ, ಪ್ರಚುರ, ಲೋಕೇಶ್‌ರಾಜು, ಮಹೇಶ್‌, ಪ್ರಶಿಕ್ಷ, ಸೌರ ಸೋಸುಕಗಳನ್ನು ತಮ್ಮ ಮೂಗಿನ ಮೇಲಿಟ್ಟು ಚಂದ್ರನಿಂದ ಮುಚ್ಚಿ ಹೋಗುತ್ತಿರುವ ಸೂರ್ಯನನ್ನು ನೋಡುತ್ತಾ ಅಚ್ಚರಿಯಿಂದ ಸೌರ ಸಂಭ್ರಮವನ್ನು ವೀಕ್ಷಿಸಿದರು.
ಗ್ರಹಣ ವೀಕ್ಷಿಸುವ ತವಕವಿದ್ದರೂ ಏನಾದರೂ ಕೆಟ್ಟದಾದರೆ? ಈ ಸಂಶಯ ಹೊತ್ತ ಕೆಲವರು ಗುಂಪಿನಲ್ಲಿದ್ದು, ನೋಡುತ್ತಿದ್ದವರ ಉತ್ಸಾಹ ಹಾಗೂ ಕುತೂಹಲದಿಂದ ಪ್ರೇರಿತರಾಗಿ ಸೋಸುಕಗಳನ್ನು ಪಡೆದು ಸೂರ್ಯ ಗ್ರಹಣದ ಸವಿಗೆ ಒಳಗಾದರು.

Advertisement

ಹೆಸರು ಹೇಳಲಿಚ್ಛಿಸದ ಮಹಿಳೆಯೋರ್ವರಿಗೆ ಗ್ರಹಣ ನೋಡುವ ಆಸೆ. ಆದರೆ, ನೋಡಿದರೆ ಏನಾಗುತ್ತದೋ ಎಂಬ ಭಯ. ನೋಡಿದರೆ ಏನೂ ಆಗಲ್ವಾ ಎನ್ನುತ್ತಲೇ ಸೋಸುಕವನ್ನು ಕಣ್ಣಿಗೆ ಅಡ್ಡ ಹಿಡಿದು ಗ್ರಹಣ ವೀಕ್ಷಿಸಿ ತೃಪ್ತಿಯ ನಗೆ ಹೊರಹಾಕಿದರು.

ಸೋಸುಕಗಳ ಕೊರತೆ: ವಿಜ್ಞಾನ ಕೇಂದ್ರ ಗ್ರಹಣದ ಬಗ್ಗೆ ಇರುವ ಭಯದಿಂದ ಹೆಚ್ಚು ಜನ ಗ್ರಹಣ ವೀಕ್ಷಿಸಲು ಬರುವುದಿಲ್ಲವೆಂದು ಭಾವಿಸಿತ್ತು. ಹಾಗಾಗಿ, ಹೆಚ್ಚು ಸೌರ ಸೋಸುಕಗಳನ್ನು ತರಿಸಿರಲಿಲ್ಲ.
ಆದರೆ, ಗ್ರಹಣ ಆರಂಭದ ನಂತರ ವೀಕ್ಷಕರ ಸಂಖ್ಯೆ ಹೆಚ್ಚಾಯಿತು. ಹಾಗಾಗಿ, ಇರುವಷ್ಟು ಸೋಸುಕಗಳಲ್ಲೆ ಅವರಿಂದ ಇವರು ಅದನ್ನು ಪಡೆದುಕೊಂಡು ಗ್ರಹಣ ಪ್ರಕ್ರಿಯೆಯನ್ನು ನೋಡಿ ಆನಂದಿಸಬೇಕಾಯಿತು.

ಕೆಲವರು ಹೆಚ್ಚು ಸೋಸುಕಗಳನ್ನು ತರಿಸಿದ್ದರೆ ಖರೀದಿಸಿ ನಾವೂ ನೋಡಿ ಮನೆಯವರಿಗೂ ತೋರಿಸ ಬಹುದಾಗಿತ್ತು ಎಂದು ಹೇಳುತ್ತಿದ್ದುದು ಕೇಳಿಬಂತು.

ಮಕ್ಕಳ ಅನಿಸಿಕೆ: ಗ್ರಹಣ ವೀಕ್ಷಿಸಿದ ಕೆಲವು ವಿದ್ಯಾರ್ಥಿಗಳು ಪತ್ರಿಕೆಯೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ನಾನು ಮೊದಲ ಬಾರಿಗೆ ಸೂರ್ಯ ಗ್ರಹಣ ನೋಡಿದೆ. ತುಂಬಾ ಸಂತೋಷವಾಯಿತು. ನನಗೇನು ಹೆದರಿಕೆ ಆಗಲಿಲ್ಲ ಎಂದು ಪೂರ್ವಿ ಹೇಳಿದರು.

ಗ್ರಹಣ ನೋಡಲು ನನಗೆ ಭಯವಿಲ್ಲ. ಮನೆಯಲ್ಲೂ ಯಾರೂ ಹೋಗಬೇಡ ಎಂದು ಹೇಳಲಿಲ್ಲ, ಆದರೆ ಬರಿಗಣ್ಣಿನಲ್ಲಿ ನೋಡಬೇಡ ಎಂದಿದ್ದಾರೆ. ನೋಡಿ ಖುಷಿಯಾಯಿತು ಎಂದು ಸಮಿತ್‌ ಶಾಲೆ ಪ್ರಚುರ ತಿಳಿಸಿದರು.

ಗ್ರಹಣ ನೋಡಿದರೆ ಏನೂ ಆಗಲ್ಲ. ಈಗ ನೋಡಿದೆ. ಖುಷಿಯಾಯಿತು. ಮತ್ತೆ-ಮತ್ತೆ ನೋಡಬೇಕು ಅನ್ಸುತ್ತೆ. ಮನೆಯಲ್ಲೂ ಹೋಗಿ ನೋಡು ಅಂತ ಮಹೇಶ್‌ ಹೊಸಮನೆ ಹೇಳಿದರು. ನಾನು ಗ್ರಹಣ ನೋಡುತ್ತಿರುವುದು ಇದೇ ಫಸ್ಟ್‌. ಸೂರ್ಯಗ್ರಹಣ ನೋಡಿ ಸಂತೋಷವಾಯಿತು. ತುಂಬಾ ಚೆನ್ನಾಗಿದೆ. ಇನ್ನು ನೋಡ್ತಾ ಇರೋಣ ಅನ್ಸುತ್ತೆ ಎಂದು ಸಂತ ಜೋಸೆಫರ ಕಾನ್ವೆಂಟ್‌ನ ಪ್ರೇಶಿಕ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next