Advertisement

ಬೀಜದುಂಡೆ ತಯಾರಿಕಾ ಕಾರ್ಯಕ್ರಮ ಯಶಸ್ವಿ

03:46 PM Jul 13, 2019 | Naveen |

ಚಿಕ್ಕಮಗಳೂರು: ನಗರದಲ್ಲಿ ಶುಕ್ರವಾರ ನಡೆದ ಬೀಜದುಂಡೆ ತಯಾರಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Advertisement

ನಗರದ ಹಲವು ಶಾಲೆಗಳ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಂದೇ ದಿನ ಸಾವಿರಾರು ಬೀಜದುಂಡೆಗಳನ್ನು ಸಿದ್ಧಪಡಿಸಿದರು.

ಸ್ವಚ್ಛ ಚಾರಿಟಬಲ್ ಟ್ರಸ್ಟ್‌, ಅರಣ್ಯ ಇಲಾಖೆ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಪ್ರಸ್ತುತ ಸಾಲಿನಲ್ಲಿ 5 ಲಕ್ಷ ಬೀಜದುಂಡೆಗಳನ್ನು ಸಿದ್ಧಪಡಿಸಿ, ಚುರ್ಚೆಗುಡ್ಡ, ಬೀಕನಹಳ್ಳಿ ಸೇರಿದಂತೆ ಹಲವೆಡೆಗಳಲ್ಲಿ ಬೀಜದುಂಡೆಗಳನ್ನು ಹಾಕುವ ಯೋಜನೆ ಇದಾಗಿದೆ. ಹಾಗಾಗಿ, ನಗರದ ಜಿಲ್ಲಾ ಆಟದ ಮೈದಾನದಲ್ಲಿ ಬೀಜದುಂಡೆ ಸಿದ್ಧಪಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅರಣ್ಯ ಇಲಾಖೆಯಿಂದ ಟೀಕ್‌, ಹಲಸು, ನೇರಳೆ, ಬಿದಿರು, ಶ್ರೀಗಂಧ, ಹೊಂಗೆ, ಹುಣಸೆ ಸೇರಿದಂತೆ ವಿವಿಧ ಜಾತಿಯ ಸಹಸ್ರಾರು ಬೀಜಗಳನ್ನು ಪೂರೈಕೆ ಮಾಡಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಕೆ.ಕುಮಾರ್‌, ಕಲ್ಚರ್‌ ಮತ್ತು ನೇಚರ್‌ ಇದ್ದರೆ ಮಾತ್ರ ಮುಂದಿನ ಫ್ಯೂಚರ್‌ ಎಂದು ಹೇಳಿದರು.

Advertisement

ಶಿಸ್ತಿಗೆ ಇನ್ನೊಂದು ಹೆಸರೇ ಸ್ಕೌಟ್ಸ್‌ ಆ್ಯಂಡ್‌ ಮತ್ತು ಗೈಡ್ಸ್‌. ನಿಮ್ಮ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೀಜದುಂಡೆ ತಯಾರಿಸುತ್ತಿರುವುದು ಶ್ಲಾಘನೀಯ. ಬೆಳೆಯುವ ಪೈರು ಮೊಳಕೆಯಲ್ಲೇ ನೋಡು ಎನ್ನುವಂತೆ ವಿದ್ಯಾರ್ಥಿ ದಿಸೆಯಲ್ಲೇ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳುತ್ತಿರುವುದು ಸ್ತುತ್ಯಾರ್ಹ ಎಂದರು.

ಯಾಂತ್ರಿಕ ಯುಗದಲ್ಲಿ ನಮ್ಮ ಮೂಲ ಕಲ್ಪನೆ ಬದಿಗೊತ್ತಿದ್ದೇವೆ. ಪರಿಸರ ಉಳಿಸಿ ಬೆಳೆಸುವಲ್ಲಿ ಸೋಲುತ್ತಿದ್ದೇವೆ. ಪರಿಸರ, ನಮ್ಮ ಸಂಸ್ಕೃತಿ ಉಳಿಸಿಕೊಂಡರೆ ಮಾತ್ರ ನಮಗೆ ಭವಿಷ್ಯವಿದೆ ಎಂದು ಹೇಳಿದರು.

ಡಿಸಿಎಫ್‌ ಕುಮಾರ್‌ ಮಾತನಾಡಿ, ಊಟ, ನೀರು ಇಲ್ಲದಿದ್ದರೂ ಕೆಲ ದಿನ ಬದುಕಬಹುದು. ಆದರೆ, ಗಾಳಿ, ನೀರು ಇಲ್ಲದಿದ್ದರೆ ಬದುಕಲು ಅಸಾಧ್ಯ. ಜನಸಂಖ್ಯಾ ಸ್ಫೋಟ, ಕೈಗಾರಿಕೀಕರಣ ಮತ್ತಿತರೆ ಕಾರಣದಿಂದ ಭೂಮಿ ತಾಪಮಾನ ಏರುತ್ತಿದೆ.

ಇದನ್ನು ಕಡಿಮೆ ಮಾಡಲು ಹಸಿರು ಹೊದಿಕೆ ಹೆಚ್ಚಾಗಿಸಬೇಕು. ಮಳೆ ಆಕರ್ಷಣೆ, ಮಳೆ ನೀರನ್ನು ಹಿಡಿದಿಟ್ಟು ಇಂಗಿಸುವ ಕೆಲಸ ಆಗಬೇಕು. ಮನೆ ಕೈತೋಟ, ಗುಡ್ಡ ಬೆಟ್ಟ ಗೋಮಾಳ ಮತ್ತಿತರೆ ಖಾಲಿ ಜಾಗದಲ್ಲಿ ತಯಾರಿಸಿರುವ ಬೀಜದುಂಡೆ ಹಾಕಬೇಕೆಂದು ಹೇಳಿದರು.

ಸ್ವಚ್ಛ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷೆ ಡಾ.ಶುಭಾ ವಿಜಯ್‌, ಎಂ.ಎಲ್.ಮೂರ್ತಿ, ಡಿ.ಎಚ್.ನಟರಾಜ್‌, ಲಕ್ಷ್ಮಮ್ಮ, ಡಿಯುಡಿಸಿ ಯೋಜನಾಧಿಕಾರಿ ಚಂದ್ರಶೇಖರ್‌, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಜಿಲ್ಲಾ ಆಯುಕ್ತ ಎ.ಎನ್‌.ಮಹೇಶ್‌ ಮತ್ತಿತರರು ಹಾಜರಿದ್ದರು. ರಾಜ್ಯ ಪ್ರಶಸ್ತಿ ಪಡೆದ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next