Advertisement

ಕಾಫಿ ನಾಡಿಗೆ ಬೇಕಿದೆ ಶಾಶ್ವತ ನೀರಾವರಿ ಯೋಜನೆ

07:57 PM Feb 27, 2020 | Naveen |

ಚಿಕ್ಕಮಗಳೂರು: ಜಿಲ್ಲೆ ಭೌಗೋಳಿಕವಾಗಿ ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶವನ್ನು ಹೊಂದಿದ್ದು, ನೀರಿನ ಬವಣೆ ಮಾತ್ರ ತಪ್ಪಿಲ್ಲ. ಪಶ್ಚಿಮಘಟ್ಟ ಪ್ರದೇಶದಲ್ಲಿ ಪಂಚ ನದಿಗಳು ಜನ್ಮ ತಳೆದರೂ ಜಿಲ್ಲೆಯ ರೈತರಿಗೆ ಅಗತ್ಯ ಪ್ರಮಾಣದ ನೀರು ಲಭ್ಯವಿಲ್ಲದಿರುವುದರಿಂದ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ರೂಪಿಸಬೇಕೆಂಬುದು ರೈತರ ಬಹುದಿನಗಳ ಬೇಡಿಕೆಯಾಗಿದೆ.

Advertisement

ಚಿಕ್ಕಮಗಳೂರು ತಾಲೂಕು ಸೇರಿದಂತೆ ಕಡೂರು, ತರೀಕೆರೆ, ಬೀರೂರು ಭಾಗದಲ್ಲಿ ಸಮರ್ಪಕ ನೀರಾವರಿ ಸೌಲಭ್ಯವಿಲ್ಲದೇ ರೈತರು ಸಂಕಷ್ಟ ಎದುರಿಸುತ್ತಿದ್ದು, ನಂಜುಡಪ್ಪ ವರದಿ ಪ್ರಕಾರ ಕಡೂರು ಬರ ಪೀಡಿತ ತಾಲೂಕು ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡಿದೆ.

ಗೊಂದಿಹಳ್ಳ ಯೋಜನೆ: ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರು ಒದಗಿಸುವ ಉದ್ದೇಶದಿಂದ ಗೊಂದಿಹಳ್ಳ ಯೋಜನೆ ರೂಪಿಸಲಾಗಿದ್ದು, ಭದ್ರಾ ಜಲಾಶಯದ ಉಪ ಕಣಿವೆ ಕಾಲುವೆ ಗೊಂದಿ ಅಣೆಕಟ್ಟೆಯಿಂದ ದೇವನಕೆರೆ ಯಲ್ಲಿ ನೀರು ಸಂಗ್ರಹಿಸಿ ನಂತರ ಮದಗದ ಕೆರೆ ಹಾಗೂ ಅಯ್ಯನ ಕೆರೆಗಳಿಗೆ ನೀರು ಹರಿಸಿ ತರೀಕೆರೆ, ಅಜ್ಜಂಪುರ ಕಡೂರು, ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಮತ್ತು ಲಖ್ಯಾ ಹೋಬಳಿ, ಅರಸೀಕೆರೆಯ ಒಂದು ಕೆರೆ ಸೇರಿದಂತೆ ಸುಮಾರು 180 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಈ ಯೋಜನೆಗೆ 1,350 ಕೋಟಿ ರೂ. ಅಂದಾಜು ವೆಚ್ಚವಾಗಲಿದ್ದು, ಈಗಾಗಲೇ ನೀಲನಕ್ಷೆ ತಯಾರಿಸಿ ತಾಂತ್ರಿಕ ಅನುಮೋದನೆ ಪಡೆದುಕೊಂಡಿದೆ.

ಬಯಲುಸೀಮೆ ಭಾಗದ 180 ಕೆರೆಗಳನ್ನು ತುಂಬಿಸುವುದರಿಂದ ಅಂತರ್‌ ಜಲಮಟ್ಟ ಏರಿಕೆಯಾಗುವುದಲ್ಲದೇ ರೈತರಿಗೂ ಅನುಕೂಲವಾಗಲಿದೆ. ಆದ್ದರಿಂದ ಈ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕೆನ್ನುವುದು ರೈತರ ಆಗ್ರಹವಾಗಿದೆ.

ಜಲಧಾರೆ ಯೋಜನೆ: ಬೆಸಿಗೆ ಕಾಲ ಆರಂಭವಾಗುತ್ತಿದ್ದಂತೆ ಬಯಲುಸೀಮೆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತದೆ. ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕಿನ ಲಖ್ಯಾ ಹೋಬಳಿಯಲ್ಲಿ ಟ್ಯಾಂಕರ್‌ ಮೂಲಕ ಕುಡಿವ ನೀರು ಪೂರೈಕೆ ಮಾಡಲಾಗುತ್ತದೆ. ಸಮರ್ಪಕ ಕುಡಿಯುವ ನೀರು ಯೋಜನೆ ರೂಪಿಸಬೇಕೆಂಬುದು ಈ ಭಾಗದ ಜನರ ಡಿಕೆಯಾಗಿದೆ. ತರೀಕೆರೆ, ಕಡೂರು ಮತ್ತು ಚಿಕ್ಕಮಗಳೂರು ತಾಲೂಕಿನ ಲಖ್ಯಾ ಹೋಬಳಿಗೆ ಭದ್ರಾ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರಿನ ಜಲಧಾರೆ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಿಂದ ಸುಮಾರು 780 ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಸಾಧ್ಯವಾಗಲಿದ್ದು, 630 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ. ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂಬುದು ಜನರ ಒತ್ತಾಯವಾಗಿದೆ.

Advertisement

ಕರಗಡ ನೀರಾವರಿ ಯೋಜನೆ: ಕರಗಡ ದೇವಿಕೆರೆಯಿಂದ ಬೆಳವಾಡಿ ದೊಡ್ಡ ಕೆರೆಗೆ ನೀರು ಹರಿಸಿ ಸುತ್ತಮುತ್ತಲ 11 ಗ್ರಾಮ ಪಂಚಾಯತ್‌ನ 60 ಕೆರೆಗಳಿಗೆ ನೀರು ಹರಿಸುವ ನಾಲ್ಕೂವರೆ ಕಿ.ಮೀ. ಉದ್ದದ ಕರಗಡ ಯೋಜನೆ ದಶಕ ಕಳೆದರೂ ಪೂರ್ಣಗೊಳ್ಳದಿರುವುದು ಈ ಭಾಗದ ಜನರಲ್ಲಿ ಬೇಸರ ಮೂಡಿಸಿದೆ.

ಸಿ.ಟಿ.ರವಿ ಸಚಿವರಾದ ನಂತರ ದೇವಿಕೆರೆಗೆ ಪಂಪ್‌ ಅಳವಡಿಸಿ ನೀರು ಹರಿಸಲು ಪ್ರಯತ್ನಿಸಿದರು ಕೂಡ ಭಾಗಶಃ ಯಶಸ್ಸು ಕಂಡಿದೆಯೇ ಹೊರತು ಪೂರ್ಣಗೊಂಡಿಲ್ಲ. ನಾಲೆಯಲ್ಲಿ ಹೂಳು ತುಂಬಿಕೊಂಡಿದ್ದು, ಕಾಂಕ್ರೀಟ್‌ ಲೈನಿಂಗ್‌ ಕೆಲಸ ಬಾಕಿ ಇದೆ. ಈ ಬಾರಿಯ ಬಜೆಟ್‌ನಲ್ಲಿ ಕರಗಡ ಯೋಜನೆಗೆ ಹಣ ಮೀಸಲಿಟ್ಟು ಯೋಜನೆಯನ್ನು ಪೂರ್ಣಗೊಳಿಸಬೇಕೆನ್ನುವುದು ರೈತರ ಒತ್ತಾಯವಾಗಿದೆ.

ಲೀಸ್‌ಗೆ ಭೂಮಿ: ಜಿಲ್ಲೆಯಲ್ಲಿ ಕಾಫಿ ಉದ್ಯಮ ಬಹುದೊಡ್ಡ ಉದ್ಯಮವಾಗಿದ್ದು, ದೊಡ್ಡ ಮತ್ತು ಸಣ್ಣ ಕಾಫಿ ಬೆಳೆಗಾರರನ್ನು ಒಳಗೊಂಡಿದೆ. ಬಹುತೇಕ ಕಾಫಿ  ಬೆಳೆಗಾರರು ಭೂಮಿ ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿ ಭೂಮಿ ತೆರವು ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಐದು ಎಕರೆಗಿಂತ ಹೆಚ್ಚು ಭೂಮಿ 20 ವರ್ಷಕ್ಕೂ ಹೆಚ್ಚು ಕಾಲ ಒತ್ತುವರಿ ಮಾಡಿಕೊಂಡವರಿಗೆ ಲೀಸ್‌ ಆಧಾರದ ಮೇಲೆ ಭೂಮಿ ನೀಡಬೇಕೆನ್ನುವ ಬೇಡಿಕೆ ಇದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿಯೂ ಈ ಬಗ್ಗೆ ಚಿಂತನೆ ನಡೆಸಿದ್ದರು ಸಹ
ಕಾರ್ಯರೂಪಕ್ಕೆ ಬಂದಿಲ್ಲ. ಈ ಸಾಲಿನ ಬಜೆಟ್‌ ನಲ್ಲಾದರೂ ಕಾರ್ಯರೂಪಕ್ಕೆ ಬರಬಹುದೇ ಎಂಬ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.

ಗೊಂದಿ ಯೋಜನೆಗೆ ಬಜೆಟ್‌ನಲ್ಲಿ ಹಣ ಮೀಸಲಿರಬೇಕು. ಪ್ರತ್ಯೇಕ ಹಾಲು ಒಕ್ಕೂಟ, ಕಾಫಿ ಬೆಳೆಗಾರರ ಐದು ಎಕರೆ ಮೇಲ್ಪಟ್ಟ ಒತ್ತುವರಿದಾರರಿಗೆ ಲೀಸ್‌ ಆಧಾರದ ಮೇಲೆ ಭೂಮಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಚಿಕ್ಕಮಗಳೂರು ನಗರದಲ್ಲಿ ರಿಂಗ್‌ ರೋಡ್‌ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ಮಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ.
ಸಿ.ಟಿ.ರವಿ,
ಜಿಲ್ಲಾ ಉಸ್ತುವಾರಿ ಸಚಿವರು

ಕರಗಡ ನೀರಾವರಿ ಯೋಜನೆ ಒಂದು ದಶಕ ಕಳೆದರು ಪೂರ್ಣಗೊಂಡಿಲ್ಲ. ಈ ಯೋಜನೆ ಪೂರ್ಣಗೊಂಡಲ್ಲಿ 11ಗ್ರಾಪಂ ವ್ಯಾಪ್ತಿಯ ರೈತರಿಗೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಯೋಜನೆಯನ್ನು ಸರ್ಕಾರ ಪೂರ್ಣಗೊಳಿಸಲಿ.
ಗುರುಶಾಂತಪ್ಪ,
ರೈತ ಮುಖಂಡರು

„ಸಂದೀಪ್‌ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next